ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಫ್ಯಾಬ್ ಸಿಟಿ ವಿಶೇಷ ಆರ್ಥಿಕ ವಲಯ (SEZ) ವ್ಯಾಪ್ತಿಯಲ್ಲಿರುವ SEM India Fab Private Limited ಕಂಪನಿಗೆ ಸರ್ಕಾರ ನೀಡಿದ್ದ ಸುಮಾರು ೧೦೦ ಎಕರೆ ಭೂಮಿಯನ್ನು ಮರಳಿ ಸ್ವಾಧೀನಪಡಿಸಿಕೊಳ್ಳುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬೆಂಗಳೂರು ವಲಯ ಎಸ್ಬಿಐ ಕಛೇರಿಯು ಹೈದರಾಬಾದ್ನಲ್ಲಿರುವ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ವೇಳೆ ನ್ಯಾಯಾಲಯ ಹಲವು ಕಠಿಣ ಪ್ರಶ್ನೆಗಳನ್ನು ಎತ್ತಿತು.
“₹200 ಕೋಟಿ ಯೋಜನೆಗೆ ₹500 ಕೋಟಿ ಸಾಲವನ್ನು ಹೇಗೆ ಮಂಜೂರು ಮಾಡಿದರು? ಆ ಸಾಲವನ್ನು ಅನುಮೋದಿಸಿದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿದ್ದೀರಾ?” ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಬ್ಯಾಂಕ್ ಪರ ವಕೀಲರು ಮೂಲ ಸಾಲದ ಮೊತ್ತ ಕಡಿಮೆಯಿದ್ದು, ಬಡ್ಡಿ ಹಾಗೂ ಇತರ ಬಾಕಿಗಳಿಂದ ಒಟ್ಟು ಮೊತ್ತ ಹೆಚ್ಚಾಗಿದೆ ಎಂದು ತಿಳಿಸಿದರು. ಆದರೆ ನ್ಯಾಯಾಲಯದ ಪ್ರಕಾರ ಬಾಕಿ ಮೊತ್ತವು ₹624 ಕೋಟಿಗೂ ತಲುಪಿರುವುದು ದಾಖಲೆಗಳಿಂದ ಗೋಚರಿಸುತ್ತಿದೆ.
ಕೇವಲ ₹೨೦೦ ಕೋಟಿ ಮೌಲ್ಯದ ಯೋಜನೆಗೆ ₹500 ಕೋಟಿಗೂ ಹೆಚ್ಚು ಸಾಲವನ್ನು ಹೇಗೆ ಮಂಜೂರು ಮಾಡಲಾಯಿತು ಎಂದು ತೆಲಂಗಾಣ ಹೈಕೋರ್ಟ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SEZ) ಅಧಿಕಾರಿಗಳನ್ನು ತೀವ್ರವಾಗಿ ಪ್ರಶ್ನಿಸಿದೆ. ಈ ಸಾಲ ಮಂಜೂರಾತಿಯಲ್ಲಿ ಯಾವುದೇ ಅಕ್ರಮಗಳು ಅಥವಾ ನಿರ್ಲಕ್ಷ್ಯ ನಡೆದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದೀರಾ ಎಂದು ಕೂಡ ನ್ಯಾಯಾಲಯ ಪ್ರಶ್ನಿಸಿದೆ.
ಸರ್ಕಾರ ಮರಳಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದ ಭೂಮಿಯನ್ನು ಹಾಗೂ ಹಿಂದೆ ನ್ಯಾಯಾಲಯದ ತಡೆ ಆದೇಶ (ಸ್ಟೇ) ಇದ್ದ ಭೂಮಿಯನ್ನು ಅಡಮಾನವಾಗಿ ಪಡೆದು ಬ್ಯಾಂಕ್ ಸಾಲ ನೀಡಿರುವ ಬಗ್ಗೆ ಕೂಡ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. “ಜನರು ನಂಬಿಕೆಯಿಂದ ಬ್ಯಾಂಕ್ಗಳಲ್ಲಿ ಠೇವಣಿ ಇಡುವ ಹಣವನ್ನು ಈ ರೀತಿ ನಿರ್ಲಕ್ಷ್ಯವಾಗಿ ಸಾಲವಾಗಿ ನೀಡಲಾಗುತ್ತಿದೆ. ಕೈಗಾರಿಕೆ ಸ್ಥಾಪನೆ ಹೆಸರಿನಲ್ಲಿ ಸರ್ಕಾರದ ಭೂಮಿ ಪಡೆದು, ಅದನ್ನೇ ಅಡಮಾನ ಇಟ್ಟು ಸಾಲ ಪಡೆದು ನಂತರ ಯೋಜನೆಗಳನ್ನು ಕೈಬಿಡುವ ಪ್ರವೃತ್ತಿ ಹೆಚ್ಚುತ್ತಿದೆ” ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.
ಈ ಪ್ರಕರಣದಲ್ಲಿ ಸಿಬಿಐಗೆ ದೂರು ನೀಡಲಾಗಿದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದ್ದು, ಅಗತ್ಯವಿದ್ದರೆ ಸ್ವಯಂಪ್ರೇರಿತವಾಗಿ (Suo Motu) ಪ್ರಕರಣ ದಾಖಲಿಸಿ ಸಿಬಿಐ ತನಿಖೆಗೆ ಆದೇಶಿಸುವುದಾಗಿ ಎಚ್ಚರಿಕೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ ೨೫ಕ್ಕೆ ಮುಂದೂಡಲಾಗಿದೆ.
ಈ ಪ್ರಕರಣವು ಕೇವಲ ಒಂದು ಕಂಪನಿಯ ಸಾಲ ವಿವಾದವಲ್ಲ; ಸಾರ್ವಜನಿಕ ಹಣದ ಸುರಕ್ಷತೆ, ಬ್ಯಾಂಕುಗಳ ಸಾಲ ಮಂಜೂರಾತಿ ಪ್ರಕ್ರಿಯೆ ಮತ್ತು ಕೈಗಾರಿಕಾ ಭೂ ಹಂಚಿಕೆ ವ್ಯವಸ್ಥೆಯ ಪಾರದರ್ಶಕತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಈ ಬಗ್ಗೆ ಅಂತಿಮವಾಗಿ ನ್ಯಾಯಾಲಯದ ತೀರ್ಪು ಏನು ಬರಬಹುದು ಎಂದು ಕಾದು ನೋಡಬೇಕಿದೆ.
