ರಾಜಕಾರಣ ಮಾಡುವುದು ಸಿನಿಮಾ ಮಾಡಿದಷ್ಟು ಸುಲಭವಲ್ಲ’ ಹೀಗೆಂದು ಹೇಳಿದ್ದವರು ಕಮಲಹಾಸನ್. ಜಯಲಲಿತಾ ಅವರ ಸಾವಿನ ನಂತರದ ದಿನಗಳಲ್ಲಿ ರಾಜಕೀಯಕ್ಕೆ ಬಂದು, ಹೊಸ ಪಕ್ಷ (ಮಕ್ಕಳ ನೀಧಿಮಯ್ಯಂ) ಸ್ಥಾಪಿಸಿ, ಒಂದೂ ಸ್ಥಾನಗೆಲ್ಲಲಾಗದೇ ನಿರಾಶೆ ಅನುಭವಿಸಿದವರು ಕಮಲಹಾಸನ್ ೨೦೨೧ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಅವರ ಪಕ್ಷ ಕೇವಲ ಶೇ ೨.೬ ಮತ ಪ್ರಮಾಣಗಳಿಸಿತ್ತು. ಇದೇ ರೀತಿ ರಾಜಕೀಯಕ್ಕೆ ಬರಬೇಕೆಂಬ ಆಸೆ ಇದ್ದರೂ, ಅದರ ಕಷ್ಟ ನಷ್ಟದ ಬಗ್ಗೆ ಆಲೋಚಿಸಿ ಕೊನೆಯ ಕ್ಷಣದಲ್ಲಿ ಚುನಾವಣಾ ರಾಜಕೀಯದಿಂದ ದೂರ ಸರಿದವರು ರಜನಿಕಾಂತ್. ಸಿನಿಮಾರಂಗದಲ್ಲಿ ರಜನಿ-ಕಮಲ್ ಸಾಧಿಸಲು ಆಗದ್ದನ್ನು ಅವರಿಗಿಂತ ಕಿರಿಯರಾದ (51 ವರ್ಷ) ದಳಪತಿ ವಿಜಯ್ ಸಾಧಿಸಿದ್ದಾರೆ.ದ್ರಾವಿಡ ರಾಜಕಾರಣದ ಹೆಸರಿನಲ್ಲಿ ರಾಜ್ಯದಲ್ಲಿ ಪಾರಮ್ಯ ಸಾಧಿಸಿದ್ದ ಡಿಎಂಕೆ, ಎಐಎಡಿಎಂಕೆಯಂಥ ಪಕ್ಷಗಳನ್ನು, ಅವುಗಳ ನುರಿತ ನಾಯಕರನ್ನು ಮಣಿಸಿ, ತಮಿಳುನಾಡಿನ ಮುಖ್ಯಮಂತ್ರಿ ಗಾದಿ ಏರಲು ಸಜ್ಜಾದರೆ. ಸುಮಾರು ಆರು ದಶಕಗಳಿಂದ ತಮಿಳುನಾಡನ್ನು ಇವೆರಡೇ ಪಕ್ಷಗಳು ಅಳುತ್ತಿದ್ದವು. ಆ ಪರಂಪರೆಯನ್ನು ತುಂಡರಿಸಿರುವ ವಿಜಯ್, ಹೊಸ ಪಕ್ಷವನ್ನು ಸ್ಥಾಪಿಸಿ, ಅದನ್ನು ಅಧಿಕಾರದ ಹೊಸ್ತಿಲಿಗೆ ತಂದು ನಿಲ್ಲಿಸಿರುವುದು ಕಡಿಮೆ ಸಾಧನೆಯೇನಲ್ಲ. ಕೇವಲ ಎರಡು ವರ್ಷಗಳ ಹಿಂದೆ (2024ರಲ್ಲಿ) ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷ ಸ್ಥಾಪಿಸಿ ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 234 ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಅವರು, ತಮ್ಮ ಮೊದಲ ಪ್ರಯತ್ನದಲ್ಲೇ ಅಚ್ಚರಿಯ, ಅನಿರೀಕ್ಷಿತವಾದ ಗೆಲುವನ್ನು ದಕ್ಕಿಸಿಕೊಂಡಿದ್ದಾರೆ. ಇದು ಅಚ್ಚರಿದಾಯಕ ಗೆಲುವು ಎಂದು ಜನರಿಗೆ ಅನ್ನಿಸಿದರೂ, ಇದರ ಹಿಂದೆ ವಿಜಯ್ ಅವರ ಸುಮಾರು ಎರಡು ದಶಕಗಳ ಪ್ರಯತ್ನ, ಪರಿಶ್ರಮ ಇದೆ. ತಂದೆ, ಸಿನಿಮಾ ನಿರ್ದೇಶಕ ಎಸ್.ಎ.ಚಂದ್ರಶೇಖರ್ ಅವರ ನೆರಳಿನಲ್ಲಿ ಬಾಲನಟನಾಗಿ ಅಡಿಯಿಟ್ಟ ವಿಜಯ್, ಚಿತ್ರರಂಗದಲ್ಲಿ ಬಹುಬೇಗ ಸ್ಟಾರ್ ಆದರು. ಕಮಲಹಾಸನ್, ರಜನಿಕಾಂತ್ ಅವರಂಥ ತಾರೆಗಳ ನಡುವೆ ತಮ್ಮದೇ ವಿಭಿನ್ನ ನಟನಾ ಶೈಲಿ ರೂಢಿಸಿಕೊಂಡರು. ಆತ್ಮವಿಶ್ವಾಸ, ಹಾಸ್ಯ ಇರುವ ವಿಶಿಷ್ಟ ಮ್ಯಾನರಿಸಂನಿಂದ ಬಹಳ ಬೇಗ ತಮಿಳು ಅಭಿಮಾನಿಗಳ ಪ್ರೀತಿ ಗಳಿಸಿ ‘ದಳಪತಿ’ ಎಂದು ಬಿರುದು ಗಳಿಸಿದರು. ತಮಿಳು ಚಿತ್ರರಂಗದಲ್ಲಿ ರಜನಿಕಾಂತ್ ನಂತರದ ದೊಡ್ಡತಾರೆ ಎನ್ನಿಸಿಕೊಂಡರು. ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗೆ ಸಿನಿಮಾ ಜನಪ್ರಿಯತೆಯನ್ನೇ ಅಡಿಪಾಯ ಮಾಡಿಕೊಂಡ ವಿಜಯ್, 2009ರಲ್ಲಿ ‘ವಿಜಯ್ ಮಕ್ಕಳ್ ಇಯಕ್ಕಂ’ (ವಿಜಯ್ ಜನ ಚಳವಳಿ-ವಿಎಂಐ) ಎನ್ನುವ ಅಭಿಮಾನಿ ಸಂಘ ಸ್ಥಾಪಿಸಿದರು. ಅದರ ೮೫ ಸಾವಿರ ಘಟಕಗಳು ರಾಜ್ಯದಾದ್ಯಂತ ಆರಂಭವಾದವು. ಅವುಗಳ ಮೂಲಕ ವಿಜಯ್ ಅವರು ನೆರೆ, ಬರ, ಆರ್ಥಿಕ ನೆರವು, ರಕ್ತದಾನ ಮುಂತಾದ ಸೇವಾ ಕಾರ್ಯಗಳಲ್ಲಿ ತೊಡಗಿದರು. ಅವರ ಸಿನಿಮಾ ಕಾರ್ಯಕ್ರಮಗಳಲ್ಲಿ ರಾಜಕೀಯದ ಮಾತು ಕತೆಗಳು ಕೇಳಿಬರತೊಡಗಿದವು. ‘ದಳಪತಿ’, ನಿರುದ್ಯೋಗ, ಬಡತನದಂಥ ಸಾಮಾಜಿಕ ಸಮಸ್ಯೆಗಳಿಂದ ಹಿಡಿದು ಜಿಎಸ್ಟಿ, ಪೌರತ್ನ ತಿದ್ದುಪಡಿ ಕಾಯ್ದೆಯಂಥ ರಾಷ್ಟ್ರೀಯ ವಿಚಾರಗಳನ್ನೂ ಟೀಕಿಸಿ, ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸುತ್ತಿದ್ದರು. 2011ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆಗೆ ಬೆಂಬಲ ನೀಡುವ ಮೂಲಕ ಅಭಿಮಾನ ಮತವಾಗಿ ಪರಿವರ್ತನೆಯಾಗುವುದೇ ಎನ್ನುವುದನ್ನು ತಮ್ಮದೇ ರೀತಿಯಲ್ಲಿ ಪರೀಕ್ಷಿಸಿದ್ದರು. 2021ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ 169 ವಾರ್ಡ್ಗಳಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ವಿಎಂಐನ 115 ಮಂದಿ ಗೆಲುವು ಸಾಧಿಸಿದ್ದರು. 2024ರ ಫೆಬ್ರುವರಿಯಲ್ಲಿ ಟಿವಿಕೆ ಸ್ಥಾಪಿಸಲು ವಿಜಯ್ ಅವರಿಗೆ ಅಡಿಪಾಯ ಆಗಿದ್ದು ಈ ಗೆಲುವು. ಈಗಿನ ವಿಧಾನಸಭಾ ಚುನಾವಣೆ ಗೆಲುವು ಅವರಿಗೆ ದೊಡ್ಡ ಜವಾಬ್ದಾರಿ ಹೊರಿಸಿದೆ. ದ್ರಾವಿಡ ತಾತ್ವಿಕತೆ ಹಿನ್ನೆಲೆ ಇಲ್ಲದ, ಅಧಿಕಾರ ರಾಜಕಾರಣದ ಅನುಭವ ಇಲ್ಲದ ವಿಜಯ್ ಹೊಸ ಸವಾಲನ್ನು ಹೇಗೆ ಎದುರಿಸಲಿದ್ದಾರೆ ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕಿದ್ದು, ದೇಶದ ಅದರಲ್ಲೂ ತಮಿಳುನಾಡು ಜನ ಕಾದು ನೋಡಬೇಕಿದೆ.
ಆಡಳಿತಾರೂಢ ಡಿಎಂಕೆಯ ಹಿರಿಯ ನಾಯಕ. ಸಹಕಾರ ಸಚಿವ ಕೆ.ಆರ್. ಪೆರಿಯ ಕರುಪ್ಪನ್ ಅವರು ತಿರುಪತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಒಂದು ಮತದಿಂದ ಸೋತಿದ್ದಾರೆ. ಟಿವಿಕೆಯ ಸೀನಿವಾಸ ಸೇತುಪತಿ ಆರ್. ಅವರು 83,375 ಮತ ಪಡೆಯುವ ಮೂಲಕ ಗೆಲುವು ಸಾಧಿಸಿದರೆ, ಪೆರಿಯಕರುಪ್ಪನ್ ಅವರು 83374 ಮತ ಗಳಿಸಿದ್ದಾರೆ. ಅಂತಿಮ ಸುತ್ತಿನ ಮತ ಎಣಿಕೆಯಲ್ಲಿ ಕರುಪ್ಪನ್ ಅವರು 30 ಮತಗಳ ಮುನ್ನಡೆ ಸಾಧಿಸಿದ್ದರು. ಅಂತಿಮ ಅಂಕಿ ಅಂಶಗಳನ್ನು ಪರಿಗಣಿಸಿದಾಗ ಟಿವಿಕೆ ಅಭ್ಯರ್ಥಿಯ ಪರ ಫಲಿತಾಂಶ ಹೊರಹೊಮ್ಮಿತು. ಬಿಜೆಪಿಯ ಕೆ.ಸಿ, ತಿರುಮಾರನ್ ಅವರು 29,054 ಮತ ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ. 2008ರ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದ ಸಿ.ಪಿ. ಜೋಶಿ ಅವರು ಬಿಜೆಪಿ ಅಭ್ಯರ್ಥಿ ಕಲ್ಯಾಣ್ ಸಿಂಗ್ ಚೌಹಾಣ್ ವಿರುದ್ಧ ಒಂದು ಮತದಿಂದ ಸೋತಿದ್ದರು. 35 ವರ್ಷದ ಬಳಿಕ ಅತ್ತೆ-ಅಳಿಯನ ಜೋಡಿ : ‘ಲಾಟರಿ ರಾಜ’ ಎಂದೇ ಪ್ರಸಿದ್ಧರಾಗಿದ್ದ ಸ್ಯಾಂಟಿಯಾಗೊ ಮಾರ್ಟಿನ್ ಕುಟುಂಬದ ಮೂವರು ತಮಿಳುನಾಡು, ಪುದುಚೆರಿ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮಾರ್ಟಿನ್ ಅವರ ಪತ್ನಿ ಲೀಮಾ ರೋಸ್ ಅವರು ತಿರುಚಿರಾಪಳ್ಳಿ ಜಿಲ್ಲೆಯ ಲಾಲ್ಗುಡಿ ವಿಧಾನಸಭಾ ಕ್ಷೇತ್ರದಿಂದ ಎಐಎಡಿಎಂಕೆಯ ಶಾಸಕಿಯಾಗಿ ಆಯ್ಕೆಯಾದರೆ, ಈ ದಂಪತಿಯ ಅಳಿಯ, ಟಿವಿಕೆ ನಾಯಕ ಅಧವ್ ಅರ್ಜುನ ಅವರು ವಿಲ್ಲಿವಕ್ಕಂನಿಂದ ವಿಜಯಿಯಾಗಿದ್ದಾರೆ. 35 ವರ್ಷದ ಬಳಿಕ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾದ ಅತ್ತೆ ಅಳಿಯನ ಜೋಡಿ ರೋಸ್- ಅಧವ್ ಅವರದ್ದಾಗಿದೆ. 1991ರಲ್ಲಿ ಕಾಂಗ್ರೆಸ್ನ ಎ.ಎಸ್. ಪೊನ್ನಮ್ಮಾಳ್ ಹಾಗೂ ಅಳಿಯ ಎಐಎಡಿಎಂಕೆಯ ಎ. ಸುಬ್ಬು ರತ್ನಂ ಅವರು ನೀಲಕೋಟೆ ಮತ್ತು ಪಳನಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಮಾರ್ಟಿನ್ ಅವರ ಪುತ್ರ ಜೋಸ್ ಚಾರ್ಲ್ಸ್ ಮಾರ್ಟಿನ್ ಅವರು ಕಾಮರಾಜ ನಗರದಿಂದ ಪುದುಚೆರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಈ ಮೂವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
