ಭಾರತದಲ್ಲಿ ಹೋಟೆಲ್, ರೆಸ್ಟೋರೆಂಟ್ ಮುಂತಾದೆಡೆ ಆಹಾರದ ಸುರಕ್ಷತೆ ಖಾತರಿಪಡಿಸುವುದು, ಔಷಧಗಳು ನಿಗದಿತ ಗುಣಮಟ್ಟ ಹೊಂದಿರುವಂತೆ ನೋಡಿಕೊಳ್ಳಬೇಕಾದದ್ದು ಎಫ್ಡಿಎ ಜವಾಬ್ದಾರಿ. ಆದರೆ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಭಾರತ ದೇಶದಲ್ಲಿ ಇಂತಹ ಸೂಕ್ಷ್ಮ ವಿಚಾರಕ್ಕೆ ತಲೆ ಕೆಡಿಸಿಕೊಂಡ ಸಚಿವರು, ಅಧಿಕಾರಿಗಳು ಎಷ್ಟು ಜನ ಇದ್ದಾರೆ. ಆದರೆ ಈ ವಿಷಯಗಳಲ್ಲಿ ತುಕಾರಾಮ್ ಮುಂಡೆ ಅವರು ಎಫ್ಡಿಎ ಆಯುಕ್ತರಾಗಿ ಬಂದ ಮೇಲೆ ಆ ಕೆಲಸ ಆರಂಭಿಸಿದರು. ಸ್ಟಾರ್ ಹೋಟೆಲ್ಗಳು ಸೇರಿದಂತೆ ಬೀದಿ ಬದಿ ಆಹಾರ ಮಾರುವವರು, ರೆಸ್ಟೋರೆಂಟ್ಗಳು, ಡಾಬಾಗಳ ಮೇಲೆ ದಾಳಿ ಮಾಡಿ, ಗ್ರಾಹಕರಿಗೆ ಅಸುರಕ್ಷಿತ ಆಹಾರ ಪೂರೈಸುತ್ತಿದ್ದವರ ಮೇಲೆ ಕ್ರಮ ಜರುಗಿಸುವ ಆಂದೋಲನವನ್ನೇ ಆರಂಭಿಸಿದರು. ಪ್ಯಾಕೇಜಿಂಗ್ ಮಾಡಲಾದ ಆಹಾರ ಪದಾರ್ಥಗಳನ್ನು ಮಾರುವ ಮಳಿಗೆಗಳ ಮೇಲೆ ದಾಳಿ ಮಾಡಿ, ಪ್ಯಾಕೇಜ್ ಪದಾರ್ಥಗಳಲ್ಲಿ ಹಲವು ನ್ಯೂನತೆಗಳನ್ನು ಪತ್ತೆ ಹಚ್ಚಿದರು. ಅವರು ಎಫ್ಡಿಎ ಆಯುಕ್ತರಾಗಿ ಇದೇ ಸೆಪ್ಟೆಂಬರ್ 2ಕ್ಕೆ 100 ದಿನ ಪೂರೈಸಿದ್ದಾರೆ. ಈ ಅವಧಿಯಲ್ಲಿ ಅವರು 3,000ಕ್ಕೂ ಅಧಿಕ ದಾಳಿಗಳನ್ನು ನಡೆಸಿದ್ದಾರೆ. ನಿಯಮ ಮೀರಿ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಾಲಿವುಡ್ನ ಚಿತ್ರತಾರೆಯರಿಗೂ ಬಿಸಿ ಮುಟ್ಟಿಸಿದ್ದಾರೆ.
ಮುಂಡೆ ಅವರ ಈ ರೀತಿಯ ಕಾರ್ಯಶೈಲಿ ಹೊಸದೇನಲ್ಲ. ಐಎಎಸ್ ಅಧಿಕಾರಿಯಾಗಿ ಮೊದಲ ಹುದ್ದೆ ವಹಿಸಿಕೊಂಡ ದಿನದಿಂದಲೂ ಅವರು ಇದೇ ರೀತಿ ಇದ್ದಾರೆ. ಸೋಲಾಪುರದ ಬಾರ್ಕಿ ನಗರಪಾಲಿಕೆಯ ತರಬೇತಿ ನಿರತ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದಾಗಲೇ, ಅಕ್ರಮ ಕಟ್ಟಡಗಳ ಧ್ವಂಸ ಕಾರ್ಯಾಚರಣೆ ಆರಂಭಿಸಿದ್ದರು. ನಾಂದೇಡ್ನ ಡೆನ್ನೂರ್ ಉಪವಿಭಾಗದಲ್ಲಿ ಅಕ್ರಮ ಮರಳು ಸಾಗಣೆ ವಿರುದ್ಧ ಮಧ್ಯರಾತ್ರಿ ಕಾರ್ಯಾಚರಣೆಗಳನ್ನು ನಡೆಸಿದ್ದರು. ಸ್ಥಳೀಯ ರಾಜಕಾರಣಿಗಳ ಅವಕೃಪೆಗೆ ಗುರಿಯಾಗಿ ಅಲ್ಲಿಂದ ವರ್ಗಾವಣೆಗೊಂಡಾಗ, ಪೊಲೀಸ್ ರಕ್ಷಣೆಯಲ್ಲಿ ಅವರು ತೆರಳಬೇಕಾಯಿತು. ಆದರೆ, ಸಾಮಾನ್ಯ ಜನರಿಗೆ ಅವರ ಬಗ್ಗೆ ಅಪಾರ ಪ್ರೀತಿ. ನಾಗಪುರದ ಮಹಾನಗರಪಾಲಿಕೆಯ ಆಯುಕ್ತರಾಗಿ ಕೋವಿಡ್ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದ ಅವರನ್ನು ಸರ್ಕಾರ ಅಲ್ಲಿಂದ ವರ್ಗಾವಣೆ ಮಾಡಿದಾಗ, ಅಲ್ಲಿಂದ ತೆರಳಲು ಬಿಡದಂತೆ ಜನ ಅವರನ್ನು ಸುತ್ತುವರಿದಿದ್ದರು. ಅವರು ಜಲ್ಲಾ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ (2011-12) ಭೀಕರ ಬರ ಇತ್ತು. ರಾಜಕಾರಣಿಗಳು ಮತ್ತು ಟ್ಯಾಂಕರ್ ಮಾಫಿಯಾಕ್ಕೆ ಸಡ್ಡು ಹೊಡೆದು, ಜನರಿಗೆ ಕುಡಿಯಲು ನೀರು ಕೊಡಿಸಿ “ವಾಟರ್ ಮ್ಯಾನ್” ಎನ್ನಿಸಿಕೊಂಡಿದ್ದರು.
ಐಎಎಸ್ ಅಧಿಕಾರಿ ತುಕಾರಾಮ್ ಅವರಿಗೆ ಇಂಥ ಧೈರ್ಯ ಬರಲು ಕಾರಣ ಅವರ ಬಾಲ್ಯದ ಕಡು ಬಡತನ ಕಾರಣ ಎನ್ನುವವರಿದ್ದಾರೆ. ಸದಾ ಬರದಿಂದ ಕೂಡಿರುವ ಬೀಡ್ ಜಿಲ್ಲೆಯ ಟಾಡ್ಸೋನಾ ಗ್ರಾಮದ ಬಡ ರೈತನ ಮನೆಯಲ್ಲಿ ಹುಟ್ಟಿ ಸರ್ಕಾರಿ ಶಾಲೆಗಳಲ್ಲಿ ಓದಿದವರು; ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕಾಲೇಜಿನಲ್ಲಿ ಪದವಿ ಪಡೆದ ನಂತರ ಯುಪಿಎಸ್ಸಿ ಪರೀಕ್ಷೆಯಲ್ಲಿ 20ನೇ ರ್ಯಾಂಕ್ ಗಳಿಸಿ ಐಎಎಸ್ ಅಧಿಕಾರಿಯಾದರು. ಜೀವನದಲ್ಲಿ ಅವರು ಅನುಭವಿಸಿದ ಬಡತನ, ಸುತ್ತಲಿನ ಜನರ ಕಷ್ಟದ ಜೀವನ ಅವರನ್ನು ಕಠಿಣ ಅಧಿಕಾರಿಯನ್ನಾಗಿ ಮಾಡಿದವು ಎನ್ನುವವರಿದ್ದಾರೆ.
ರಾಜಕಾರಣಿಗಳಿಗೆ ತಲೆ ಬಾಗದಿರುವುದು, ಜನರೊಂದಿಗೆ ಸಂಪರ್ಕದಲ್ಲಿರುವುದು ಅವರ ಶೈಲಿ. ಅವರ ಕೆಲಸದ ಶೈಲಿಯ ಬಗ್ಗೆ ಟೀಕಿಸುವವರಿದ್ದಾರೆ. ನಿಯಮಗಳ ಉಲ್ಲಂಘನೆ ಎನ್ನುತ್ತಾರೆ. ಆದರೆ, ಜನರಿಗೆ ತುಕಾರಾಮ್ ಅವರ ಆಶಯಗಳ ಬಗ್ಗೆ ಅವರು ಏನೇ ಮಾಡಿದರೂ ಜನರ ಒಳಿತಿಗಾಗಿಯೇ ಎಂಬ ವಿಶ್ವಾಸ ಮೂಡಿದೆ. ಮಹಾರಾಷ್ಟ್ರದಲ್ಲಿ ಅವರು ಪ್ರಸಿದ್ಧರಾಗಿದ್ದಾರೆ. ಖ್ಯಾತ ನಟ ನಟಿಯರೂ ಅವರೊಂದಿಗೆ ಫೋಟೊ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು.
ಒಬ್ಬ ವ್ಯಕ್ತಿಯಿಂದ ವ್ಯವಸ್ಥೆಯನ್ನು ಸುಧಾರಿಸುವುದು ಸಾಧ್ಯವಿಲ್ಲ ಅಂಥವರು ಮಾಡುವ ಸಣ್ಣ ತಪ್ಪು ಹಿಡಿದು ಅವರನ್ನು ಮೂಲೆಗುಂಪಾಗಿಸುವ ವ್ಯವಸ್ಥಿತ ಕಾರ್ಯತಂತ್ರಗಳು ಸದಾ ಜಾರಿಯಲ್ಲಿರುತ್ತವೆ. ತುಕಾರಾಮ್ ಮುಂಡೆ ಅಂತಹ ಹಲವರನ್ನು ವ್ಯವಸ್ಥೆ “ಜೀರ್ಣಿಸಿಕೊಂಡಿದೆ”. ಅದೇನೇ ಇರಲಿ; ಒಬ್ಬ ಉನ್ನತ ಅಧಿಕಾರಿ ದಕ್ಷ ಮತ್ತು ಪ್ರಾಮಾಣಿಕ ಆಗಿದ್ದರೆ ವ್ಯವಸ್ಥೆಯಲ್ಲಿ ಏನು ಬದಲಾವಣೆ ಮಾಡಬಹುದು ಎನ್ನುವುದಕ್ಕೆ ಅವರು ನಿದರ್ಶನವಾಗಿದ್ದಾರೆ. ಅವ್ಯವಸ್ಥೆ, ಭ್ರಷ್ಟಾಚಾರ ಸಹಜ ಎನ್ನುವಂತಾಗಿರುವ ವ್ಯವಸ್ಥೆಯಲ್ಲಿ ಸಣ್ಣದೊಂದು ಭರವಸೆ ಮೂಡಿಸಿ, ಪರಿವರ್ತನೆಯ ಹಾದಿ ತೋರಿದ್ದಾರೆ. ತುಕಾರಾಮ್ ಮುಂಡೆ ಅವರು ಮಾಡುತ್ತಿರುವ ಕೆಲಸ ಜನರ ಮತ್ತು ಸಮಾಜದ ಆರೋಗ್ಯದ ದೃಷ್ಟಿಯಿಂದ ಸದ್ಯಕ್ಕಂತೂ ಅತ್ಯಂತ ಮುಖ್ಯವಾದುದು ಎನ್ನುವುದು ನಿಸ್ಸಂಶಯ.
