ವಿಶ್ವದ ಅತಿ ದೊಡ್ಡ ಕ್ರೀಡಾ ಹಬ್ಬವೆಂದೇ ಪರಿಗಣಿಸಲ್ಪಡುವ 2026ರ ಫಿಫಾ ವಿಶ್ವಕಪ್ ಈ ಬಾರಿ ಹಲವು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಮೊದಲ ಬಾರಿಗೆ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ಮೂರು ರಾಷ್ಟ್ರಗಳು ಜಂಟಿಯಾಗಿ ವಿಶ್ವಕಪ್ ಆತಿಥ್ಯ ವಹಿಸುತ್ತಿದ್ದು, ಉದ್ಘಾಟನಾ ಕಾರ್ಯಕ್ರಮವೂ ವಿಶೇಷ ರೀತಿಯಲ್ಲಿ ಆಯೋಜಿಸಲಾಗಿತ್ತು. ವಿಶ್ವಕಪ್ನ ಮೊದಲ ಪಂದ್ಯವು ೨೦೨೬ರ ಜೂನ್ ೧೧ರಂದು ಮೆಕ್ಸಿಕೋ ನಗರದ ಐತಿಹಾಸಿಕ ಎಸ್ಟಾಡಿಯೊ ಅಜ್ಟೆಕಾ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ಪಂದ್ಯಕ್ಕೂ ಮುನ್ನ ಮೆಕ್ಸಿಕೋ ದೇಶದ ಸಂಸ್ಕೃತಿ, ಸಂಗೀತ, ನೃತ್ಯ ಹಾಗೂ ಆಧುನಿಕ ತಂತ್ರಜ್ಞಾನವನ್ನು ಪ್ರತಿಬಿಂಬಿಸುವ ಅದ್ದೂರಿ ಉದ್ಘಾಟನಾ ಸಮಾರಂಭ ಸಂಭ್ರಮದಿಂದ ನಡೆಯಿತು. ಇದರೊಂದಿಗೆ, ಕೆನಡಾ ಮತ್ತು ಅಮೆರಿಕದಲ್ಲಿಯೂ ವಿಶ್ವಕಪ್ ಆರಂಭದ ಅಂಗವಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅಭಿಮಾನಿಗಳ ಉತ್ಸವಗಳನ್ನು ಆಯೋಜಿಸಲಾಗಿತ್ತು. ಮೂರು ರಾಷ್ಟ್ರಗಳ ವೈವಿಧ್ಯಮಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, 2026ರ ವಿಶ್ವಕಪ್ ಮತ್ತೊಂದು ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗಿದೆ. ಈ ಬಾರಿ 48 ರಾಷ್ಟ್ರಗಳು ಭಾಗವಹಿಸುತ್ತಿದ್ದು, ಇದು ವಿಶ್ವಕಪ್ ಇತಿಹಾಸದಲ್ಲೇ ಅತಿ ದೊಡ್ಡ ಟೂರ್ನಿಯಾಗಿದೆ. ಒಟ್ಟು 104 ಪಂದ್ಯಗಳು ವಿವಿಧ ನಗರಗಳ ಕ್ರೀಡಾಂಗಣಗಳಲ್ಲಿ ನಡೆಯಲಿವೆ.
ಟೂರ್ನಿಯ ಅಂತಿಮ ಪಂದ್ಯವು ೨೦೨೬ರ ಜುಲೈ ೧೯ರಂದು ಅಮೆರಿಕದ ನ್ಯೂ ಜರ್ಸಿಯ ಮೆಟ್ಲೈಫ್ ಸ್ಟೇಡಿಯಂನಲ್ಲಿ ನಡೆಯಲಿದೆ. ಕೋಟ್ಯಂತರ ಫುಟ್ಬಾಲ್ ಅಭಿಮಾನಿಗಳು ಈ ವಿಶ್ವಕಪ್ಗಾಗಿ ಕಾತರದಿಂದ ಕಾಯುತ್ತಿದ್ದು, ಅತ್ಯಾಧುನಿಕ ತಂತ್ರಜ್ಞಾನ, ಮನರಂಜನೆ ಮತ್ತು ಕ್ರೀಡಾ ವೈಭವದ ಅಪೂರ್ವ ಸಂಗಮವನ್ನು ಈ ಟೂರ್ನಿ ನೀಡುವ ನಿರೀಕ್ಷೆಯಿದೆ.
ಉದ್ಘಾಟನಾ ಪಂದ್ಯ: 11 ಜೂನ್ 2026 – ಎಸ್ಟಾಡಿಯೊ ಅಜ್ಟೆಕಾ, ಮೆಕ್ಸಿಕೋ ಸಿಟಿ, ಆತಿಥೇಯ ರಾಷ್ಟ್ರಗಳು: ಅಮೆರಿಕ, ಕೆನಡಾ, ಮೆಕ್ಸಿಕೋ, ಭಾಗವಹಿಸುವ ತಂಡಗಳು: 48, ಒಟ್ಟು ಪಂದ್ಯಗಳು: 104, ಫೈನಲ್ ಪಂದ್ಯ: 19 ಜುಲೈ 2026-ಮೆಟ್ಲೈಫ್ ಸ್ಟೇಡಿಯಂ,
2026ರ ವಿಶ್ವಕಪ್ನಲ್ಲಿ ಅಟ್ಲಾಂಟಾದಲ್ಲಿರುವ ಕ್ರೀಡಾಂಗಣದ ಮೇಲ್ಮಾವಣಿ, ಒಂದು ದೈತ್ಯ ಕ್ಯಾಮೆರಾದ ಅಪರ್ಚರ್ (ಲೆನ್ಸ್ ತೆರೆಯುವ ಭಾಗ) ತೆರೆದುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಮತ್ತು ಸಂಪೂರ್ಣ ಕ್ರೀಡಾಂಗಣವನ್ನು ಸುತ್ತುವರೆದಿರುವ ಭವ್ಯವಾದ 360 ಡಿಗ್ರಿ ಪರದೆ ಇದೆ. ಇದರ ಹೆಸರು ಮರ್ಸಿಡಿಸ್-ಬೆನ್ಸ್ ಸ್ಟೇಡಿಯಂ, ಇದು ನೀವು ಇದುವರೆಗೆ ನೋಡಿರುವ ಯಾವುದೇ ಕ್ರೀಡಾಂಗಣಕ್ಕಿಂತ ವಿಭಿನ್ನವಾಗಿದೆ.
ಈ ಕ್ರೀಡಾಂಗಣದ ಹಿಂತೆಗೆದುಕೊಳ್ಳಬಹುದಾದ ಮೇಲ್ಮಾವಣೆ ಒಂದೇ ದೊಡ್ಡ ಛಾವಣಿ ಇದರ ಭಾಗವಾಗಿ ಚಲಿಸುವುದಿಲ್ಲ. ಬದಲಾಗಿ, ಅದು ಎಂಟು ದೊಡ್ಡ ತ್ರಿಕೋನಾಕಾರದ ಫಲಕಗಳನ್ನು ಬಳಸುತ್ತದೆ. ಈ ಫಲಕಗಳು ಮಧ್ಯದಲ್ಲಿರುವ ವೃತ್ತಾಕಾರದ ತೆರೆಯುವಿಕೆಯ ಸುತ್ತಲೂ ಯಾಂತ್ರಿಕ ಹೂವಿನ ದಳಗಳಂತೆ ತೆರೆದುಕೊಳ್ಳುತ್ತವೆ ಮತ್ತು ಮುಚ್ಚುತ್ತವೆ. ಮೇಲಿನಿಂದ ನೋಡಿದಾಗ, ಅದು ಜೀವಂತವಾಗುತ್ತಿರುವ ಕ್ಯಾಮೆರಾ ಲೆನ್ಸ್ನಂತೆ ಕಾಣುತ್ತದೆ.
ಈಗ ಇದನ್ನು ಕಲ್ಪಿಸಿಕೊಳ್ಳಿ.ಮೈದಾನದ ಮೇಲ್ಬಾಗದಲ್ಲಿ ತೂಗುಹಾಕಲಾಗಿರುವ ಪ್ರಸಿದ್ದ ಹ್ಯಾಲೋ ಬೋರ್ಡ್ ಒಂದು ಉಂಗುರದ ಆಕಾರದ ವೀಡಿಯೊ ಪರದೆಯಾಗಿದೆ. ಇದು 58 ಅಡಿ ಎತ್ತರ ಹೊಂದಿದ್ದು, ಕ್ರೀಡಾಂಗಣದ ಸುತ್ತಲೂ ಅದ್ಭುತವಾದ 1,071 ಅಡಿ ಉದ್ದಕ್ಕೆ ವಿಸ್ತರಿಸಿದೆ.
ಸುಮಾರು 62,000 ಚದರ ಅಡಿ ಪರದೆ ಪ್ರದೇಶವನ್ನು ಹೊಂದಿರುವ ಇದು, ಇದುವರೆಗೆ ನಿರ್ಮಿಸಲಾದ ಅತಿ ದೊಡ್ಡ ವೀಡಿಯೊ ಪ್ರದರ್ಶನ ಪರದೆಗಳಲ್ಲಿ ಒಂದಾಗಿದೆ. ಕ್ರೀಡಾಂಗಣದ ಬಹುತೇಕ ಪ್ರತಿಯೊಂದು ಆಸನದಿಂದಲೂ ಅಭಿಮಾನಿಗಳು ಇದನ್ನು ಸ್ಪಷ್ಟವಾಗಿ ನೋಡಬಹುದು.
ಮತ್ತು ಈ ಭವಿಷ್ಯದ ತಂತ್ರಜ್ಞಾನದಿಂದ ನಿರ್ಮಿಸಲಾದ ಕ್ರೀಡಾಂಗಣದಲ್ಲಿ ಚೆಂಡು ಉರುಳಲು ಪ್ರಾರಂಭವಾದಾಗ, ನೀವು ಕೇವಲ ಫುಟ್ಬಾಲ್ ಪಂದ್ಯವನ್ನು ನೋಡುತ್ತಿರುವ ಅನುಭವವಾಗುವುದಿಲ್ಲ. ಬದಲಾಗಿ, ನೀವು ಕ್ರೀಡಾಂಗಣದೊಳಗೆ ಇದ್ದಂತೆ ಅನುಭವಿಸುವಿರಿ.
