1855ರಲ್ಲಿ ಸ್ಕಾಟ್ಲೆಂಡ್ನ 18 ವರ್ಷದ ಸಾಹಸಿ ಯುವಕ ರಾಬರ್ಟ್ ಹೆನ್ರಿ ಎಲಿಯಟ್ ಎಂಬಾತ ಕಾಫಿ ಕೃಷಿಯಲ್ಲಿ ಅದೃಷ್ಟ ಪರೀಕ್ಷಿಸುವ ಉದ್ದೇಶದಿಂದ ಏಕಾಂಗಿಯಾಗಿ ಸುಮಾರು 21 ಸಾವಿರ ಕಿ.ಮೀ.ಗಳಷ್ಟು ದೂರದಲ್ಲಿದ್ದ ಭಾರತದ ಸಕಲೇಶಪುರದತ್ತ ಹಡಗಿನಲ್ಲಿ ಪ್ರಯಾಣ ಬೆಳೆಸಿದ. ಮೂರ್ನಾಲ್ಕು ತಿಂಗಳ ಸುದೀರ್ಘ ಸಮುದ್ರ ಪ್ರಯಾಣದ ನಂತರ ಬಾಂಬೆ ತೀರಕ್ಕೆ ಬಂದಿಳಿದ ಎಲಿಯಟ್, ಅಲ್ಲಿಂದ ಉಪ್ಪು ಸಾಗಿಸುವ ಪುಟ್ಟ ದೋಣಿಯೊಂದನ್ನು ಏರಿ ಮಂಗಳೂರನ್ನು ತಲುಪಿದನು. ನಂತರ ಅಲ್ಲಿಂದ ಕಾಲ್ನಡಿಗೆ ಮತ್ತು ಎತ್ತಿನ ಗಾಡಿಗಳ ಮೂಲಕ ಕಡಿದಾದ ಪಶ್ಚಿಮ ಘಟ್ಟಗಳನ್ನು ಹತ್ತಿ, ತಾನು ತರಬೇತಿ ಪಡೆಯಲು ಬಯಸಿದ್ದ ಸಕಲೇಶಪುರದ ಬ್ರಿಟೀಷ್ ಪ್ಲ್ಯಾಂಟರ್ ಫ್ರೆಡೆರಿಕ್ ಗ್ರೀನ್ ಅವರ ಕಾಫಿ ಎಸ್ಟೇಟ್ ಪ್ರವೇಶಿಸಿದ. ೧೮೩೧ ರಲ್ಲಿ ಬ್ರಿಟಿಷ್ ಗವರ್ನರ್ ಜನರಲ್ ಲಾರ್ಡ್ ವಿಲಿಯಂ ಬೆಂಟಿಂಕ್, ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಂದ ಅಧಿಕಾರವನ್ನು ಕಸಿದುಕೊಂಡು ಮೈಸೂರನ್ನು ನೇರವಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತಕ್ಕೆ ಒಳಪಡಿಸಿದ ನಂತರ ನಡೆದ ಬೆಳೆವಣಿಗಳ ಫಲವಾಗಿ ಸರ್ ಮಾರ್ಕ್ ಕಬ್ಬನ್ ಅವರು 1834 ರಲ್ಲಿ ಮೈಸೂರಿನ ಮುಖ್ಯ ಕಮಿಷನರ್ ಆಗಿ ನೇಮಕಗೊಂಡರು. ಕಬ್ಬನ್ ರವರು ಅಧಿಕಾರಕ್ಕೆ ಬರುವ ಮುನ್ನ ಬಾಬಾಬುಡನ್ ಗಿರಿಯ ಸುತ್ತಮುತ್ತ ಸ್ಥಳೀಯರು ತಮ್ಮ ಮನೆಗಳ ಹಿತ್ತಲಿನಲ್ಲಿ, ತೋಟದ ಬದಿಗಳಲ್ಲಿ ಅಥವಾ ಸಣ್ಣ ಗುಂಪುಗಳಲ್ಲಿ ಕಾಫಿ ಗಿಡಗಳನ್ನು ಬೆಳೆಸುತ್ತಿದ್ದರು. ಇದನ್ನು “ಸ್ಥಳೀಯ ತೋಟಗಳು” ಎನ್ನಲಾಗುತ್ತಿತ್ತೇ ಹೊರತು ಇಂತಿಷ್ಟು ಎಕರೆ ಎಂಬ ವ್ಯವಸ್ಥಿತ ವಿಸ್ತೀರ್ಣದ ದಾಖಲೆಗಳು ಇರಲಿಲ್ಲ. ಅಲ್ಲದೇ, ಹತ್ತು ವರ್ಷಗಳ ಹಿಂದೆ 1823 ರಲ್ಲಿ ಮೈಸೂರು ಸಂಸ್ಥಾನದಾದ್ಯಂತ ಬೆಳೆಯುವ ಕಾಫಿಯ ಖರೀದಿ ಮತ್ತು ರಫ್ತಿನ ಸಂಪೂರ್ಣ ಏಕಸ್ವಾಮ್ಯದ ಹಕ್ಕನ್ನು ಪ್ಯಾರಿ ಕಂಪನಿಯ ಜೆ.ಎಚ್. ಜಾಲಿ ಎಂಬ ಬ್ರಿಟಿಷ್ ವ್ಯಾಪಾರಿಗೆ ಮೈಸೂರು ಮಹಾರಾಜರು ಗುತ್ತಿಗೆ ನೀಡಿದ್ದರು. ಇದರಿಂದಾಗಿ, ಸಾಮಾನ್ಯ ಜನರಿಗೆ ಸ್ವತಂತ್ರವಾಗಿ ಕಾಫಿ ತೋಟಗಳನ್ನು ಆರಂಭಿಸಲು ಅಥವಾ ವಿಸ್ತರಿಸಲು ಯಾವುದೇ ಪ್ರೋತ್ಸಾಹ ಸಿಗುತ್ತಿರಲಿಲ್ಲ. ಮಾರ್ಕ್ ಕಬ್ಬನ್ ಅವರು ಹಳೆಯ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ, ಕಾಫಿ ಕೃಷಿ ಮತ್ತು ವ್ಯಾಪಾರವನ್ನು ಮುಕ್ತ ಮಾರುಕಟ್ಟೆಗೆ ತಂದರು. ದಟ್ಟ ಕಾಡುಗಳಲ್ಲಿ ತೋಟಗಳನ್ನು ಅಳೆಯುವುದು ಕಷ್ಟವಾಗಿದ್ದರಿಂದ, ವಿಸ್ತೀರ್ಣದ ಬದಲಿಗೆ ಕಾಫಿಯ ತೂಕದ ಆಧಾರದ ಮೇಲೆ ಬೆಳೆಗಾರರಿಗೆ ಹೊರೆಯಾಗದ ಸಾಧಾರಣ ‘ಹಲಾತ್’ ಸುಂಕವನ್ನು ನಿಗದಿಪಡಿಸಿದರು. ಇದರಿಂದಾಗಿ ಕಾಫಿ ಕಳ್ಳಸಾಗಣೆ ತಡೆಗಟ್ಟಲ್ಪಟ್ಟು, ಸಣ್ಣ ರೈತರಿಗೂ ತೆರಿಗೆಯ ಹೊರೆ ತಗ್ಗಿತು.
ಕಬ್ಬನ್ ಅವರ ಈ ಪ್ರಗತಿಪರ ತೆರಿಗೆ ನೀತಿಯಿಂದಾಗಿ ಕರ್ನಾಟಕದ ಮಲೆನಾಡು ಭಾಗದಲ್ಲಿ ಕಾಫಿ ಕ್ರಾಂತಿಯೇ ಉಂಟಾಯಿತು. ಪ್ಯಾರಿ ಕಂಪನಿಯ ಏಕಸ್ವಾಮ್ಯ ರದ್ದುಗೊಂಡ ಪರಿಣಾಮವಾಗಿ, ಮುಂದೆ ಥಾಮಸ್ ಕ್ಯಾನನ್ (1840) ಚಿಕ್ಕಮಗಳೂರಿನ ಮೈಲಿ ಮನೆಯಲ್ಲಿ ಸುಮಾರು 500 ಎಕರೆ ಜಾಗದಲ್ಲಿ ಹಾಗೂ ಫ್ರೆಡೆರಿಕ್ ಗ್ರೀನ್ (1843) ಹಾಸನ ಜಿಲ್ಲೆಯ ಸಕಲೇಶಪುರದ ಇಳಿಜಾರು ಪ್ರದೇಶದಲ್ಲಿ ಮುಕ್ತವಾಗಿ ತಮ್ಮ ಕಾಫಿ ಕೃಷಿಯನ್ನು ಪ್ರಾರಂಭಿಸಿದರು. ಇವರು ಇಲ್ಲಿ ಬೆಳೆದ ಕಾಫಿಯನ್ನು ಯುರೋಪಿನ ಮಾರುಕಟ್ಟೆಗೆ ನೇರವಾಗಿ ರಫ್ತು ಮಾಡುವ ಮೂಲಕ ಅಪಾರ ಖ್ಯಾತಿ ಮತ್ತು ಸಂಪತ್ತನ್ನು ಗಳಿಸಿದರು. ಈ ಇಬ್ಬರು ಆರಂಭಿಕ ಬೆಳೆಗಾರರ ಯಶಸ್ಸಿನಿಂದ ಸ್ಫೂರ್ತಿ ಪಡೆದು ಭಾರತದತ್ತ ಮುಖ ಮಾಡಿದ ರಾಬರ್ಟ್ ಹೆನ್ರಿ ಎಲಿಯಟ್, ಕರ್ನಾಟಕದ ಕಾಫಿ ಉದ್ಯಮದ ಇತಿಹಾಸದಲ್ಲಿ ಪ್ರಮುಖ ಯುರೋಪಿಯನ್ ಪ್ಲ್ಯಾಂಟರ್ ಆಗಿ ಅಪಾರ ಕೊಡುಗೆ ನೀಡಿದರು. 1855ರಲ್ಲಿ ಒಂದು ವರ್ಷ ಕಾಲ ಫ್ರೆಡೆರಿಕ್ ಗ್ರೀನ್ ಅವರ ಬಳಿ ಕಾಫಿ ಕೃಷಿಯ ಪ್ರಾಯೋಗಿಕ ತರಬೇತಿ ಪಡೆದ ಎಲಿಯಟ್, ಇಲ್ಲಿನ ಮಣ್ಣಿನ ಗುಣ ಹಾಗೂ ಸ್ಥಳೀಯ ಹವಾಮಾನವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರು. ಮರು ವರ್ಷವೇ, ಅಂದರೆ 1856ರಲ್ಲಿ (ತಮ್ಮ ಕೇವಲ ೧೯ನೇ ವಯಸ್ಸಿನಲ್ಲಿ), ಸಕಲೇಶಪುರದ ಹಾನ್ಬಾಳ್ ಪ್ರದೇಶದ ‘ಬಾರ್ಟ್ಚಿನ್ಹಳ್ಳ’ ಎಂಬಲ್ಲಿ ಸ್ವಂತ ಕಾಫಿ ಎಸ್ಟೇಟ್ ಸ್ಥಾಪಿಸುವ ಮೂಲಕ ಅವರು ಸಕಲೇಶಪುರ ಭಾಗದ ಎರಡನೇ ಯುರೋಪಿಯನ್ ಪ್ಲ್ಯಾಂಟರ್ ಆಗಿ ಗುರುತಿಸಿಕೊಂಡರು.! ಹಾನ್ಬಾಳ್ ಪ್ರಾಂತ್ಯದ ಈ ಹೊಸ ಎಸ್ಟೇಟ್ನಲ್ಲಿ ಎಲಿಯಟ್ ಕೇವಲ ಉದ್ಯಮಿಯಾಗಿ ಮುನ್ನಡೆಯಲಿಲ್ಲ; ಬದಲಿಗೆ ಒಬ್ಬ ಸಂಶೋಧಕನಾಗಿ, ಕಾಫಿ ಬೆಳೆಗಾರರಿಗೆ ಮಾರ್ಗದರ್ಶನ ಮಾಡುವ ನಿಟ್ಟಿನಲ್ಲಿ ಕೃಷಿ ಪ್ರಯೋಗಗಳಲ್ಲಿ ತೊಡಗಿಸಿಕೊಂಡರು. ಆರಂಭಿಕ ದಿನಗಳಲ್ಲಿ ಮಲೆನಾಡಿನ ಕಠಿಣ ಹವಾಮಾನ, ಕಾಡು ಪ್ರಾಣಿಗಳ ಕಾಟ ಮತ್ತು ಸಾರಿಗೆ ಸಂಪರ್ಕದ ಕೊರತೆಗಳಿದ್ದರೂ ಧೃತಿಗೆಡದ ಅವರು, ತಮ್ಮ ಕಠಿಣ ಪರಿಶ್ರಮದಿಂದ ತೋಟವನ್ನು ಲಾಭದಾಯಕ ಹಳಿಗೆ ತಂದರು. ಬಾರ್ಟ್ಚಿನ್ಹಳ್ಳದ ಯಶಸ್ಸಿನಿಂದ ಪ್ರೇರಿತರಾದ ಅವರು, ನಂತರದ ದಶಕಗಳಲ್ಲಿ ತಮ್ಮ ಕಾಫಿ ಸಾಮ್ರಾಜ್ಯವನ್ನು ಮಂಜರಾಬಾದ್ನಿಂದ ಚಿಕ್ಕಮಗಳೂರಿನ ಬಾಬಾಬುಡನ್ಗಿರಿ ಬೆಟ್ಟಗಳ ತಪ್ಪಲಿನವರೆಗೂ ವಿಸ್ತರಿಸುತ್ತಾ ಹೋದರು. ಇವರ ವ್ಯವಸ್ಥಿತ ಬೇಸಾಯ ಕ್ರಮದಿಂದಾಗಿ ಮೈಸೂರು ಪ್ರಾಂತ್ಯದ ಕಾಫಿ ಅತ್ಯುನ್ನತ ಗುಣಮಟ್ಟವನ್ನು ಹೊಂದಿತ್ತು. ಇದು ಲಂಡನ್ ಮಾರುಕಟ್ಟೆಯಲ್ಲಿ “ಮೈಸೂರು ಕಾಫಿ” (ಒಥಿsoಡಿe ಅoಜಿಜಿee) ಎಂಬ ವಿಶಿಷ್ಟ ಬ್ರಾಂಡ್ ಸೃಷ್ಟಿಸಲು ಕಾರಣವಾಯಿತು. ಕಾಫಿ ಬೆಳೆಯುವ ಸಲುವಾಗಿ ಅರಣ್ಯವನ್ನು ಸಂಪೂರ್ಣವಾಗಿ ನಾಶ ಮಾಡುವ ಅಂದಿನ ಪಾಶ್ಚಿಮಾತ್ಯ ಪದ್ಧತಿಯನ್ನು ಎಲಿಯಟ್ ತೀವ್ರವಾಗಿ ವಿರೋಧಿಸಿದರು. ಮಲೆನಾಡಿನ ದಟ್ಟ ಕಾಡುಗಳ ಬೃಹತ್ ಮರಗಳನ್ನು ಹಾಗೆಯೇ ಉಳಿಸಿಕೊಂಡು, ಅವುಗಳ ನೈಸರ್ಗಿಕ ನೆರಳಿನಲ್ಲೇ ಕಾಫಿ ಗಿಡಗಳನ್ನು ಬೆಳೆಸುವ ನೂತನ ವೈಜ್ಞಾನಿಕ ವಿಧಾನವನ್ನು ಅವರು ಜಾರಿಗೆ ತಂದರು. ಈ ಪರಿಸರಸ್ನೇಹಿ ಮಾದರಿಯು ಪಶ್ಚಿಮ ಘಟ್ಟಗಳ ಸೂಕ್ಷ್ಮ ಮಣ್ಣಿನ ಸವೆತವನ್ನು ತಡೆದಿದ್ದಲ್ಲದೆ, ಕಾಫಿ ಗಿಡಗಳಿಗೆ ತಗಲುತ್ತಿದ್ದ ಕೀಟಬಾಧೆಯನ್ನು ನೈಸರ್ಗಿಕವಾಗಿಯೇ ನಿಯಂತ್ರಿಸಿತು. ಇಂದು ಇಡೀ ಜಗತ್ತಿನಲ್ಲಿ ಭಾರತದ ಕಾಫಿ ‘ಪರಿಸರಸ್ನೇಹಿ ಮತ್ತು ನೆರಳಿನ ಕಾಫಿ’ ಎಂದು ಮನ್ನಣೆ ಪಡೆಯಲು ಅಂದಿನ ಇವರ ದೂರದೃಷ್ಟಿಯೇ ಪ್ರಮುಖ ಕಾರಣವಾಯಿತು. ಎಲಿಯಟ್ ಕೇವಲ ಒಬ್ಬ ಮಾಲೀಕನಾಗಿ ಉಳಿಯದೆ, ತಮ್ಮ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯ ಮಲೆನಾಡಿನ ಕಾರ್ಮಿಕರೊಂದಿಗೆ ಅತ್ಯಂತ ಆಪ್ತ ಹಾಗೂ ಗೌರವಾನ್ವಿತ ಸಂಬಂಧವನ್ನು ಹೊಂದಿದ್ದರು. ಕಾರ್ಮಿಕರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗೆ ಒತ್ತು ನೀಡಿದ ಅವರು, ಸ್ಥಳೀಯ ಸಂಸ್ಕೃತಿ ಮತ್ತು ಭಾಷೆಯನ್ನು ಗೌರವಿಸುತ್ತಿದ್ದರು. ಮೈಸೂರು ಸಂಸ್ಥಾನದ ರಾಜಕೀಯ ಮತ್ತು ಆಡಳಿತ ಪ್ರಕ್ರಿಯೆಯಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. 1881ರಲ್ಲಿ ಮೈಸೂರು ಮಹಾರಾಜರಾದ ಹತ್ತನೇ ಚಾಮರಾಜ ಒಡೆಯರ್ ಅವರು ಭಾರತದಲ್ಲೇ ಮೊದಲ ಬಾರಿಗೆ ಪ್ರಜಾಪ್ರಭುತ್ವ ಮಾದರಿಯ ‘ಮೈಸೂರು ಜನಪ್ರತಿನಿಧಿ ಸಭೆ ಆರಂಭಿಸಿದಾಗ, ಎಲಿಯಟ್ ಅವರು ಮಂಜರಾಬಾದ್ ಪ್ರಾಂತ್ಯದ ಪ್ಲ್ಯಾಂಟರ್ಗಳ ಪ್ರತಿನಿಧಿಯಾಗಿ ಆಯ್ಕೆಯಾದರು. ಆ ಅವಧಿಯಲ್ಲಿ ಅವರು ಮಲೆನಾಡಿನ ಕಡಿದಾದ ಘಟ್ಟಗಳಲ್ಲಿ ವ್ಯವಸ್ಥಿತ ರಸ್ತೆಗಳ ನಿರ್ಮಾಣ, ಮಂಗಳೂರು ಬಂದರಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಹಾಗೂ ಸಾರಿಗೆ ಮಾರ್ಗಗಳು ಮತ್ತು ಮೂಲಸೌಕರ್ಯ ಒದಗಿಸುವಂತೆ ಸಭೆಯಲ್ಲಿ ನಿರಂತರವಾಗಿ ಒತ್ತಾಯಿಸುತ್ತಿದ್ದರು. ತೋಟದ ಮಾಲೀಕರ ಹಿತರಕ್ಷಣೆಯ ಜೊತೆಗೆ, ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯ ಕಾರ್ಮಿಕರ ಆರೋಗ್ಯ ಸುಧಾರಣೆ ಹಾಗೂ ಮಲೇರಿಯಾ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು. ತಮ್ಮ ನಾಲ್ಕು ದಶಕಗಳ ಸುದೀರ್ಘ ಮಲೆನಾಡಿನ ಅನುಭವಗಳನ್ನು ಎಲಿಯಟ್ ಜಗತ್ತಿಗೆ ಪುಸ್ತಕಗಳ ರೂಪದಲ್ಲಿ ನೀಡಿದ್ದಾರೆ. 1871ರಲ್ಲಿ ಲಂಡನ್ನಲ್ಲಿ ಅವರ ಮೊದಲ ಪುಸ್ತಕ “The Experiences of a Planter in the Jungles of Mysore” ಪ್ರಕಟವಾಯಿತು, ಇದು ಭಾರತಕ್ಕೆ ಬರುವ ಹೊಸ ಪ್ಲ್ಯಾಂಟರ್ಗಳಿಗೆ ದಿಕ್ಸೂಚಿಯಾಯಿತು. ತದನಂತರ, 1898ರಲ್ಲಿ ಅವರ ಶ್ರೇಷ್ಠ ಕೃತಿಯಾದ “Gold, Sport, and Coffee Planting in Mysore” ಹೊರಬಂದಿತು. ಈ ಪುಸ್ತಕವು ಕೇವಲ ಕಾಫಿ ಬೇಸಾಯದ ತಾಂತ್ರಿಕತೆಯನ್ನು ಮಾತ್ರವಲ್ಲದೆ, 19ನೇ ಶತಮಾನದ ಮಲೆನಾಡಿನ ಇತಿಹಾಸ, ಪರಿಸರ, ವನ್ಯಜೀವಿಗಳ ಬೇಟೆ ಮತ್ತು ಸ್ಥಳೀಯ ಜನಜೀವನವನ್ನು ಅತ್ಯಂತ ಸುಂದರವಾಗಿ ದಾಖಲಿಸಿದ ಅಮೂಲ್ಯ ಆಧಾರ ಗ್ರಂಥವಾಗಿದೆ. ಇಂದಿಗೂ ಕರ್ನಾಟಕದ ಕಾಫಿ ಇತಿಹಾಸವನ್ನು ಅಧ್ಯಯನ ಮಾಡಲು ಇವರ ಬರಹಗಳೇ ಮುಖ್ಯ ಮೂಲಗಳಾಗಿವೆ.
ಇವರು ಬಂದಾಗ ಮೈಸೂರು ಪ್ರಾಂತ್ಯದಲ್ಲಿ ಕೇವಲ 5000 ಎಕರೆಗಳಷ್ಟು ಮಾತ್ರ ಇದ್ದ ಕಾಫಿ ತೋಟಗಳು ಇವರು ಮರಳುವ ವೇಳೆಗೆ ಸುಮಾರು 1,50,000 ಎಕರೆ ವಿಸ್ತರಿಸಿದ್ದವು. 1898ರ ನಂತರ ಸ್ಕಾಟ್ಲ್ಯಾಂಡ್ಗೆ ಮರಳಿದ ಎಲಿಯಟ್, ತಮ್ಮ ಜಮೀನಿನಲ್ಲಿ “ಕ್ಲಿಫ್ಟನ್ ಪಾರ್ಕ್ ಕೃಷಿ ಪದ್ಧತಿ” (Clifton Park System) ಯನ್ನು ರೂಪಿಸಿದರು. ಕೃತಕ ಗೊಬ್ಬರಗಳಿಲ್ಲದೆ, ಕೇವಲ ಆಳವಾದ ಬೇರುಬಿಡುವ ಹುಲ್ಲು ಮತ್ತು ಸಸ್ಯಗಳನ್ನು ಬಳಸಿ ಮಣ್ಣಿನ ಶಕ್ತಿ ಹೆಚ್ಚಿಸುವ ಇವರ ಈ ಮಾದರಿಯನ್ನು ಇಂದಿಗೂ ಜಾಗತಿಕ ಸಾವಯವ ಕೃಷಿಯ (Organic Farming) ಅಡಿಪಾಯ ಎಂದು ಪರಿಗಣಿಸಲಾಗುತ್ತದೆ. 1914ರಲ್ಲಿ ಸ್ಕಾಟ್ಲ್ಯಾಂಡ್ನಲ್ಲಿ ನಿಧನರಾದ ರಾಬರ್ಟ್ ಹೆನ್ರಿ ಎಲಿಯಟ್, ಕರ್ನಾಟಕದ ಮಣ್ಣಿನಲ್ಲಿ ಬಿಟ್ಟುಹೋದ ಕಾಫಿಯ ಸುವಾಸನೆ ಇಂದಿಗೂ ಅಮರವಾಗಿದೆ. ಪರಿಸರವನ್ನು ನಾಶಮಾಡದೆ ಉದ್ಯಮವನ್ನು ಹೇಗೆ ಬೆಳೆಸಬಹುದು ಎಂಬುದನ್ನು 150 ವರ್ಷಗಳ ಹಿಂದೆಯೇ ತೋರಿಸಿಕೊಟ್ಟ ಈ ಸಾಹಸಿ, ಕಾಫಿ ಕೃಷಿ ಇತಿಹಾಸದ ಸುವರ್ಣ ಪುಟಗಳಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.
