ಸಾಹಸಿ ಕನ್ನಡಿಗನೊಬ್ಬನ ಪ್ರವಾಸಿ ಕಥನ
ಮುಂದುವರೆದು ಅಲ್ಲೆ ಇದ್ದ Artemis ಟೆಂಪಲಿನಲ್ಲಿ ಫೊಟೋ ತೆಗೆಯುತ್ತಿದ್ದಾಗ ಹದಿಹರೆಯದ ಬೆಳ್ಳಗಿನ ಹುಡುಗನೊಬ್ಬ ನಾನು ಫೋಟೋ ತೆಗೆಯುತ್ತೇನೆಂದು ಅವನೇ ಬಲವಂತವಾಗಿ ಮೊಬೈಲು ಕಿತ್ತುಕೊಂಡ. ಒಂದಷ್ಟು ಫೊಟೋ ತೆಗೆಯುತ್ತ ಸಖತ್ತಾಗಿದೆ, ಸಖತ್ತಾಗಿದೆ, ಅನ್ನುವರ್ಥದ ಅವನ ಭಾಷೆಯಲ್ಲಿ ನನ್ನ ಹೊಗಳಿದಂತೆ ಆ್ಯಕ್ಟ್ ಮಾಡ್ತಿದ್ದ. ಮೊಬೈಲು ಕಿತ್ತುಕೊಂಡಾಗಲೇ ಟ್ಯಾಕ್ಸ್ ಗಿರಾಕಿ ಅಂದುಕೊಂಡಿದ್ದೆ. ನನಗಿಂತ ಹತ್ತಿಪ್ಪತ್ತು ಅಡಿ ಮುಂದೆ ಹೋಗುತ್ತ ಇಲ್ಲಿಗೆ ಬಾ ಅನ್ನುವಂತೆ ಕರೆಯುತ್ತ ಫೋಟೋ ತೆಗೆಯುತ್ತಿದ್ದ. ಪುಣ್ಯಾತ್ಮ ಮೊಬೈಲೇನಾದರೂ ದೇಪಿಕೊಂಡು ಹೋದಾನು ಅಂತ ಯಾವಾಗ ಮೈಂಡಿಗೆ ಬಂತೋ ಅವನತ್ತಿರಕ್ಕೆ ನಿಂತು ಒಂದೆರಡು ಫೋಟೋ ತೆಗಿಸಿ ಸಾಕೆಂದು ಬಲವಂತವಾಗಿ ಮೊಬೈಲು ವಾಪಾಸು ತೆಗೆದುಕೊಂಡೆ. ಐದು ದಿನಾರ್ ಕೊಡಲೇ ಬೇಕೆಂದು ಹಟಕ್ಕೆ ಬಿದ್ದ. ಚೇಂಜೂ ಇರಲಿಲ್ಲ.ದಂಡ ಕಟ್ಟಿ ಬಂದೆ. ನಿರುದ್ಯೋಗಿ, ನಿರಾಶ್ರಿತರ ದೊಡ್ಡ ಗುಂಪೇ ಇಲ್ಲಿದೆ.ಹಣಕ್ಕಾಗಿ ಇಂತ ಹುಡುಗರು ಏನು ಬೇಕಾದರೂ ಮಾಡೋದು ಗ್ಯಾರಂಟಿ.ಇಂತವರೇ ಭಯೋತ್ಪಾದನೆಯ ಸರಕು. ಜೆರಾಷ್ ಇನ್ನೊಂದು ರೌಂಡ್ ಸುತ್ತಿ, ೧೨ ದಿನಾರ್ ನ Buffet ಊಟ ಮುಗಿಸುವಾಗ ಸಂಜೆ ನಾಲಕ್ಕು ಆಗಿತ್ತು. ಅಲ್ಲಿಂದ ಒಂದು ಗಂಟೆ ಡ್ರೆೈವ್ ಬಳಿಕ ಅಮ್ಮಾನ್ ನಗರದ ಹೊಟೇಲ್ ಗೆರಾಸ(GERASA)ಗೆ ಹೋಗಿ ಉಳಿದು ಕೊಂಡೆವು. ಸ್ನಾನ ಮಾಡಿ ಮಲಗಿದ್ದೊಂದು ಗೊತ್ತು. ನಿದ್ರಾದೇವಿ ಆವರಿಸಿಕೊಂಡಿದ್ದಳು. ಮರುದಿನ ಆರಕ್ಕೆ ಎದ್ದವನೇ ಸಿಟಿಯನ್ನೊಮ್ಮೆ ರೌಂಡು ಹಾಕುವ ಕೆಟ್ಟ ಸಾಹಸ ಮಾಡೋಕೆ ಹೊರಟೆ. ಅಂದು ಶುಕ್ರವಾರ. ನಾವಿದ್ದ ಹೊಟೇಲು ಜೋರ್ಡಾನ್ ಯುನಿವರ್ಸಿಟಿಯ ಮುಂಭಾಗವೇ ಇತ್ತಾದರು ವಾಕಿಂಗು ಮಾಡೋ ಪ್ರಾಣಿಗಳ್ಯಾವು ಆರಕ್ಕೆ ಕಾಣಲೇ ಇಲ್ಲ. ಅಲ್ಲೊಬ್ಬ ಇಲ್ಲೊಬ್ಬ ಅನ್ನುವಂತೆ ಒಬ್ಬೊಬ್ಬರು ತಿರುಗಾಡುತ್ತಿದ್ದರು ಅಷ್ಟೆ. ನಾನಿದ್ದ ಏರಿಯಾ ಅಂತದ್ದೋ ಅಥವಾ ಬೆಳ್ಳಂಬೆಳಗ್ಗೆ ವಾಕಿಂಗ್ ಸೇಫ್ ಅಲ್ಲವೋ ಶುಕ್ರವಾರದ ರಜೆಯೋ ಗೊತ್ತಾಗಲಿಲ್ಲ. ಬೆಂಗಳೂರಿನಲ್ಲಿ ಮುಂಜಾನೆ ನಾಲ್ಕಕ್ಕೇ Start ಆಗುವ ವಾಕಥಾನ್ ಇಲ್ಲಿ ಚಾನ್ಸೇ ಇಲ್ಲ ಅಂದುಕೊಂಡೆ. ಅಮ್ಮಾನಿನ ಕೆಲಕಡೆಯ ಸ್ಕೆೈವಾಕುಗಳಿಗೆ ನಮ್ ಮಾಲ್ಗಳಲ್ಲಿರುವಂತೆ ಎಸ್ಕಲೇಟರುಗಳನ್ನು ಅಳವಡಿಸಲಾಗಿದೆ. ಬಿಲ್ಡಿಂಗುಗಳು ಬಹುತೇಕ ಮರಳಿನ ಕಲರಿನದ್ದು. Sand stone ಗಳನ್ನು ಕಟ್ಟಡ ಕಟ್ಟಲು ಯಥೇಚ್ಛವಾಗಿ ಬಳಸಿದಂತೆ ಕಂಡು ಬಂತು.
ಎಲ್ಲ ಬ್ರಾಂಡಿನ ಕಾರು ಜೀಪು ಎಸ್ಯುವಿಗಳು ಇವೆ. ಟೊಯೋಟ ಮತ್ತು ಮರ್ಸಿಡಿಸ್ ಕಂಪೆನಿಯ ಅಪ್ಟೇಡೆಡ್ ವೆಹಿಕಲ್ಲುಗಳು, ಕ್ಯಾರವಾನುಗಳು, ಸೆಡಾನುಗಳ ಸಂಖ್ಯೆ ಹೆಚ್ಚೆಚ್ಚು. ಅವತ್ತಿನ ದಿನ ನಮ್ಮ ದಿನಚರಿ ಇದ್ದದ್ದು ಅಮ್ಮಾನ್ ನಗರ ಹಾಗೂ ಒಂದಷ್ಟು Castle ಗಳನ್ನು ನೋಡೋದು. ಈ ಕ್ಯಾಸಲ್ಗಳು ಮಧ್ಯಯುಗದ ಕಾಲದಲ್ಲಿ ರಾಜರುಗಳು/ಉನ್ನತ ವ್ಯಕ್ತಿಗಳು ಪ್ರತಿಷ್ಟೆಗಾಗಿ ಮತ್ತು ಶತ್ರುಗಳ ದಾಳಿಯಿಂದ ತಮ್ಮ ಹಾಗೂ ಕುಟುಂಬದ ರಕ್ಷಣೆಗೆ ಎತ್ತರದ ಪ್ರದೇಶಗಳಲ್ಲಿ/ಆಯಕಟ್ಟಿನ ಜಾಗಗಳಲ್ಲಿ ನಿರ್ಮಿಸಿಕೊಂಡಂತಹ ಕಲ್ಲಿನ ದೊಡ್ಡದಾದ ಕಟ್ಟಡಗಳು. ಇಂತಹ ಎರಡು ಕ್ಯಾಸಲ್ ಗಳನ್ನು ನೋಡುತ್ತಿರುವಾಗಲೇ ನಮ್ಮ ಡ್ರೈವರ್ ಅದ್ನಾನ್ ಗೆ ಟೂರ್ ಏಜೆನ್ಸಿ ಕಡೆಯಿಂದ ಕರೆ ಬಂತು. ಅಷ್ಟರವರೆಗೆ ನಾರ್ಮಲ್ ಆಗಿದ್ದ ಅವನು ಇವತ್ತು ಅಮ್ಮಾನ್ ಸಿಟಿ ಟೂರ್ ಬೇಡ,ಸೀದ ಹೊಟೇಲ್ಲಿಗೆ ವಾಪಾಸು ಹೋಗೋಣ ಅಂದ. ಏನ್ ಗುರೂ ವಿಷ್ಯ ಅಂದಾಗ ಅಮ್ಮಾನ್ ನಗರದಲ್ಲಿ ಪ್ಯಾಲೀಸ್ಟೀನಿಯರ ದೊಡ್ಡ ಪ್ರೊಟೆಸ್ಟ್ ನಡೆಯುತ್ತಿದೆಯಂತೆ. Its not Safe ಅಂತ ಅಲ್ಲೇ ಹುಟ್ಟಿ ಬೆಳೆದ ಮೊಹಮದ್ ಅದ್ನಾನ್ ಹೇಳುತ್ತಿದ್ದಂತೆ ಒಂದು ರೌಂಡ್ ಪಿಚ್ಚರ್ ಬಿಟ್ಟಂತೆ ಆಯ್ತು. ಅಲ್ಲಿಂದ ಸೀದ ಮಧ್ಯಾಹ್ನವೇ ರೂಮಿನೊಳಗೆ ಸೇರಿಕೊಂಡ್ವಿ. ಅಂದು ಶುಕ್ರವಾರ ನಮಾಜು ಮುಗಿಸಿದ ಅಮ್ಮಾನಿನ ಸುಮಾರು ಐವತ್ತು ಸಾವಿರ ಪ್ಯಾಲಿಸ್ಟೆೈನಿಯರು ಇಸ್ರೇಲ್ ವಿರುಧ್ಧ ಮತ್ತು ಜೋರ್ಡಾನು ಯುದ್ಧಕ್ಕೆ ಕೈ ಜೋಡಿಸಲು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಸಂಪೂರ್ಣ ನಗರವೇ ಅಂದು ಬಂದ್ ಆಗಿತ್ತು. ರೂಮಿನಲ್ಲೇ ಕುಳಿತ ನಾವು ಸಂಜೆ ನಾಲ್ಕು ಗಂಟೆಗೆ ನಗರದ ಹೊರವಲಯದಲ್ಲಿರುವ ಹೊಟೇಲು ಪಕ್ಕದಲ್ಲೇ ಇದ್ದ McDonaldಗೆ ಹೋಗಿ ಕಾಫಿ ಕುಡೀತಾ ಕೂತಿದ್ದೆವು. ಅಷ್ಟರಲ್ಲಿ ಸಾವಿರಾರು ಜನರು ತೆರೆದ ಕಾರು, SUVಗಳಲ್ಲಿ ಪ್ಯಾಲಿಸ್ಟೀನು ಹಾಗೂ ಐಸಿಸ್ ಧ್ವಜ, ವೆಪನ್ನುಗಳನ್ನಿಡಿದುಕೊಂಡು ಧಿಕ್ಕಾರ ಕೂಗುತ್ತಾ ಹೋಗುತ್ತಿದ್ದಂತೆ ಅರ್ಧ ಜೀವವೇ ಹೋದಂತಾಯ್ತು. ವೀಡಿಯೋ ಮಾಡುವ ಯಾವ ಸಾಹಸವನ್ನೂ ನಾವಿಬ್ಬರೂ ಮಾಡಲಿಲ್ಲ. ಈ ಅರೇಬಿಕ್ ರಾಷ್ಟ್ರಗಳಲ್ಲಿ ಭಾರತೀಯರನ್ನು ಬಹಳ ಸುಲಭವಾಗಿ ಗುರುತಿಸುತ್ತಾರೆ. Hello ಇಂಡಿಯಾ ಅಂತಲೋ, Hello ಹಿಂದಿ ಅಂತಲೋ ನಮ್ಮನ್ನ ಸಂಬೋದಿಸುತ್ತಾರೆ.
ಈಜಿಪ್ಟ್ ಹೋದಾಗಲೂ ನನ್ನದು ಇದೇ ಅನುಭವ. ಈಗ ನಡೆಯುತ್ತಿರುವ ಯುದ್ದಕ್ಕೂ ಭಾರತಕ್ಕೂ ಯಾವ ಸಂಬಂದವಿಲ್ಲದಿದ್ದರೂ ಸುಮ್ಮನೆ ಎತ್ತಾಕಿಕೊಂಡು ಹೋಗಿ Hostage ಆಗಿ ಇಟ್ಟುಕೊಂಡರೆ ನಮ್ಮ ಗತಿ ಏನು ಎಂದು ನೆನೆದು ಸೀದಾ ರೂಮು ಸೇರಿದವರು ಮಾರನೆ ದಿನ ಬೆಳಗ್ಗೆಯರೆಗೂ ಹೊರಬರಲಿಲ್ಲ. ಹಾಗೆ ಮುಗಿದಿತ್ತು ಅಮ್ಮಾನಿನ ಎರಡನೇ ರಾತ್ರಿ.ಮರುದಿನ ನಾವುಳಿದುಕೊಂಡಿದ್ದ ಗೆರಾಸ ಹೊಟೇಲ್ಲಿನಲ್ಲಿ ತಿಂಡಿ ತಿನ್ನುತ್ತಿದ್ದಾಗ ತಿಳಿದ ವಿಷಯವೇನೆಂದರೆ ಹೊಟೇಲಿನ ಮುಖ್ಯ ಅಡುಗೆಯವನಿಂದ ಹಿಡಿದು ಬಹುತೇಕ ಉದ್ಯೋಗಿಗಳು ಪ್ಯಾಲೆಸ್ಟೆೈನ್ ನಿರಾಶ್ರಿತರೇ ಆಗಿದ್ದರು. ರೂಮ್ ಚೆಕೌಟ್ ಮಾಡಿ ಅಲ್ಲಿಂದ ನೇರವಾಗಿ ಹೊರಟಿದ್ದು ಅಮ್ಮಾನಿನಿಂದ ಸುಮಾರು ೨೫೦ ಕಿ.ಮೀ ದೂರದಲ್ಲಿದ್ದ ಜಗತ್ತಿನ ಏಳು ಅದ್ಭುತಗಳಲ್ಲಿ ಎರಡನೇ ಸ್ಥಾನದಲ್ಲಿರುವ, ಜೋರ್ಡಾನಿಗೆ…
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ….)
(ಲೇಖಕರು ದಿವಿನ್ ಮಗ್ಗಲಮಕ್ಕಿ, ಚಿಕ್ಕಮಗಳೂರು)
