ಆತಂಕ, ಚಿಂತೆಗಳಿದ್ದ ದಿನಗಳೇ ಜಾಸ್ತಿ ನನ್ನ ಬದುಕಿನಲ್ಲಿ… ನಾನಾಗಿ ನಾನು ಸೃಷ್ಟಿಸಿಕೊಂಡ ಸೆರೆಮನೆಯ ಸರಳುಗಳು.. ಆರ್ಥಿಕ ಕಷ್ಟಗಳು ಮಾತ್ರವಲ್ಲ, ಅದು ತಂದೊಡ್ಡುವ ಅವಮಾನದ ಪ್ರಪಾತಗಳು, ವಿಭಿನ್ನ ರೀತಿಯ ಧರ್ಮ ಸಂಕಟಗಳು ನನ್ನನ್ನು ಕಾಡುತ್ತಿದ್ದ ಕಾಲ ಅದು… ತೀರಾ ಪಾಪರ್ ಆಗಿ ನಿಂತು ಬಿಟ್ಟಿದ್ಧೆ. ಹೊಸದಾಗಿ ಪಾಪರ್ ಆದವನ ಅವಮಾನಗಳಿಗೆ ಕರೆಂಟ್ ಜಾಸ್ತಿ ಇರುತ್ತದೆ. ಯಾರಿಗೋ ಮಾಡಲು ಹೋದ ಸಹಾಯ ನನ್ನ ಎಲ್ಲ ನೆಮ್ಮದಿಗಳನ್ನೂ ನುಂಗಿ ಕೂತಿತ್ತು. ನನ್ನ ಫ್ಯಾಕ್ಟರಿ ಎಷ್ಟು ಹಣ ಹಾಕಿದರೂ ನುಂಗಿ ಕೂರುತ್ತಿತ್ತು. ಗೆಳೆಯ ಶ್ರೀನಾಥ ಮಾತ್ರ ಬರಬೇಕಾಗಿದ್ದ ಅಲ್ಪ, ಸ್ವಲ್ಪ ಬಾಕಿಗೆ ಹಾಸನ, ಶಿವಮೊಗ್ಗ, ಗುಲ್ಬರ್ಗ ಮುಂತಾದ ಊರುಗಳಿಗೆ ಕೆಂಪು ಬಸ್ಸಿನಲ್ಲಿ ಕೂರಲು ಜಾಗವಿಲ್ಲದ ಸೀಟಿನ ಮೇಲೆ ಕೂತು ತೂಕಡಿಸುತ್ತ ತಲೆಯನ್ನು ಹಿಂದಿನ ಸ್ಟೀಲ್ ರಾಡಿಗೆ ಇಡೀ ರಾತ್ರಿ ಹೊಡೆಸಿಕೊಳ್ಳುತ್ತಾ ದುಡ್ಡಿಗಾಗಿ ಓಡಾಡುತ್ತಿದ್ದ.ಅವನ ಸ್ಥಿತಿ ಕೂಡಾ ಅತ್ಯಂತ ಕಷ್ಟದಲ್ಲಿ ಇತ್ತು.
ನನಗೆ ಸಾಲ ಕೊಡುವವರೂ ಮುಗಿದು ಹೋಗಿದ್ದರು. ಪ್ರತಿನಿತ್ಯ ಅಳುವವನ ಗೋಳನ್ನು ಅನುದಿನವೂ ಕೇಳಲಾರದೆ ಮಾಯವಾಗಿದ್ದರು. ಯಾವಾಗಲೂ ಸಾಲ ಕೊಡುತ್ತಿದ್ದ ಕಿಟ್ಟಿಗೆ ಧಾರವಾಡಕ್ಕೆ ವರ್ಗವಾಗಿತ್ತು. ಮೇಷ್ಟ್ರು ನಾನು ಬರೆದ ಲೇಖನಗಳಿಗಾಗಿ ಅಲ್ಪ, ಸ್ವಲ್ಪ ಹಣ ಕೊಡುತ್ತಿದ್ದರೂ ಅದು ಯಾತಕ್ಕೂ ಸಾಕಾಗೂತ್ತಿರಲಿಲ್ಲ. ಜತೆಗೆ ಅವಮಾನದ ದೈನೇಸಿ ಸ್ಥಿತಿ ಸ್ನೇಹಗಳನ್ನೂ ಬಂಧಗಳನ್ನೂ ಕೊಲ್ಲುತ್ತದೆ.
ಹಾಗಾದಾಗ ನಾನು ಯಾರ ಬಳಿಯೂ ಹೇಳಿಕೊಳ್ಳದೆ ನಿದ್ದೆ ಇಲ್ಲದ ನಿಟ್ಟುಸಿರಿನ ಶಥಪಥಗಳನ್ನು ಹಾಕುತ್ತಾ ರಾತ್ರಿಗಳನ್ನು ಕಳೆಯುತ್ತಿದ್ದೆ…. ಯಾರಾದರೂ ಮಾತನಾಡಿಸಿದರೆ ಸಿಟ್ಟಿಗೆದ್ದು ಕೂಗಾಡಿ ಬಿಡುತ್ತಿದ್ದಂಥ ಸ್ಥಿತಿಯಲ್ಲಿ ಇರುತ್ತಿದ್ದೆ. ಇದನ್ನು ಆಗ ನಮ್ಮ ಮನೆಯಲ್ಲಿರುತ್ತಿದ್ದ ಅಮ್ಮ ಗಮನಿಸುತ್ತಿದ್ದರು. ಎರಡು ದಿನವಾದರೂ ನನ್ನ ನಿಟ್ಟುಸಿರಿನ ತಲ್ಲಣಗಳು ನಿಲ್ಲದಿದ್ದರೆ, ಗೀತಾ ಎಲ್ಲೊ ಆಚೆ ಹೋಗಿದ್ದಾಗ ಅಮ್ಮ ನನ್ನ ರೂಮೊಳಗೆ ಬಂದು “ಕಂದಾ ನಿನ್ನ ಹತ್ತಿರ ಎರಡು ನಿಮಿಷ ಮಾತನಾಡಬಹುದಾ..” ಎಂದು ಹೆದರಿಕೊಂಡೇ ಪಕ್ಕದಲ್ಲಿ ಬಂದು ಕೂರುತ್ತಿದ್ದರು. “ಏನಾಗಿದೆ ಅಪ್ಪಾಜಿ ಕಷ್ಟ…” ಎಂದು ನನ್ನ ಕೈ ಹಿಡಿದು ತಲೆ ನೇವರಿಸುತ್ತಿದ್ದರು.. ಒಮ್ಮೆಗೇ ಕಟ್ಟಿಕೊಂಡಿದ್ದ ಆತಂಕಗಳೆಲ್ಲಾ ನನ್ನ ಕಣ್ಣಲ್ಲಿ ನೀರಾಗಿ ತುಂಬಿಕೊಳ್ಳುತ್ತಿತ್ತು. ಅಮ್ಮ ನನ್ನನ್ನು ತೊಡೆಯ ಮೇಲೆ ಮಲಗಿಸಿಕೊಳ್ಳುತ್ತಿದ್ದರು.
“ಕಂದಾ, ಅಳಬೇಡ… ನಾನು ಇಲ್ಲವಾ… ಕಷ್ಟ ನಿನ್ನೊಬ್ಬನಿಗೇ ಅಲ್ಲ ಬರೋದು.. ನಿನಗಿಂತ ನೂರು ಪಟ್ಟು ಕಷ್ಟ ಇರುವವರನ್ನು ತೋರಿಸಲಾ.. ಕೆಲವು ದಿನ ಸಹಿಸಿಕೋ… ದೇವರ ಮೇಲೆ ಭಾರ ಹಾಕು.. ಎಲ್ಲಾ ಸರಿ ಮಾಡುತ್ತಾನೆ… ಅಷ್ಟು ಕಷ್ಟವಾದರೆ ಊರಿನಲ್ಲಿ ಇರುವ ಅರ್ಧ ಜಮೀನು ಮಾರಿ ಬಿಡೋಣ… ನನಗೆ ಇನ್ನೂ ಶಕ್ತಿ ಇದೆ.. ನಿನ್ನ ಕಷ್ಟ ಕಡಿಮೆ ಮಾಡುತ್ತೇನೆ… ಕೆಲವು ದಿನ ಸಹಿಸಿಕೋ” ಎಂದು ಹಣೆ ನೇವರಿಸುತ್ತಿದ್ದರು. ನನ್ನ ಕಣ್ಣು ಒರೆಸುತ್ತಿದ್ದರು. (ಯಾವುದೋ ಧರ್ಮ ಸಂಕಟ ದಲ್ಲಿ ಸಿಕ್ಕಿ ಹಾಕಿಕೊಂಡಿದ್ದೆ. ನಾನು ಊರಿನ ಆಸ್ತಿ ಮುಟ್ಟುವುದು ನನಗೆ ಇಷ್ಟವಿರಲಿಲ್ಲ.)
ನನ್ನನ್ನು ಕಂದಾ, ಅಪ್ಪಾಜಿ ಎಂದು ಅಮ್ಮ ತೊಡೆಯ ಮೇಲೆ ಮಲಗಿಸಿಕೊಂಡಾಗ ನಾನು ಕಂದನೂ ಅಲ್ಲ, ಮಗುವೂ ಅಲ್ಲ. ನಲವತ್ತೆರಡು ವರ್ಷ. ನನಗೆ ಆಗ… ಹತ್ತು ವರ್ಷ, ಹನ್ನೆರಡು ವರ್ಷದ ಮಕ್ಕಳು… ತಪ್ಪು ನಿರ್ಧಾರಗಳಿಂದ ಪಾಪರ್ ಆಗಿ ನಿಂತಿದ್ದೆ. ಬೆಂಗಳೂರಿನ ನನ್ನ ಬಾಡಿಗೆ ಮನೆ ಬಸವೇಶ್ವರನಗರದ ಬಳಿಯ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿತ್ತು. ಲಿಜ್ಜತ್ ಹಪ್ಪಳದ ಕಾರಖಾನೆಯ ಕಛೇರಿ ನಮ್ಮ ಮನೆಯ ಬಳಿಯೇ ಇತ್ತು. ಹಪ್ಪಳ ಲಟ್ಟಿಸುವ ಕೆಲಸ ಸಿಗುತ್ತದೇನೋ ನೋಡಬೇಕೆಂದು ಗೀತಾ ಕೆಲವು ದಿನಗಳಿಂದ ಓಡಾಡುತ್ತಿದ್ದಳು. ನಾನು ಲಂಕೇಶ್ ಪತ್ರಿಕೆಗೆ ವಾರಬಿಟ್ಟು ವಾರ ಅಣಕಗಳೆಂಬ ವಿಡಂಬನಾ ಲೇಖನಗಳನ್ನು ಬರೆಯುತ್ತಿದ್ದೆ. ತಿಂಗಳಿಗೆ ಆರು ನೂರು ಕೊಡುತ್ತಿದ್ದರು. ಆದರೆ ಮನೆ ಬಾಡಿಗೆ ಒಂಭೈನೂರು. ಹೈರಾಣಾಗಿಬಿಟ್ಟಿದ್ದೆ. ಆ ದಿನಗಳಲ್ಲಿ ಬೆಳಕು ಮುಗಿದು, ಅಮ್ಮನ ತೊಡೆಯ ಮೇಲೆ ತಲೆ ಇಟ್ಟು ಕಣ್ಣಲ್ಲಿ ನೀರು ತುಂಬಿ ಮಲಗಿದಾಗ ಹಣೆ ನೇವರಿಸಿ ಅಮ್ಮ ಸಮಾಧಾನ ಹೇಳದಿದ್ದರೆ ಏನಾಗುತ್ತಿತ್ತೋ ತಿಳಿಯದು. ಇರುತ್ತಿದ್ದೆನೋ ಇಲ್ಲವೋ. ಸಹಿಸಿಕೋ ಕೆಲವು ದಿನ ಎಲ್ಲಾ ಸರಿ ಹೋಗುತ್ತದೆ ಎಂದು ಅಮ್ಮ ಹೇಳಿದ ಕೆಲವೇ ತಿಂಗಳಿಗೆ ತೀರಾ ಅನಿರೀಕ್ಷಿತವಾಗಿ ಪವಾಡವೆಂಬಂತೆ ನನ್ನ ಮೊದಲ ಧಾರಾವಾಹಿ ‘ಮುಖಾಮುಖಿ’ ನಿರ್ದೇಶನ ಮಾಡಲು ಅವಕಾಶ ಸಿಕ್ಕಿತು. ಗೆಳೆಯ ಗುರು ಮತ್ತು ಗೆಳೆಯ ಶೆಣೈ ಆ ಅವಕಾಶ ತಂದುಕೊಟ್ಟವರು. ಮುಖಾಮುಖಿ ಎಲ್ಲರಿಗೂ ಇಷ್ಟವಾಗಿ ಅದ್ಭುತ ಗೆಲುವು ಕಂಡಿತು.
ನೆಮ್ಮದಿಯ ದಿನಗಳು ಕಾಣಲು ಶುರುವಾಯಿತು. ಹಿಂತಿರುಗಿ ನೋಡಿದ್ದು ಕಡಿಮೆ. ಮತ್ತೆ ಬದುಕಿನಲ್ಲಿ ಮೆಟ್ಟಿಲುಗಳನ್ನು ಏರತೊಡಗಿದೆ. ನನ್ನ ಎಲ್ಲ ಧಾರಾವಾಹಿಗಳೂ ಮೊದಲ ಸ್ಥಾನ ಪಡೆದು ಎಲ್ಲರೂ ನನ್ನನ್ನು ಆದರಿಸಲು ಶುರು ಮಾಡಿದ್ದೆ ನೆನಪು. ನನ್ನನ್ನು ಹಾಗೆ ಅನೇಕ ಬಾರಿ ಸಂಕಟದ ಸಮಯದಲ್ಲಿ ಬದುಕಲು ಧೈರ್ಯ ಕೊಟ್ಟಿದ್ದು ಅಮ್ಮ. ಅಮ್ಮ ಹೋಗಿ ಹನ್ನೆರಡು ವರ್ಷ ಮುಗಿಯಿತು. ಈಗಲೂ ತೀರಾ ತಲ್ಲಣದ ದಿನಗಳಲ್ಲಿ ಅಮ್ಮನ ನೆನಪು ತುಂಬಾ ಆಗುತ್ತದೆ. ಕನಸಲ್ಲಿ ಬರುತ್ತಾರೆ. ಧೈರ್ಯ ಬರುತ್ತದೆ. ಹುಣ್ಣಿಮೆಗಳೆಂದರೆ ಅಮ್ಮನಿಗೆ ಮುಂಚಿನಿಂದಲೂ ಇಷ್ಟ. ಹೋಳಿ ಹುಣ್ಣಿಮೆಯಂದೇ ಹೋಗಿಬಿಟ್ಟರು. ಇಂದು ಹೆಣ್ಣು ಮಕ್ಕಳ ದಿನ. ಅಮ್ಮನ ದಿನ. ನಂತರದ ದಿನಗಳಲ್ಲಿ ಗೆಲ್ಲುವ ಹೆಣ್ಣು ಮಕ್ಕಳ ಕಥೆ ಮಾqಡಿದೆ.
ಬರುವ ಬಾಗಿಲು ಮಣ್ಣು
ಬಿಡುವ ಬಾಗಿಲು ಮಣ್ಣು ||
ನಡುವೆ ಕಾಯುವುದು ತಾಯ ಕಣ್ಣು… |
(ಒಂದು ಹಳೆಯ ಬರಹ)
(ಕೃಪೆ : ಟಿ.ಎನ್.ಸೀತಾರಾಂ ಫೇಸ್ಬುಕ್ನಿಂದ)
