ಸೂರ್ಯನಗರ 4ನೇ ಹಂತದ ವಸತಿ ಯೋಜನೆಗಾಗಿ ಆನೇಕಲ್ ತಾಲ್ಲೂಕಿನಲ್ಲಿ ಕರ್ನಾಟಕ ಗೃಹ ಮಂಡಳಿ ಕೈಗೊಂಡಿದ್ದ 1938.13 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ.
ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಕೋನಸಂದ್ರದ ಆರ್.ಗೋವಿಂದರೆಡ್ಡಿ ಸೇರಿದಂತೆ ಇತರರು ಸಲ್ಲಿಸಿದ್ದ ರಿಟ್ ಮೇಲ್ಮನವಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಡಿ.ಕೆ.ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್.ಶಾಂತಿಭೂಷಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಪ್ರಕಟಿಸಿದೆ. ಈ ಯೋಜನೆಯು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ 268.96 ಚದರ ಕಿ.ಮೀ ಪರಿಸರದ ಸೂಕ್ಷ್ಮವಲಯದ ವ್ಯಾಪ್ತಿಯಲ್ಲಿ ಬರುತ್ತದೆ. ಇಡೀ ಯೋಜನೆ ಇಲ್ಲಿನ ಪರಿಸರ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ಜೀವಜಂತುಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ’ ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿದೆ. ಮಾನವನ ಅಸ್ತಿತ್ವಕ್ಕೆ ವಸತಿ ಮಾತ್ರವೇ ಅಗತ್ಯವಲ್ಲ. ಪರಿಸರ, ವನ್ಯಜೀವಿಗಳು, ಅರಣ್ಯ ಹೊಳೆಗಳೂ ಸೇರಿದಂತೆ ಪ್ರಕೃತಿಯ ಅನೇಕ ಅಂಶಗಳು ಸಮಾನವಾಗಿ ಆದ್ಯತೆ ಪಡೆದಿರುತ್ತವೆ.
ಪ್ರಸ್ತಾವಿತ ಸೂರ್ಯನಗರ ಯೋಜನೆಯು ಸೂರ್ಯನಗರ ಹಂಚಿಕೆದಾರರಿಗೆ ಮತ್ತು ಸಾರ್ವಜನಿಕರಿಗೆ ಕೈಗೆಟುಕುವ ಹಾಗೂ ಯೋಜಿತ ವಸತಿ ಫ್ಲಾಟ್ಗಳನ್ನು ನೀಡುವ ಗುರಿಯನ್ನು ಹೊಂದಿರುವುದೇನೊ ಸರಿ. ಆದರೆ, ಇಂತಹ ಒಂದು ಯೋಜನೆಯನ್ನು ಸ್ಥಳಾಂತರಿಸಿ ಅವುಗಳ ನೈಸರ್ಗಿಕ ಆವಾಸ ಸ್ಥಾನವನ್ನು ಕಸಿದುಕೊಳ್ಳುವ ಮೂಲಕ ನಡೆಸುತ್ತಿರುವುದು ದುರದೃಷ್ಟಕರ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸೂರ್ಯನಗರ ನಾಲ್ಕನೇ ಹಂತದಲ್ಲಿ (ಇಂಡ್ಲವಾಡಿ) 80 ಸಾವಿರ ಆಸನಗಳ ಸಾಮರ್ಥ್ಯದ ಸುಸಜ್ಜಿತವಾದ ಅಂತರ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಈ ವರ್ಷದ ಮೇ ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಆದರೆ, ಈಗ ಭೂ ಸ್ವಾಧೀನ ರದ್ದಾಗಿರುವುದರಿಂದ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ.
ಮೊದಲ ಹಂತದಲ್ಲಿ ರೂ.1950 ಕೋಟಿ ವೆಚ್ಚದಲ್ಲಿ ಸ್ಟೇಡಿಯಂ ಮತ್ತು ಅದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣ-ವಿದ್ಯುತ್ ಸೌಲಭ್ಯ ಇತ್ಯಾದಿಗಳನ್ನು ಕಲ್ಪಿಸಲು ಉದ್ದೇಶಿಸಲಾಗಿತ್ತು. ಎರಡನೇ ಹಂತದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಲಾಗುತ್ತದೆ. ಇದರಲ್ಲಿ ಒಳಾಂಗಣ, ಹೊರಾಂಗಣ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದಲ್ಲದೆ ಸಮಾವೇಶ ಕೇಂದ್ರ ಸುಸಜ್ಜಿತವಾದ ಹೋಟೆಲ್ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗುತ್ತದೆ. ಇವೆಲ್ಲವುಗಳಿಗೆ ಸುಮಾರು 21 ಸಾವಿರ ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು ಎಂದು ತಿಳಿದುಬಂದಿದೆ.
ಇದಲ್ಲದೆ, ನಾಲ್ಕನೇ ಹಂತದಲ್ಲಿ ಗೃಹಮಂಡಳಿಯು ನಾಲ್ಕು ಸಾವಿರ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಶೇ. 30ರಷ್ಟನ್ನು ಭೂಮಿ ನೀಡಿದ ರೈತರಿಗೆ ಹಾಗೂ ಇನ್ನುಳಿದ ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಿದೆ. ನ್ಯಾಯಾಲಯದ ಆದೇಶದಿಂದಾಗಿ ಅವರೆಲ್ಲ ಈಗ ಆತಂಕಕ್ಕೆ ಒಳಗಾಗಿದ್ದಾರೆ.
ಕರ್ನಾಟಕ ಗೃಹ ಮಂಡಳಿಯು ವಸತಿ ಬಡಾವಣೆ ನಿರ್ಮಾಣದ ಉದ್ದೇಶಕ್ಕಾಗಿ ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ, ಕೋನಸಂದ್ರ, ಕಾಡುಜಕ್ಕನಹಳ್ಳಿ, ಬಗ್ಗನದೊಡ್ಡಿ ಮತ್ತು ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ 2,220 ಎಕರೆ ಹಾಗೂ 2 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು; ಭೂ ಸ್ವಾಧೀನ ಕಾಯ್ದೆ-1984ರ ಕಲಂ 4(1)ರ ಅಡಿಯಲ್ಲಿ 2013ರ ಅಕ್ಟೋಬರ್ 19ರಂದು ಪ್ರಾಥಮಿಕ ಅಧಿಸೂಚನೆ ಹಾಗೂ ಅಂತಿಮವಾಗಿ 2015ರಲ್ಲಿ ಮೂರು ಹಂತಗಳಲ್ಲಿ 1,938.13 ಎಕರೆ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ರಾಜ್ಯ ಉಚ್ಚನ್ಯಾಯಾಲಯದ ರದ್ದುಗೊಳಿಸುವ ತೀರ್ಪಿನಿಂದಾಗಿ ವಸತಿ ಬಡಾವಣೆಯ ಅಭಿವೃದ್ಧಿಯು ಡೋಲಾಯಮಾನವಾಗಿ ಹಲವಾರು ಬಿಕ್ಕಟ್ಟುಗಳಿಗೆ ದಾರಿ ಮಾಡಿದ್ದಲ್ಲದೆ ಭೂಮಾಲೀಕರು ಮತ್ತು ರೈತರಲ್ಲಿ ಆತಂಕ ಉಂಟು ಮಾಡಿದ್ದು ಮುಂದಿನ ಬೆಳವಣಿಗೆಗಳ ಬಗ್ಗೆ ಕಾದು ನೋಡಬೇಕಿದೆ.
