ವಿದ್ಯಾರ್ಥಿಗಳ ಜಗಳವನ್ನು ತಡೆಯುವ ವೇಳೆ ಬೆತ್ತ ಬಳಸಿದ್ದ ಕಾರಣ ಎರಡು ದಿನ ಪೊಲೀಸ್ ಠಾಣೆಯ ವರಾಂಡದಲ್ಲಿ ಕಳೆಯಬೇಕಾಗಿ ಬಂದಿದ್ದು ನಂತರ 15,000 ಪರಿಹಾರವನ್ನೂ ನೀಡಬೇಕಾದ ವಯನಾಡಿನ ವಿಜಯ ಹೈಯರ್ ಸೆಕೆಂಡರಿ ಶಾಲೆಯ ಒಬ್ಬ ಶಿಕ್ಷಕರ ಮನದಾಳದ ಬರಹ.
ಇಷ್ಟು ವರ್ಷ ಶಿಕ್ಷಕನಾಗಿ ಕೆಲಸ ಮಾಡಿದರೂ ಸಿಗದ ಅರಿವು ಈ ಎರಡು ದಿನಗಳಲ್ಲಿ ಸಿಕ್ಕಿತು. ಅದಕ್ಕಾಗಿ ವಿದ್ಯಾರ್ಥಿಗಳಿಗೂ, ಪೋಷಕರಿಗೂ, ರಾಜಕೀಯ ನಾಯಕರಿಗೂ ಧನ್ಯವಾದಗಳು. ಇಂದಿನ ಕಾಲದಲ್ಲಿ ಶಿಕ್ಷಕನಿಗೆ ಅಧಿಕಾರವೂ ಇಲ್ಲ, ಹಕ್ಕೂ ಇಲ್ಲ; ಹೊಣೆಗಾರಿಕೆ ಮಾತ್ರ ಇದೆ ಎಂಬುದು ನನಗೆ ತಿಳಿಯಿತು. ಇನ್ನು ಮುಂದೆ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿದರೂ, ತಪ್ಪು ದಾರಿಯಲ್ಲಿ ನಡೆದರೂ, ಓದಿದರೂ ಓದದಿದ್ದರೂ, ನಕಲು ಮಾಡಿದರೂ, ಶಾಲೆಯ ಆಸ್ತಿಯನ್ನು ಹಾಳು ಮಾಡಿದರೂ, ಮಾದಕ ವಸ್ತು ಸೇವಿಸಿದರೂ, ಏನೇ ಮಾಡಿದರೂ ಕಣ್ಣು-ಕಿವಿ ಮುಚ್ಚಿಕೊಂಡು ಸಂಬಳ ಪಡೆದು ಮನೆಗೆ ಹೋದರೆ ಸಾಕು ಎಂಬ ಪಾಠ ಈ ಸಮಾಜವೇ ಕಲಿಸಿತು. ನಾನು ಕೊಟ್ಟ ಸಣ್ಣ ಶಿಕ್ಷೆಯನ್ನು ಪ್ರತಿಯೊಬ್ಬರೂ ಗಂಟೆಗೊಮ್ಮೆ ದೊಡ್ಡದಾಗಿ ಹೇಳುತ್ತಾ ಅದನ್ನು ಭೀಕರ ಘಟನೆ ಎಂಬಂತೆ ಚಿತ್ರಿಸುವುದನ್ನೂ ನೋಡಿದೆ. ಇನ್ನು ಮುಂದೆ ಹೊಣೆಗಾರಿಕೆಯ ಒತ್ತಡವಿಲ್ಲದೆ, ಪಾಠ ಮುಗಿಸಿ ಮನೆಗೆ ಹೋಗುವ ಶಿಕ್ಷಕನಾಗಿರುವುದೇ ಉತ್ತಮವೆಂದು ಭಾವಿಸುತ್ತಿದ್ದೇನೆ.
ಆದ್ದರಿಂದ, ಇನ್ನು ಮುಂದೆ ನಾನು ಯಾರನ್ನೂ ತಿದ್ದಲು ಹೋಗುವುದಿಲ್ಲ ಎಂದು ಸಮಾಜಕ್ಕೂ ನನ್ನ ಪ್ರಿಯ ವಿದ್ಯಾರ್ಥಿಗಳಿಗೂ ಘೋಷಿಸುತ್ತೇನೆ. ಆದರಿಂದ ಒಂದು ರೀತಿಯ ನೆಮ್ಮದಿ ಸಿಕ್ಕಿದೆ. ಶಾಲೆಯ ಮಕ್ಕಳನ್ನು ತಮ್ಮ ಮಕ್ಕಳಂತೆ ಭಾವಿಸಿ, ಅವರನ್ನು ಒಳ್ಳೆಯ ದಾರಿಗೆ ನಡೆಸಲು ಪ್ರಯತ್ನಿಸಿದ ಒಬ್ಬ ಪ್ರಾಮಾಣಿಕ ಪ್ರಾಂಶುಪಾಲರನ್ನು ಬಲಿಕೊಟ್ಟ ವಿದ್ಯಾರ್ಥಿಗಳಿಗೂ ಪೋಷಕರಿಗೂ ನಾವು ಶಿಕ್ಷಕರು ತಪ್ಪು ಮಾಡಿದ್ದೇವೆ. ನಿಮ್ಮನ್ನು ನಮ್ಮ ಮಕ್ಕಳಂತೆ ಕಂಡದ್ದು ತಪ್ಪು, ನಿಮ್ಮನ್ನು ತಿದ್ದಲು ಪ್ರಯತ್ನಿಸಿದ್ದು ಇನ್ನೂ ದೊಡ್ಡ ತಪ್ಪು. ಗಂಡು-ಹೆಣ್ಣು ಮಕ್ಕಳು ತರಗತಿಯಲ್ಲಿ ಮದ್ಯಪಾನ ಮಾಡುವುದು, ಕೆಟ್ಟ ಸ್ನೇಹಗಳತ್ತ ಹೋಗುವುದು ಸರಿಯಲ್ಲ ಎಂದು ತಿಳಿಸಿ, ಅವರನ್ನು ಸರಿಪಡಿಸಲು ಕ್ರಮ ಕೈಗೊಂಡದ್ದು ಮಕ್ಕಳ ಹಕ್ಕು ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಎಂದು ನಾವು ಅರ್ಥ ಮಾಡಿಕೊಳ್ಳಲಿಲ್ಲ. ಅದಕ್ಕಾಗಿ ಕ್ಷಮಿಸಿ, ಮಕ್ಕಳೇ… ಕ್ಷಮಿಸಿ. ಒಂದು ವಿಷಯ ನೆನಪಿಟ್ಟುಕೊಳ್ಳಿ; ನಿಮ್ಮ ಏಳು ತಲೆಮಾರುಗಳ ಒಳಿತಿಗಾಗಿ ದೇವರನ್ನು ಪ್ರಾರ್ಥಿಸಿ, ದೇವರು ನಿಮ್ಮನ್ನು ಕ್ಷಮಿಸಲಿ. ಕೊನೆಯದಾಗಿ ನಾನು ಹೇಳುವುದೇನೆಂದರೆ ಈ ಸಂದೇಶವನ್ನು ಒಳ್ಳೆಯ ಪೋಷಕರಿಗೆ ತಲುಪಿಸಿ. ಕನಿಷ್ಠ ಅವರಲ್ಲಾದರೂ ಧರ್ಮಬುದ್ಧಿ ಉಳಿಯಲಿ. ಇಂತಹ ವಿವೇಕವಿಲ್ಲದ ಕಾನೂನುಗಳನ್ನೇ ಮೊದಲು ಬದಲಾಯಿಸಬೇಕಾದ ಅನಿವಾರ್ಯತೆ ಇದೆ. ಈ ಬರಹವನ್ನು ಸಾಮಾನ್ಯ ಪೋಸ್ಟ್ ಎಂದು ನಿರ್ಲಕ್ಷಿಸಬೇಡಿ. ಸ್ವಲ್ಪ ಸಮಯ ತೆಗೆದುಕೊಂಡು ಓದಿ, ಯೋಚಿಸಿ. ಇದು ಒಬ್ಬ ಶಿಕ್ಷಕರ ಮನಸ್ಸಿನ ನೋವಿನಿಂದ ಹೊರಬಂದ ಕಳಕಳಿಯ ಮಾತು…
ನಮ್ಮಲ್ಲಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬಾರಿ ಜಪಾನ್ ದೇಶದಲ್ಲಿ ಮಕ್ಕಳಿಗೆ ಪ್ರಾಥಮಿಕ ವಿದ್ಯಾಭ್ಯಾಸ ಕಲಿಸುವ ವಿಧಾನದ ವಿಡಿಯೋಗಳನ್ನು ನೋಡಿದ್ದೇವೆ. ಜಪಾನ್ ದೇಶದಲ್ಲಿ ಮಕ್ಕಳಿಗೆ ಪ್ರಾಥಮಿಕ ವಿದ್ಯಾಭ್ಯಾಸದ ಹಂತದಲ್ಲಿಯೇ ಸ್ವಯಂಶಿಸ್ತು ಕಲಿಸಲಾಗುತ್ತದೆ. ಶಾಲೆಯ ಶೌಚಾಲಯವನ್ನು ಮಕ್ಕಳೇ ಸ್ವಚ್ಛಗೊಳಿಸಬೇಕಾಗುತ್ತದೆ. ಶಾಲೆಯ ಆವರಣವನ್ನು ಮಕ್ಕಳೇ ಗುಡಿಸಿ ಸ್ವಚ್ಛವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಶಾಲೆಯ ಸುತ್ತಮುತ್ತಲು ಗಿಡಗಳ ಸಂರಕ್ಷಣೆಯನ್ನು ಮಕ್ಕಳ ಕೈಯಲ್ಲಿಯೇ ಮಾಡಿಸಲಾಗುತ್ತದೆ. ಇದರಿಂದ ಮಕ್ಕಳಲ್ಲಿ ಚಿಕ್ಕವಯಸ್ಸಿನಲ್ಲಿಯೇ ಸ್ವಯಂ ನೈತಿಕತೆ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮತ್ತು ಸ್ವಚ್ಛತೆಯ ಪಾಠ ಮೈಗೂಡಿಸಿಕೊಂಡಂತಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಯಾವುದಾದರೂ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಶಾಲಾ ಆವರಣವನ್ನು ಸ್ವಚ್ಛಗೊಳಿಸಿದ್ದನ್ನು ಕಂಡರೆ ಕೂಡಲೇ ಅದನ್ನು ವಿಡಿಯೋ ಮಾಡಿ ಜಾತಿ ಹಾಗೂ ಬಣ್ಣದ ರೂಪ ನೀಡಿ ಶಾಲೆಯ ಮುಖ್ಯೋಪಾಧ್ಯಾಯನನ್ನು ಸಸ್ಪೆಂಡ್ ಮಾಡಲಾಗುತ್ತದೆ. ನಮ್ಮ ದೇಶದ ವಿದ್ಯಾಭ್ಯಾಸ ಕ್ಷಮ ಎಂದಿಗೂ ಸರಿ ಹೋಗುವುದಿಲ್ಲ ಬಿಡಿ. ಬಸ್ಸುಗಳಲ್ಲಿ ಹಿರಿಯ ನಾಗರಿಕರು ಹತ್ತಿದಾಗ ಅವರಿಗೆ ಮೀಸಲಿಟ್ಟ ಆಸನಗಳನ್ನು ಬಿಟ್ಟುಕೊಡಬೇಕು ಎನ್ನುವ ಕನಿಷ್ಠ ಸಂಸ್ಕಾರವನ್ನು ನಮ್ಮ ವಿದ್ಯಾಭ್ಯಾಸ ಕೊಡುತ್ತಿಲ್ಲ. ಇದು ನಮ್ಮ ದೇಶದ ಶೈಕ್ಷಣಿಕ ದುರಂತ.
