ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಪ್ರಮುಖ ಸಾಹಿತಿಗಳಲ್ಲಿ ಎ.ಎನ್.ಕೃಷ್ಣರಾವ್ ಅವರು ಒಬ್ಬರು. ಸಾಮಾನ್ಯವಾಗಿ ಅ.ನ.ಕೃ. ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರಾದ ಅವರು ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಸಾಹಿತಿ. 1908ರ ಮೇ 9ರಂದು ಬೆಂಗಳೂರಿನಲ್ಲಿ ಜನಿಸಿದ ಅವರು, ತಮ್ಮ ಸಾಹಿತ್ಯ ಕೃಷಿಯ ಮೂಲಕ ಕನ್ನಡ ಓದುಗರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದರು. ಕಾದಂಬರಿ, ಕಥೆ, ನಾಟಕ, ಪ್ರಬಂಧ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಅವರು ರಚನೆ ಮಾಡಿದರು.
ಕನ್ನಡದ ಖ್ಯಾತ ಕಾದಂಬರಿಕಾರರೂ, ಅಗ್ರಗಣ್ಯ ಕನ್ನಡ ಹೋರಾಟಗಾರರೂ ಆದ ಅ.ನ.ಕೃಷ್ಣರಾಯರನ್ನು ಅರಿಯದ ಕನ್ನಡಿಗರಿಲ್ಲ. ಪರಭಾಷಿಕರ ಹಾವಳಿಯಿಂದ ತತ್ತರಿಸಿದ ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲೇ ಕನ್ನಡ ಮೂಲೆ ಗುಂಪಾದಂತಹ ಪರಿಸ್ಥಿತಿಯಲ್ಲಿ ಮೊಟ್ಟಮೊದಲು ಕನ್ನಡಪರ ಚಳವಳಿಯನ್ನು ಎಂ. ರಾಮಮೂರ್ತಿ ಮತ್ತಿತರರ ಸಂಗಡ ಕೈಗೆತ್ತಿಕೊಂಡು ಕನ್ನಡ ಸಂಘಟನೆಯನ್ನು ಕಟ್ಟಿ ಹೋರಾಟಕ್ಕಿಳಿದು, 1940-50ರ ದಶಕದಲ್ಲಿ ಬೆಂಗಳೂರಿನಲ್ಲಿ ಮೊದಲ ಸಲ ಕನ್ನಡ ರಾಜ್ಯೋತ್ಸವ ಮೆರವಣಿಗೆಯನ್ನು ಮಾಡಿ, ರಾಮೋತ್ಸವಗಳಲ್ಲಿ ಕನ್ನಡದ ಅವಗಣನೆಯ ವಿರುದ್ಧ ಪ್ರತಿಭಟನೆ ಮಾಡಿ ನಮ್ಮ ಭಾಷೆಯ ಕುರಿತು ಬೆಂಗಳೂರು ಕನ್ನಡಿಗರಲ್ಲಿ ಜಾಗೃತಿಯನ್ನುಂಟು ಮಾಡಿದವರು ಕೃಷ್ಣರಾಯರು. ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. 2026ರ ಜುಲೈ 8ಕ್ಕೆ ಅನಕೃ ನಿಧನರಾಗಿ 55 ವರ್ಷ ಆಗಿರುತ್ತದೆ. ಆದರೆ ಅವರನ್ನು ಕುರಿತು ಒಂದು ಪ್ರತಿಷ್ಠಾನವನ್ನಾಗಲಿ, ಸ್ಮಾರಕವನ್ನಾಗಲಿ ಅವರ ಹೆಸರಲ್ಲಿ ಒಂದು ಪ್ರಶಸ್ತಿ ಸ್ಥಾಪಿಸಬೇಕೆಂದು ೩ ಲಕ್ಷ ಕೋಟಿ ಆಯವ್ಯಯ ಇರುವ ಕನ್ನಡದಲ್ಲೇ ವ್ಯವಹರಿಸುವ ಯಾವುದೇ ಇಲಾಖೆಗೂ ಅನಿಸಿಲ್ಲ. ಹಾಗೂ ಕರ್ನಾಟಕ ಸರಕಾರ ಇಲ್ಲಿಯವರೆಗೂ ಅನುಷ್ಟಾನಗೊಳಿಸಿಲ್ಲ. ಅವರ ಕುರಿತು ಒಂದು ಪಾಠವನ್ನಾದರೂ ಪಠ್ಯಪುಸ್ತಕದಲ್ಲಿ ಸೇರಿಸಬೇಕೆಂದೂ ಜಾತ್ಯಾತೀತ ಜಡಸರ್ಕಾರಗಳಿಗೆ ಇಲ್ಲಿಯವರೆಗೂ ಅನಿಸಿಲ್ಲ.
ಅ.ನ.ಕೃ. ಅವರ ಸಾಹಿತ್ಯದ ಪ್ರಮುಖ ವೈಶಿಷ್ಟ್ಯವೆಂದರೆ ಸರಳವಾದ ಭಾಷೆ, ಜೀವನದ ನೈಜ ಚಿತ್ರಣ ಮತ್ತು ಮಾನವೀಯ ಭಾವನೆಗಳಿಗೆ ನೀಡಿದ ಮಹತ್ವ. ಸಮಾಜದ ವಿವಿಧ ವರ್ಗಗಳ ಬದುಕನ್ನು ಹತ್ತಿರದಿಂದ ಗಮನಿಸಿದ ಅವರು, ತಮ್ಮ ಕೃತಿಗಳಲ್ಲಿ ಸಾಮಾನ್ಯ ಜನರ ನೋವು, ಆಸೆ, ಆಕಾಂಕ್ಷೆ, ಪ್ರೀತಿ, ಸಂಘರ್ಷ ಮತ್ತು ಸಾಮಾಜಿಕ ಅಸಮಾನತೆಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದರು. ಅವರ ಬರವಣಿಗೆಯಲ್ಲಿ ಕೇವಲ ಮನರಂಜನೆ ಮಾತ್ರವಲ್ಲದೆ, ಸಮಾಜದ ವಾಸ್ತವಿಕತೆಗಳನ್ನೂ ಕಾಣಬಹುದು.
ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಅ.ನ.ಕೃ. ಅವರ ಸ್ಥಾನ ವಿಶೇಷವಾದದ್ದು. ಅವರ ಕಾದಂಬರಿಗಳು ಓದುಗರಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದವು. ‘ಸಂಧ್ಯಾರಾಗ’, ‘ಶನಿ ಸಂತಾನ’, ‘ನಟಸಾರ್ವಭೌಮ’, ‘ಜೀವನಯಾತ್ರೆ’ ಮುಂತಾದ ಕೃತಿಗಳ ಮೂಲಕ ಅವರು ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡರು. ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬ ಜೀವನ, ನಗರ ಬದುಕು ಮತ್ತು ವ್ಯಕ್ತಿಯ ಆಂತರಿಕ ಸಂಘರ್ಷಗಳನ್ನು ಚಿತ್ರಿಸುವಲ್ಲಿ ಅವರು ನಿಪುಣರಾಗಿದ್ದರು.
ಅವರ ಬರವಣಿಗೆಯ ಮತ್ತೊಂದು ಪ್ರಮುಖ ಅಂಶವೆಂದರೆ ಸಾಮಾಜಿಕ ಕಳಕಳಿ. ಜಾತಿ, ವರ್ಗ, ಬಡತನ, ಅಸಮಾನತೆ, ಕೌಟುಂಬಿಕ ಸಮಸ್ಯೆಗಳು ಮತ್ತು ನೈತಿಕ ಸಂಘರ್ಷಗಳಂತಹ ವಿಷಯಗಳು ಅವರ ಕೃತಿಗಳಲ್ಲಿ ಪದೇಪದೇ ಕಾಣಿಸಿಕೊಳ್ಳುತ್ತವೆ. ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವುಗಳನ್ನು ಸಾಹಿತ್ಯದ ಮೂಲಕ ಓದುಗರ ಮುಂದಿಟ್ಟರು.
ಅ.ನ.ಕೃ. ಅವರ ಸಾಹಿತ್ಯವನ್ನು ಕೇವಲ ಕಥೆ-ಕಾದಂಬರಿಗಳ ಸರಣಿಯಾಗಿ ನೋಡಲಾಗದು. ಅದು ಒಂದು ಕಾಲಘಟ್ಟದ ಸಾಮಾಜಿಕ ಬದುಕಿನ ದಾಖಲೆಯೂ ಹೌದು. ಬದಲಾಗುತ್ತಿದ್ದ ಬೆಂಗಳೂರಿನ ನಗರ ಜೀವನ, ಮಧ್ಯಮ ವರ್ಗದ ಕುಟುಂಬಗಳ ಮನೋಭಾವ, ಯುವಜನರ ಕನಸುಗಳು ಮತ್ತು ಸಮಾಜದ ಒಳಹೊರಗಿನ ವೈರುಧ್ಯಗಳನ್ನು ಅವರು ಸಾಹಿತ್ಯದ ಮೂಲಕ ದಾಖಲಿಸಿದ್ದಾರೆ.
ಇಂದು ಕನ್ನಡ ಸಾಹಿತ್ಯದಲ್ಲಿ ಹಲವು ಹೊಸ ಪ್ರಯೋಗಗಳು ನಡೆಯುತ್ತಿದ್ದರೂ, ಅ.ನ.ಕೃ. ಅವರ ಕೃತಿಗಳಿಗೆ ಇರುವ ಓದುಗರ ಆಸಕ್ತಿ ಕಡಿಮೆಯಾಗಿಲ್ಲ. ಅವರ ಸರಳ ಭಾಷೆ, ಪರಿಣಾಮಕಾರಿ ಕಥನ ಮತ್ತು ಮಾನವೀಯ ದೃಷ್ಟಿಕೋನ ಇಂದಿನ ಪೀಳಿಗೆಯ ಓದುಗರಿಗೂ ಪ್ರಸ್ತುತವಾಗಿವೆ. ಕನ್ನಡ ಕಾದಂಬರಿ ಸಾಹಿತ್ಯವನ್ನು ಜನಪ್ರಿಯಗೊಳಿಸುವಲ್ಲಿ ಅ.ನ.ಕೃ. ಅವರ ಕೊಡುಗೆ ಅಪಾರ. ಅವರ ಸಾಹಿತ್ಯ ಕನ್ನಡದ ಸಾಂಸ್ಕೃತಿಕ ಪರಂಪರೆಯ ಅಮೂಲ್ಯ ಸಂಪತ್ತಾಗಿ ಮುಂದಿನ ಪೀಳಿಗೆಗಳಿಗೂ ಉಳಿಯಬೇಕಾದರೆ ಸರ್ಕಾರವು ಅದರಲ್ಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇವರ ಸಾಧನೆ, ಸಾಹಿತ್ಯ ಹೆಚ್ಚು ಹೆಚ್ಚು ಪ್ರಚಾರ ನೀಡಿ ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಕವಿ ಗೋಷ್ಠಿಗಳನ್ನು ಆಯೋಜಿಸುವ ಮೂಲಕ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿಯಬಹುದು.
2008ರಲ್ಲಿ ಅನಕೃ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‘ಅನಕೃ ಸಾಹಿತ್ಯ ಶ್ರೇಣಿ’ ಎಂಬ ಸಮಗ್ರ ಸಂಪುಟ ಪ್ರಕಟನೆಯ ಕೆಲಸ ಕೈಗೆತ್ತಿಕೊಂಡು ಮೊದಲ ಮೂರು ವರ್ಷಗಳಲ್ಲಿ 8 ಸಂಪುಟಗಳನ್ನು ಹೊರತಂದಿತು. ನಂತರ ಈ ಜವಾಬ್ದಾರಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಒಪ್ಪಿಸಲಾಯಿತು. ಪುಸ್ತಕ ಪ್ರಾಧಿಕಾರವೂ ಎಂಟು ಸಂಪುಟ ಹೊರತಂದು ಅರ್ಧಕ್ಕೆ ಕೆಲಸ ನಿಲ್ಲಿಸಿಬಿಟ್ಟಿದೆ. ಇನ್ನೂ 8-10 ಸಂಪುಟಗಳು ಬರಬೇಕಿದ್ದರೂ ಕೆಲಸ ಮುಂದುವರಿಯುತ್ತಿಲ್ಲ. ಈ ಪ್ರಕಟಣೆ ಕಾರ್ಯ ಆರಂಭವಾಗಿ ಈಗಾಗಲೇ 18 ವರ್ಷಗಳಾಗಿವೆ. ಮನಸ್ಸು ಮಾಡಿದರೆ ಎರಡು ಮೂರು ವರ್ಷಗಳಲ್ಲಿ ಮುಗಿಸಬಹುದಾದ ಕೆಲಸ. ಸಂಬಂಧಪಟ್ಟ ಇಲಾಖೆಗಳಲ್ಲಿ ಯಾರಿಗೂ ಇದರ ನೆನಪಿಲ್ಲ ಮತ್ತು ಆಸಕ್ತಿಯೂ ಇಲ್ಲ. ಇದು ಕನ್ನಡದ ಅಮರ ಸೇನಾನಿ ಅನಕೃ ಅವರಿಗೆ ಮಾಡುವ ಅಪಚಾರ. ಇಲಾಖೆಯ ಅಧಿಕಾರಿಗಳಿಗೆ ಅದರ ನೆನಪೂ ಇದ್ದಂತೆ ಕಂಡುಬರುತ್ತಿಲ್ಲವೆನ್ನುವದು ದುರ್ದೈವದ ಸಂಗತಿ. ರಮೇಶ ಎಂಬ ಓರ್ವ ಮಹನೀಯರು ‘ಅನಕೃ ಮೇಲಿನ ಅಭಿಮಾನದಿಂದ ಜಯನಗರದ ಯಡಿಯೂರು ಕೆರೆ ಅಂಚಿನಲ್ಲಿ ‘ಅನಕೃ ಕನ್ವೆನ್ಷನ್ ಸೆಂಟರ್’ ಎಂಬ ಒಂದು ಭವನ ನಿರ್ಮಿಸಿದ್ದಾರೆ. ಅನಕೃ ಕುಟುಂಬದವರು ಮಿತ್ರರು ಸೇರಿ ಪ್ರತಿವರ್ಷ ಒಂದು ಪ್ರಶಸ್ತಿ ನೀಡುತ್ತಿದ್ದಾರೆ. ಆದರೆ ಕರ್ನಾಟಕ ಸರಕಾರ ಈ ವಿಷಯದಲ್ಲಿ ತನ್ನ ಕರ್ತವ್ಯ ನಿರ್ವಹಿಸುತ್ತಿಲ್ಲವೆನ್ನುವುದು ಅಪ್ಪಟ ಕನ್ನಡ ಪ್ರತಿಭೆಗೆ ಸೂಕ್ತ ಸ್ಥಾನವನ್ನು ಮತ್ತು ಗೌರವವನ್ನು ನೀಡಿಲ್ಲವೆನ್ನುವುದು ತುಂಬಾ ಬೇಸರದ ವಿಷಯ.
