ದೊರೆಗಳು ಅವರನ್ನು (ತ್ಯಾಗರಾಜರನ್ನು) ಆರಾಧಿಸಿದರು. ಸಂಗೀತಗಾರರು ಅವರ ಕೀರ್ತನೆಗಳನ್ನು ಮಾರಾಟ ಮಾಡಿ ಹಣವಂತರಾದರು.
(ತಮಿಳಿನ ಮಾಲನ್ ಎಂಬ ಲೇಖಕ ತಿರುವಯ್ಯಾರಿನಲ್ಲಿರುವ ತ್ಯಾಗರಾಜರ ಬೃಂದಾವನವನ್ನು ನೋಡಿ ಬರೆದ ಕಾವ್ಯದ ಸಾಲುಗಳಿವು:)
ಸೋಜಿಗವೆಂದರೆ, ಈ ದೇಗುಲ ಇರ್ಯಾರೂ ಕಟ್ಟಿದ್ದಲ್ಲ. ಓರ್ವ ದೇವದಾಸಿ ಕುಲದ ಹೆಣ್ಣುಮಗಳು ಕಟ್ಟಿದ್ದು? ಇವು ಈ ಪುಸ್ತಕದ ಕಡೆಯ ಸಾಲುಗಳೂ ಹೌದು. ಇದೇ ತರಹದ ಮಾತುಗಳನ್ನು ‘ಸೂಳೆಕೆರೆ’ ಕಟ್ಟಿಸಿದ ದೇವದಾಸಿ ಹೆಣ್ಣುಮಗಳಿಗೆ, ರಾಮಕೃಷ್ಣಾಶ್ರಮ ಕಟ್ಟಿಸಿದ ಬೆಸ್ತರ ಹೆಣ್ಣುಮಗಳಿಗೆ ಇಂಥದೇ ದೇವೋಪಕಾರಿ ಕೆಲಸಗಳನ್ನು ಮಾಡಿರುವ ಅದೆಷ್ಟೋ ಕೆಳಸ್ತರದ ಹೆಣ್ಣುಜೀವಗಳನ್ನು ಕುರಿತು ಹೇಳಬಹುದು. ಹಾಗೆಯೇ ಅವರನ್ನು ಸ್ಮರಿಸಿಕೊಳ್ಳದ, ಜಾತಿಬಾವಿಯಲ್ಲಿ ಮಿಂದು ಎಲ್ಲವನ್ನೂ ಒರೆಸಿಕೊಂಡು ಹೋಗುವ ಮಡಿವಂತರಿಗೂ ಇಲ್ಲಿಯ ಕೆಲಮಾತುಗಳು ತಾಗುತ್ತವೆ. ಇಡೀ ಕೃತಿಯಲ್ಲಿ ಇಂತಹ ಹತ್ತಾರು ಸಂಗತಿಗಳಿವೆ. ಮುಖ್ಯಾಮುಖ್ಯದ ಆಯ್ಕೆ ಓದುಗರನ್ನು ಅವಲಂಬಿಸಿದೆ.
“ಬೆಂಗಳೂರು ನಾಗರತ್ನಮ್ಮ” ಎಂಬ ಕನ್ನಡದ ಅಪ್ರತಿಮ ಸಂಗೀತ ಕಲಾವಿದೆಯ ಹೆಸರು ಕನ್ನಡಿಗರಿಗೆ ಅಪರಿಚಿತವಾದರೂ ಅಂಧ್ರಪ್ರದೇಶ ಮತ್ತು ತಮಿಳುನಾಡಿನ ರಸಿಕರ ಹಾಲಿಗೆ ಸದಾ ಸ್ಮರಣೆಯಲ್ಲಿದೆ. ಕರ್ನಾಟಕದ ಕಪಿಲಾ ನದಿ ತೀರದ ನಂಜನಗೂಡಿನಲ್ಲಿ ಬ್ರಾಹ್ಮಣ ವಕೀಲರೊಬ್ಬರ ಉಪಪತ್ನಿಯಾಗಿದ್ದ, ದೇವದಾಸಿ ಸಮುದಾಯದ ಕೋಲಾರ ಮೂಲ ಅಥವಾ ಹೆಗ್ಗಡದೇವನಕೋಟೆ ಮೂಲದ ಪುಟ್ಟಲಕ್ಷ್ಮಮ್ಮ ಎಂಬುವವರ ಪುತ್ರಿಯಾಗಿ ಜನಿಸಿದವರು ನಾಗರತ್ನಮ್ಮ. ಅವರ ಕುರಿತಂತೆ ತಮಿಳುನಾಡಿನ ತಿರುವಯ್ಯಾರಿನಲ್ಲಿ ನಾದಬ್ರಹ್ಮ ತ್ಯಾಗರಾಜರಿಗೆ ಕಟ್ಟಿಸಿದ ಬೃಂದಾವನದ ಪ್ರಾಂಗಣದಲ್ಲಿರುವ ಸ್ಮರಣ ಫಲಕದಲ್ಲಿ ಈ ಬರಹವಿದೆ:
This Shrine and the Ashram are the offerings to Sri Thyagaraja Swamigal, the great saint and musician by his humble devotee Vidyasundari BANGALORE NAGARATNAM daughter of Puttalakshmamma of Mysore (completion of the Bulking Nov. 1938).
ಬೆಂಗಳೂರ್ ನಾಗರತ್ನಮ್ಮಳ್ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದ್ದ ನಾಗರತ್ನಮ್ಮನವರು ಅಂದಿನ ಮದ್ರಾಸ್ ನಗರದ ಜಾರ್ಜ್ಟೌನ್ ಪ್ರದೇಶದಲ್ಲಿ ‘ಮ್ಯಾನ್ಶನ್ ಹೌಸ್’ ಎಂದು ಕರೆಯಲಾಗುತ್ತಿದ್ದ ಎಂಟು ಕೊರಡಿಯುಳ್ಳ ಬೃಹತ್ ಬಂಗಲೆಯೊಂದನ್ನು ಕಟ್ಟಿಕೊಂಡು ಬದುಕಿದವರು. 1920ರ ದಶಕದಲ್ಲಿ ದಕ್ಷಿಣ ಭಾರತದಲ್ಲಿ ಪ್ರಥಮವಾಗಿ ಬ್ರಿಟಷ್ ಸರ್ಕಾರಕ್ಕೆ ವರಮಾನ ತೆರಿಗೆಯನ್ನು ಪಾವತಿಸಿದ ಐಕೈಕ ಸಂಗೀತ ಕಲಾವಿದೆ ಎಂಬ ಖ್ಯಾತಿ ಪಡೆದವರು. 1905-1921ರ ನಡುವಿನ ಅವಧಿಯಲ್ಲಿ ದಕ್ಷಿಣ ಭಾರತದ ನಗರಗಳು ಮತ್ತು ಪಟ್ಟಣಗಳಲ್ಲಿ 1235ಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ನೀಡಿ ದಾಖಲೆ ಸ್ಥಾಪಿಸಿದ್ದರು, ನಂತರ ತಮ್ಮ ಇಡೀ ಸಂಪಾದನೆಯನ್ನು ಕರ್ನಾಟಕ ಸಂಗೀತದ ಪ್ರಸಿದ್ಧ ವಾಗ್ಗೇಯಕಾರ ತ್ಯಾಗರಾಜರ ಸಮಾಧಿಯ ಅಭಿವೃದ್ಧಿ ಮತ್ತು ಸಂಗೀತ ಆರಾಧನೆಗೆ ಧಾರೆಯೆರೆದವರು. ಇವು ಇತಿಹಾಸದ ಕೆಲವು ಪುಟಗಳು, ನಾಗರತ್ನಮ್ಮ ಕನ್ನಡದ ನಟುವರ ಹೆಣ್ಣುಮಗಳು ಎನ್ನುವ ಕಾರಣಕ್ಕೆ ಕಣ್ಮರೆಯಾಗಿರುವ ಇವುಗಳ ಹಿಂದಿನ ಮತ್ತು ಮುಂದಿನ ಪುಟಗಳನ್ನು ಈ ಪುಸ್ತಕ ಅನಾವರಣ ಮಾಡಿದೆ.
ಕನ್ನಡದ ಬರಹಗಳಲ್ಲಿ ಅವರನ್ನು ಮೊದಲಿಗೆ ಸ್ಮರಿಸಿಕೊಂಡಿರುವವರು ಮೈಸೂರು ವಾಸುದೇವಾಚಾರ್ಯರು ಮತ್ತು ಡಿ.ವಿ. ಗುಂಡಪ್ಪನವರು, ನಾಗರತ್ನಮ್ಮನವರ ಬದುಕಿನಲ್ಲಿ ಮೂರು ಪ್ರಮುಖ ಘಟ್ಟಗಳಿವೆ. ಇವರು ಕರ್ನಾಟಕದಲ್ಲಿ ಕಲಾವಂತಲು, ಪಾತರದವರು ನಾಯಕಸಾನಿ ಮುಂತಾದ ಹೆಸರುಗಳಲ್ಲಿ, ತಮಿಳುನಾಡಿನಲ್ಲಿ ನಟ್ಟುವನಾರ್ ಅಥವಾ ನಟುವ ಎಂದು ಗುರುತಿಸುವ ಸಮೂಹದಿಂದ ಬಂದವರು. (ಎಂ.ಎಸ್. ಸುಬ್ಬುಲಕ್ಷ್ಮಿ ಮತ್ತು ಎಂ.ಎಲ್. ವಸಂತಕುಮಾರಿ ಅವರೂ ಇದೇ ಮೂಲದವರು). ‘ನಿನ್ನ ಮಗಳು ಮೈಸೂರಿನ ರಸ್ತೆಯಲ್ಲಿ ಸಗಣಿ ಬಾಚಲು ಮಾತ್ರ ಅರ್ಹಳು’ ಎಂದು ಜಾತಿ ಕಾರಣಕ್ಕೆ ಗಿರಿಭಟ್ಟರ ತಮ್ಮಯ್ಯ ಶಾಸ್ತ್ರಿ ಎಂಬ ಸಂಗೀತಗಾರರಿಂದ ಹಂಗಿಸಿಕೊಂಡ ಪುಟ್ಟಲಕ್ಷ್ಮಮ್ಮ ತನ್ನ ಮಗಳನ್ನು ಅದ್ಭುತ ಸಂಗೀತ ನೃತ್ಯ ಕಲಾವಿದೆಯನ್ನಾಗಿಸಬೇಕೆಂದು ಹಂಬಲಿಸಿ ಅದಕ್ಕೆ ತನ್ನೆಲ್ಲ ಹಿತ ಪರಗಳನ್ನು ಒತ್ತೆಯಿಟ್ಟು ದುಡಿದರು. ಆದರೆ ಮಗಳು ಕೇವಲ ಹದಿಮೂರು ವರ್ಷದವಳಾಗಿದ್ದಾಗಲೇ ನಿಧನ ಹೊಂದಿದರು.
ಸೋದರ ಮಾನ ವೆಂಕಟಶಾಮಪ್ಪ ಮತ್ತು ಗುರುಗಳಾದ ಮುನಿಶಾಮಪ್ಪನಪರ ಆಶ್ರಯದಲ್ಲಿ ಬೆಳೆದು ಅಪ್ರತಿಮ ಸಂಗೀತಗಾರಳಾಗಿ ರೂಪುಗೊಂಡ ನಾಗರತ್ನಮ್ಮ 1863ರಲ್ಲಿ ತಾಯಿ ನಿಧನರಾದ ಎರಡು ವರ್ಷಗಳ ಅವಧಿಯಲ್ಲಿಯೇ ಮೈಸೂರು ಅರಮನೆಯಲ್ಲಿ ಪಾಡುಗಾರಿಕೆ ನಡೆಸಿಕೊಟ್ಟು ಗಿರಿಭಟ್ಟರ ತಮ್ಮಯ್ಯನವರೂ ಸೇರಿದಂತೆ ಅನೇಕ ವಿದ್ವಾಂಸರೂ, ಮೈಸೂರು ದೊರೆ ಹತ್ರನೆಯ ಚಾಮರಾಜ ಒಡೆಯರ್ ಅವರಿಂದ ಸೈ ಅನ್ನಿಸಿಕೊಂಡರು. ಅದೇ ಕಾಲಮಾನದಲ್ಲಿ ಅನೇಕ ಪ್ರಗತಿಪರ ಯೋಚನೆಗಳು ಸಾಕಾರವಾಗಲು ಕಾರಣವಾದ ಮೈಸೂರು ಸಂಸ್ಥಾನವು ದೇವಾಲಯಗಳಲ್ಲಿದ್ದ ದೇವದಾಸಿ ಪದ್ಧತಿಯ ಮೇಲೆ ನಿಷೇಧ ಹೇರಿತು. ಇದರಿಂದ ಕಲಾವಿದರಿಗೆ ತೊಂದರೆಯಾಗದಿರಲು ಅವರ ಕಲಾಪ್ರದರ್ಶನಕ್ಕೆ ಅರಮನೆಯು ಅನೇಕ ಅವಕಾಶಗಳನ್ನು ನೀಡಿ ಪ್ರೋತ್ಸಾಹಿಸಿತು. ಆದರೆ ಅನೇಕ ಪ್ರಗತಿಪರರು ಸಕಾರಣವಾಗಿ ಸರ್ಕಾರದ ಖಾನೆ ಸಂಗೀತ ಇತ್ಯಾದಿ ಕಲೆಗಳಿಗಾಗಿ ಮಿತಿಮೀರಿ ಬಳಕೆಯಾಗುತ್ತಿರುವುದರ ವಿರುದ್ಧ ದನಿ ತೆಗೆದುದರಿಂದ ಮೈಸೂರು ಸರ್ಕಾರವು ಆ ಅಭಿಪ್ರಾಯಗಳನ್ನು ಗೌರವಿಸಿ ಕಾರ್ಯಕ್ರಮಗಳನ್ನು ಮಿತಿಗೊಳಿಸಿತು. ಇದರಿಂದಾಗಿ ಕೆಲಮಟ್ಟದ ತೊಂದರೆಗೊಳಗಾದ ಬೆಂಗಳೂರು ನಾಗರತ್ನಮ್ಮನವರನ್ನು ಕೈಹಿಡಿದವರು ಅಂದಿನ ಹೈಕೋರ್ಟ್ ಜಸ್ಟಿಸ್ ಆಗಿದ್ದ ನರಹರಿರಾವ್ ಅವರು. ದಿನವೂ ಕೋರ್ಟ್ ಮುಗಿದ ನಂತರ ನರಹರಿರಾಯರು ನಗರ್ತರ ಪೇಟೆಯಲ್ಲಿದ್ದ ನಾಗರತ್ನಮ್ಮನವರ ಮನೆಗೆ ಬಂದು ಸಂಗೀತ ಆಲಿಸಿ ಹೋಗುವುದು ಮತ್ತು ಅವರ ಸಾರೋಟು ಮತ್ತು ದಂಡಧಾರಿ ಸೇವಕ ದೇವದಾಸಿಯೊಬ್ಬರ ಮನೆಯ ಮುಂದೆ ನಿಲ್ಲುವುದು ಕೆಲವರಿಗೆ ಕಿಸಿರುಗಣ್ಣಾಗಿ, ಅಂದಿನ ದಿವಾನ್ ಶೇಷಾದ್ರಿ ಅಯ್ಯರ್ರವರೆಗೆ ದೂರು ಹೋಯಿತು. ಇದನ್ನು ತುಂಬ ಸೂಕ್ಷ್ಮವಾಗಿ ನಿಭಾಯಿಸಿದ ದಿವಾನರು ಇನ್ನುಮುಂದೆ ನಾಗರತ್ನಮ್ಮನವರ ಮನೆಯ ಮುಂದೆ ದಂಡಧಾರಿ ನಿಲ್ಲುವುದು ಬೇಡ ಎಂದು ತೀರ್ಮಾನಿಸಿದರು! ಇದನ್ನು ಡಿ.ವಿ.ಜಿ.ಯವರು ನಿರ್ಮಲವಾದ ಮನಸ್ಸಿನಿಂದ ಸ್ಮರಿಸಿಕೊಳ್ಳುತ್ತಾರೆ. ನಂತರ ನರಹರಿರಾಯರು ನಾಗರತ್ನಮ್ಮನವರಿಗೆಂದು ಹನುಮಂತನಗರದ ಮೌಂಟ್ ಜಾಯ್ ಗುಡ್ಡದಲ್ಲಿ ಬಂಗಲೆಯೊಂದನ್ನು ಕಟ್ಟಿಸಿಕೊಟ್ಟರು.
1903ರ ಹೊತ್ತಿಗೆ ನಾಗರತ್ನಮ್ಮನವರು ಮದ್ರಾಸಿಗೆ ಸ್ಥಳಾಂತರ ಹೊಂದಿದರು. ಕೇವಲ ಎರಡು ವರ್ಷಗಳ ಅವಧಿಯಲ್ಲಿ ಅಲ್ಲಿನ ರಸಿಕರ ಮನದಲ್ಲಿ ಶಾಶ್ವತ ಸ್ಥಾನ ಗಳಿಸಿ ಪ್ರಖ್ಯಾತರಾದರು. ತಮಿಳುನಾಡಿನಲ್ಲಿ ಪ್ರಸಿದ್ಧ ಗಾಯಕಿಯಾಗಿ ಜನಪ್ರಿಯತೆಯ ಶಿಖರವೇರಿದ ಅವರು ತಮ್ಮ ವೃತ್ತಿಯಲ್ಲಿ ತೋರಿದ ವೃತ್ತಿಪರತೆ, ಬದ್ಧತೆ, ಸಂಗೀತ ಶುದ್ದಿ, ಹೊಸ ಪ್ರಯೋಗಗಳ ಮೂಲಕ ತಮ್ಮ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡರು. ಆಗಿನ ಕಾಲಕ್ಕೆ ಹೊಸ ತಂತ್ರಜ್ಞಾನವಾಗಿ ಬಂದ ಗ್ರಾಮಾಫೋನ್ ರೆಕಾರ್ಡ್ಗಳಲ್ಲಿ ಉತ್ತರ ಭಾರತದಲ್ಲಿ ಗೋಹರ್ಜಾನ್ ಮತ್ತು ದಕ್ಷಿಣಭಾರದಲ್ಲಿ ನಾಗರತ್ನಮ್ಮ ಇವರೇ ಅತಿ ಹೆಚ್ಚು ಹಾಡಿದ ಕಲಾವಿದೆಯರಾಗಿದ್ದರು. ನಂತರ ಈ ಸ್ಥಾನವನ್ನು ಎಂ.ಎಸ್.ಸುಬ್ಬುಲಕ್ಷ್ಮಿಯವರು ಅಲಂಕರಿಸಿದರು.
ಕ್ರಿ.ಶ. 1739 ರಿಂದ 1763 ರವರೆಗೆ ತಂಜಾವೂರಿನ ಮರಾಠ ದೊರೆ ಪ್ರತಾಪಸಿಂಹನ ಆಸ್ಥಾನದಲ್ಲಿ ನರ್ತಕಿಯಾಗಿದ್ದ ದೇವದಾಸಿ ಮೂಲದ ಮುದ್ದುಪಳನಿ ಎಂಬ ಕಲಾವಿದೆ, ತೆಲುಗು ಭಾಷೆಯಲ್ಲಿದ್ದ ‘ಇಳಾದೇವಿಯಾಮು’ ಎಂಬ ಕೃತಿಯನ್ನು ಆಧರಿಸಿ ‘ರಾಧಿಕಾ ಸ್ವಾಂತನಮು’ ರಚಿಸಿದ್ದಳು. ಈ ಕೃತಿಯನ್ನು 1855ರಲ್ಲಿ ಪತ್ತೆ ಹಚ್ಚಿದ ಸಿ.ಪಿ. ಬ್ರೌನ್ ಅವರು, ಮದ್ರಾಸಿನ ‘ಓರಿಯಂಟಲ್ ಲೈಬ್ರರಿ’ ಮೂಲಕ ಪ್ರಕಟಿಸಿದರು. ಇದು ಜಯದೇವ ಕವಿಯ ‘ಗೀತಗೋವಿಂದ’ ಮಾದರಿಯ ಕೃತಿ. ಕೃಷ್ಣನ ಕುರಿತು ರಾಧೆಗಿದ್ದ ಅದಮ್ಯ ಪ್ರೀತಿಯನ್ನು ವ್ಯಕ್ತಪಡಿಸುವ ಕೃತಿ. ಇದನ್ನು ೧೯೦೭ರಲ್ಲಿ ವೆಂಕಟನರಸು ಎಂಬ ಸಂಶೋಧನಾ ಸಹಾಯಕರು ಮರುಮುದ್ರಣ ಮಾಡಿದರು. ಹಾಗೆ ಮಾಡುವಾಗ ಮೂಲದಲ್ಲಿ ಇದ್ದ ಮುದ್ದುಪಳನಿಯ ಪೀಠಿಕೆಯ ಭಾಗವನ್ನು, ಬರೆದವಳು ಹೆಣ್ಣು ಮತ್ತು ದೇವದಾಸಿ ಎನ್ನುವ ಕಾರಣಕ್ಕೆ ತೆಗೆದುಹಾಕಿದ್ದರು. ಇಷ್ಟು ಸಾಲದು ಎನ್ನುವಂತೆ ಈ ಕೃತಿಯ ಬಗೆಗೆ ಅಂದಿನ ದೇವದಾಸಿ ಪದ್ಧತಿಯ ವಿರುದ್ಧ ಅಂಧ್ರಪ್ರದೇಶದಲ್ಲಿ ನಡೆಯುತ್ತಿದ್ದ ಚಳವಳಿಯ ಮುಂದಾಳತ್ವ ವಹಿಸಿದ್ದ ಧೀರೇಶಲಿಂಗಂ ಪಂತುಲು ಎನ್ನುವವರಿಂದ ಇದೊಂದು ಅಶ್ಲೀಲ ಕಾವ್ಯ ಎನ್ನುವಂತಹ ತುಂಬಾ ಅಸೂಕ್ಷ್ಮವಾದ ಟೀಕೆ ವ್ಯಕ್ತವಾಯಿತು. ಈ ಕಟು ಟೀಕೆ ನಾಗರತ್ನಮ್ಮನವರನ್ನು ಸಹಜವಾಗಿ ನೋಯಿಸಿತು. ಅಷ್ಟು ಹೊತ್ತಿಗೆ ತೆಲುಗು ತಮಿಳು ಸಾಹಿತ್ಯದ ಗಂಭೀರ ವಿದ್ವಾಂಸಳಾಗಿ ರೂಪುಗೊಳ್ಳುವುದರ ಜೊತೆಗೆ ಇಂಗ್ಲಿಷ್ ಭಾಷೆಯನ್ನೂ ದಕ್ಷಿಸಿಕೊಂಡು ಗಂಭೀರ ಅಧ್ಯಯನದಲ್ಲಿ ತೊಡಗಿಕೊಂಡಿದ್ದ ನಾಗರತ್ನಮ್ಮನವರು, ಮುದ್ದು ಪಳನಿಯ ‘ರಾಧಿಕಾ ಸ್ವಾಂತನಮು’ ಕೃತಿಯನ್ನು ಪರಿಷ್ಕರಿಸಿ ಪ್ರಕಟಿಸಿದರು. ಸಮರ್ಥನಾರೂಪವಾಗಿ ಅದರ ಪ್ರಸ್ತಾವನೆಯಲ್ಲಿ ಕೆಲವು ಮಾತುಗಳನ್ನು ಹೇಳಿದ್ದಾರೆ. ಅದರಲ್ಲಿ ಒಂದೆರಡು ಮಾತುಗಳು: “ಅಗ್ನಿಸಾಕ್ಷಿಯಾಗಿ ಒಬ್ಬ ಪುರುಷನನ್ನು ಕೈಹಿಡಿದು ಮತ್ತೊಬ್ಬ ಪುರುಷನೊಂದಿಗೆ ಕೊಡುವುದು ಅಥವಾ ಓಡಿಹೋಗುವುದು ಜಾರತ್ವ ಎನಿಸಿಕೊಳ್ಳುತ್ತದೆಯೇ ಹೊರತು, ಮುದ್ದು ಪಳನಿಯ ಕುಲವೃತ್ತಿಯು ಜಾರಿಣಿಯ ವ್ಯಕ್ತಿಯಾಗಿರಲಿಲ್ಲ. ಆ ಕಾಯಕದ ವೃತ್ತಿ ಎಂತಹದ್ದು ಎಂಬುದು ವಾತ್ಪಾಯನನ ಕಾಮಸೂತ್ರ ಓದಿದವರಿಗೆ ಅರ್ಥವಾಗುತ್ತದೆ. ನಾಚಿಕೆ ಅಥವಾ ಲಜ್ಜೆ ಎನ್ನುವುದು ಸ್ತ್ರೀಯರಿಗೆ ಮಾತ್ರವೇ ಹೊರತು ಪುರುಷರಿಗೆ ಅಲ್ಲ ಎನ್ನುವುದು ಅತಾರ್ಕಿಕವಾದುದು. ಮುದ್ದು ಪಳನಿ ಮುಕ್ತವಾಗಿ ಶೃಂಗಾರ ರಸವನ್ನು ವರ್ಣಿಸಿದರೆ ಅದು ಲಜ್ಜೆಗೇಡಿತನ, ಪುರುಷರು ಅದನ್ನು ಬರೆದರೆ ಶೃಂಗಾರ ಕಾವ್ಯವೆ?”- ಇದೊಂದು ಆ ಕಾಲಮಾನದ ದೃಷ್ಟಿಯಿಂದ ಅತ್ಯಂತ ದಿಟ್ಟವಾಗಿ ಪ್ರಕಟವಾದ ಮನುಷ್ಯಪರವಾದ ನಿಲುವು. ಆದರೆ ಅಂದಿನ ಪ್ರಸಿದ್ಧ ಪ್ರಕಾಶನ ಸಂಸ್ಥೆಯಾದ ‘ವಾವಿಳ್ಳರಾಮಸ್ವಾಮಿ ಶಾಸ್ಕುಲು ಅಂಡ್ ಸನ್ಸ್’ ಸಂಸ್ಥೆಯು ಪ್ರಕಟಿಸಿದ (ಇದರ ಇಂಗ್ಲಿಷ್ ಅನುವಾದಿತ ರೆಗೆ ಆವೃತ್ತಿಯನ್ನು ಪೆಂಗ್ವಿನ್ ಸಂಸ್ಥೆಯು ಪ್ರಕಟಿಸಿದೆ)
ಮೂವತ್ತಾರು ಪೈಸೆ ಬೆಲೆಗೆ ಮಾರಾಟ ಮಾಡಿದ ಈ ಕೃತಿಯನ್ನು ವೀರೇಶಲಿಂಗಂನ ಆಪ್ತನೊಬ್ಬನಾದ ಗೋಟೇಟಿ ಕನಕರಾಜು ಪಂತುಲು ಎಂಬ ಭಾಷಾಂತರಕಾರನ ಕಿತಾಪತಿಯಿಂದಾಗಿ ಅಂದಿನ ಬ್ರಿಟಿಷ್ ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಅದರ ಮೇಲೆ ನಿಷೇಧವನ್ನು ಹೇರಿತು. ನಾಗರತ್ನಮ್ಮನವರು ಹಾಗೂ ಪ್ರಕಾಶಕರ ವಿರುದ್ಧ ಮದ್ರಾಸ್ ಪ್ರೆಸಿಡೆನ್ಸಿಯ ಮುಖ್ಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಯಿತು. ನಂತರದ ಬೆಳವಣಿಗೆಗಳಲ್ಲಿ, ಈ ಕೃತಿ ನಾಗರತ್ನಮ್ಮನವರ ಸೃಜನಶೀಲ ಕೃತಿಯಲ್ಲ, ಅದು ಅನುವಾದ ಮತ್ತು ಇಂತಹ ಕೃತಿಗಳು ಸಂಸ್ಕೃತ ಮತ್ತು ಇತರ ಭಾಷೆಗಳಲ್ಲಿರುವ ಸದಭಿರುಚಿಯ ಶ್ರೇಷ್ಠ ಕೃತಿ ಎನ್ನುವುದನ್ನು ಕಂಡುಕೊಂಡ ಸರ್ಕಾರ ಮೊಕದ್ದಮೆಯನ್ನು ಸುಮಾರು ೩೭ ವರ್ಷಗಳ ನಂತರ ಹಿಂದಕ್ಕೆ ಪಡೆಯಿತು.
‘ರಾಧಿಕಾ ಸ್ವಾಂತನಮು’ ಕೃತಿಯು ವಾಸ್ತವವಾಗಿ ಕೃಷ್ಣನ ಪ್ರೇಯಸಿಯಾದ ರಾಧೆಯು ತನ್ನ ಸಹೋದರಿಯ ಮಗಳಾದ ಇಳಾದೇವಿಗೆ ಪ್ರಾಯದ ವಯಸ್ಸಿಗೆ ಸಹಜವಾಗಿ ಬರುವ ಲೈಂಗಿಕ ಬಯಕೆಗಳ ಕುರಿತು ಹೇಳುವ ಪಠ್ಯವನ್ನು ಒಳಗೊಂಡಿದೆ. ಇದು ಅನೌಪಚಾರಿಕವಾದ ನಿರೂಪಣಾ ಶೈಲಿಯಿಂದ ಕೂಡಿದ್ದು ಅದರಲ್ಲಿ ಬರುವ ಪಾತ್ರಗಳ ಭಾವ, ಅವುಗಳ ಧ್ವನಿಯ ಏರಿಳಿತ, ತುಮುಲ ಹಾಗೂ ಹಾಸ್ಯ, ಇವೆಲ್ಲ ಈ ಕೃತಿಯನ್ನು ಇತರ ತೆಲುಗು ಅಭಿಜಾತ ಕಾವ್ಯಗಳ ಸಾಲಿನಲ್ಲಿ ಎತ್ತರದ ಸ್ಥಾನದಲ್ಲಿ ನಿಲ್ಲಿಸಿವೆ. ಈ ಬಗೆಗೆ ವಿದ್ವಾಂಸ ಲೇಖಕಿಯರಾದ ಸೂಸಿ ಥಾರು ಮತ್ತು ಕೆ. ಲಲಿತಾ ಅವರ ಮಾತುಗಳಿಲ್ಲಿ ಉಲ್ಲೇಖಾರ್ಹ. (ಡಾ. ಹೆಚ್.ಎಸ್ ರಾಘವೇಂದ್ರರಾವ್ ಅವರು ಈ ಲೇಖನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ). “ವರ್ಗ, ಜಾತಿ, ಲಿಂಗ ಚಕ್ರಾಧಿಪತ್ಯ, ರಾಷ್ಟ್ರ ಮುಂತಾದವುಗಳ ಹಿನ್ನೆಲೆಯಲ್ಲಿ ತಾತ್ವಿಕ ನೆಲೆಗಳು ಬದಲಾದ ಹಾಗೆಲ್ಲಾ ಸಾಹಿತ್ಯ ಸೃಷ್ಟಿಯ ಸಂದರ್ಭಗಳು ಹೊಸ ಹೊಸ ವ್ಯಾಖ್ಯಾನವನ್ನು ಪಡೆದುಕೊಳ್ಳುತ್ತಿದ್ದುವು. ಮುದ್ದು ಪಳನಿಯ ಕಾವ್ಯವನ್ನು ಮರುಮುದ್ರಣ ಮಾಡುವ ನಾಗರತ್ನಮ್ಮನವರ ಪ್ರಯತ್ನಗಳಲ್ಲಿ ನಮಗೆ ಕಾಣಸಿಗುವುದು ಭಾರತದಲ್ಲಿ ಉಳಿದಿರುವ ಅಲಿಖಿತವಾಗಿಯೆ ಸ್ತ್ರೀವಾದಿ ವಿಮರ್ಶೆಯ ಇತಿಹಾಸದ ಒಂದು ಘಟನೆಯಷ್ಟೆ ಅಲ್ಲ, ಮಹಿಳೆಯೊಬ್ಬಳ ಓದಿನ ವಿಶಿಷ್ಟ ಒಳನೋಟಗಳು ನಮಗೆ ವೇದ್ಯವಾಗುತ್ತವೆ”. ಜಗದೀಶ್ ಕೊಪ್ಪ ಅವರ ಈ ಕೃತಿಯಲ್ಲಿನ ಅನೇಕ ಸಂಗತಿಗಳು ವಿ. ಶ್ರೀರಾಮ್ ಅವರು ಇಂಗ್ಲಿಷ್ ಮತ್ತು ತಮಿಳಿನಲ್ಲಿ ಬರೆದಿರುವ ನಾಗರತ್ನಮ್ಮನವರ ಜೀವನ ಚರಿತ್ರೆಯಲ್ಲಿ ದಾಖಲಾಗಿವೆ. ಡಿ.ವಿ.ಜಿಯವರು ಮತ್ತು ಮೈಸೂರು ವಾಸುದೇವಾಚಾರ್ಯರು ತಮ್ಮ ಲೇಖನಗಳಲ್ಲಿ ಬೆಂಗಳೂರು ನಾಗರತ್ನಮ್ಮನವರನ್ನು ಸ್ಮರಿಸಿಕೊಂಡಿದ್ದಾರೆ. ಆದರೆ ಅವರ ಬದುಕಿನ ಅತ್ಯಂತ ಸೂಕ್ಷ್ಮ ವಿವರಗಳೊಂದಿಗೆ ಮತ್ತು ಕೆಳಸ್ತರದ ಅಪಮಾನಿತ ಲೋಕದಿಂದ ಬಂದ ಹೆಣ್ಣೆಂದು ಕಟ್ಟಿಕೊಂಡ ಅಪ್ರತಿಮ ಬದುಕಿನ ಮಾದರಿಯನ್ನು ಈ ಕೃತಿ ತೆರೆದಿಟ್ಟಿದೆ. ಕೊಪ್ಪ ಅವರ ಸುಮಾರು ಮೂರು ವರುಷಗಳ ಓಡಾಟ ಮತ್ತು ಹಟದಿಂದಾಗಿ ಉತ್ತಮ ಕೃತಿಯೊಂದು ಕನ್ನಡಕ್ಕೆ ದೊರೆತಿದೆ. ತ್ಯಾಗರಾಜರ ಕರ್ಮಭೂಮಿಯಾದ ತಿರುವಯ್ಯಾರಿನಲ್ಲಿ ತ್ಯಾಗರಾಜರ ಬೃಂದಾವನವನ್ನು ನಿರ್ಮಿಸಿ, ತ್ಯಾಗರಾಜರ ಸಂಗೀತಾರಾಧನೆಗೆ ಕಾರಣವಾದ ನಾಗರತ್ನಮ್ಮನವರ ಮೂರ್ತಿಯೊಂದನ್ನು ಪ್ರತಿಷ್ಠಾಪಿಸಲಾಗಿದೆ. 1952ರಲ್ಲಿ ನಿಧನರಾಗುವ ಹೊತ್ತಿಗೆ ತಿರುವಯ್ಯಾರಿನ ತ್ಯಾಗರಾಜರ ಆರಾಧನೆ ಮತ್ತು ಸಂಗೀತೋತ್ಸವ ಒಂದು ಅಖಿಲ ಭಾರತ ಮಟ್ಟದ ಸಂಗತಿಯಾಗಿತ್ತು, ಈಗಲೂ ಅದೊಂದು ರಾಷ್ಟ್ರಮಟ್ಟದ ಮುಖ್ಯ ಸಂಗೀತೋತ್ಸವದಲ್ಲಿ, ಸಂಗೀತ ಸಮಾರಂಭ. ಆದರೆ ಯಥಾಪ್ರಕಾರ ತ್ಯಾಗರಾಜರ ನಾಗರತ್ನಮ್ಮನವರ ಪ್ರತಿಮೆ ಇರುವ ಗದ್ದುಗೆಗೆ ಮೂರು ಬೀಗಗಳನ್ನು ಹಾಕಿ, ಪೆಂಡಾಲಿನಿಂದ ಅದು ಕಾಣದಂತೆ ಮುಚ್ಚಿ ಅವರ ಹೆಸರು ಎಲ್ಲಿಯೂ ನೋಡಲಾಗಲೀ ಕೇಳಲಾಗಲೀ ಆಗದಂತೆ ಎಚ್ಚರ ವಹಿಸಲಾಗುತ್ತದೆ!. ಭಾರತದ ಮನಸ್ಸಿಗೇ ಹತ್ತಿರುವ ಈ ಜಾತಿ ಕುಷ್ಠವನ್ನು ಸಂಗೀತ ವಾಸಿ ಮಾಡುವುದೆ?
