126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಏಪ್ರಿಲ್ ೯ರಂದು ಮತದಾನ ನಡೆದಿದೆ ಹಿಮಂತ ಬಿಸ್ವಾ ಶರ್ಮಾ ಮತ್ತು ಗೌರವ್ ಗೊಗೊಯ್ ನಡುವಿನ ನೇರ ಸ್ಪರ್ಧೆಯ ಫಲಿತಾಂಶ ಮೇ ೪ರಂದು ಪ್ರಕಟವಾಗಿದೆ. ಬಿಜೆಪಿ ತನ್ನ ಮಿತ್ರಪಕ್ಷಗಳಾದ ಅಸೋಮ್ ಗಣ ಪರಿಷತ್, ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಮತ್ತು ರಭಾ ಹಸೋಂಗ್ ಚೌತಾ ಮಂಚ್ ಜೊತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಕಾಂಗ್ರೆಸ್ ಪಕ್ಷವು ರೈಜೋರ್ ದಳ, ಅಸ್ಸಾಂ ಜಾತಿಯ ಪರಿಷತ್, ಸಿಪಿಎಂ ಮತ್ತು ಸಿಪಿಐ-ಎಂಎಲ್ ಜೊತೆ ಮೈತ್ರಿ ಮಾಡಿಕೊಂಡು ಅಸ್ಸಾಂ ಸೋನ್ನಿಲಿಟೊ ಮೋರ್ಚಾವನ್ನು ರಚಿಸಿದೆ. ಬದ್ರುದ್ದೀನ್ ಅಜ್ಜಲ್ ಅವರ ಎಐಯುಡಿಎಫ್, ಟಿಎಂಸಿ, ಆಮ್ ಆದ್ಮ ಪಕ್ಷ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ಕೂಡ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು.
ಆದರೆ ಯಾರು ಊಹಿಸಲಾಗದಂತೆ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಬಿಜೆಪಿ ನೇತೃತ್ವದ ಎನ್ಡಿಎ ಸತತ ಮೂರನೇ ಸಲ ಗೆಲುವು ದಾಖಲಿಸಿತ್ತು. 126 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ೮೨, ಮಿತ್ರಪಕ್ಷಗಳಾದ ಎಜಿಪಿ ಹಾಗೂ ಬಿಪಿಎಫ್ ತಲಾ 10 ಸ್ಥಾನಗಳಲ್ಲಿ ಜಯಿಸಿತ್ತು. ಅಸ್ಸಾಂ ಮುಖ್ಯಮಂತ್ರಿಯಾಗಿ ಡಾ. ಹಿಮಂತ ಬಿಸ್ವಾಸ್ ಶರ್ಮಾ ಅವರು ಸತತ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಬಿಜೆಪಿ ನೇತೃತ್ವದ ಎನ್ಡಿಎ (ಓಆಂ) ಮೈತ್ರಿಕೂಟವು 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ 102 ಸ್ಥಾನಗಳನ್ನು ಗೆದ್ದು ಐತಿಹಾಸಿಕ ಜಯಗಳಿಸಿದ ನಂತರ, ಅವರು ಮೇ 12, 2026 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶವು ಎಲ್ಲರನ್ನೂ ಬೆಚ್ಚಿಬೀಳಿಸಿತು. ಬಿಜೆಪಿಗೂ ತಾನೇ ಇಷ್ಟು ದೊಡ್ಡ ಬಹುಮತವನ್ನು ಪಡೆಯುವುದಾಗಿ ನಿರೀಕ್ಷೆಯಿರಲಿಲ್ಲ. ಅನೇಕ ರೀತಿಯಲ್ಲಿ ೨೦೨೬ರ ಬಂಗಾಳ ವಿಧಾನಸಭಾ ಚುನಾವಣೆ ವರದಿ ಮಾಡಲು ಅತ್ಯಂತ ವಿಚಿತ್ರ ಚುನಾವಣೆಯಾಗಿತ್ತು. ಮತದಾರರು ತಮ್ಮ ಮನಸ್ಸಿನ ಮಾತನ್ನು ಕೊನೆಯವರೆಗೂ ಬಹಿರಂಗಪಡಿಸದ ಮೌನ ಚುನಾವಣೆಯಾಗಿದ್ದಷ್ಟೇ ಅಲ್ಲ, ಚುನಾವಣೆಗೆ ಮುನ್ನ ನಡೆದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಬಳಿಕ ಮತದಾರರ ಪಟ್ಟಿಯಲ್ಲಿ ನಡೆದ ಗೊಂದಲದಿಂದ ಅಂತಿಮ ಫಲಿತಾಂಶ ಅಂದಾಜಿಸಲು ಅಸಾಧ್ಯವಾಗಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ, ಏನಾದರೂ ಸಂಭವಿಸಬಹುದಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹೀಗಾಗಿ, ಬಿಜೆಪಿ ಐತಿಹಾಸಿಕ ಜಯ ಸಾಧಿಸಿ 15 ವರ್ಷಗಳ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿದಾಗ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದ ಭವಾನಿಪುರ ಕ್ಷೇತ್ರದಲ್ಲಿ ಸೋತಾಗ, ಅದು ಬಹುತೇಕರಿಗೆ “ಆಘಾತ”ವಾದರೂ ಅಚ್ಚರಿಯಾಯಿತು. ಆರಂಭದಲ್ಲಿ ಮಮತಾ ಆಡಳಿತದ ವಿರುದ್ಧ ಕಂಡುಬಂದ ಮೌನ ಅಸಮಾಧಾನ ಕೊನೆಗೆ ಭಾರಿ ರಾಜಕೀಯ ಸುನಾಮಿಯಾಗಿ ಮಾರ್ಪಟ್ಟಿತು. ಬಿಜೆಪಿ 293 ಸ್ಥಾನಗಳಲ್ಲಿ 207 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿತು. ಇದು ಸರ್ಕಾರದ ಬದಲಾವಣೆಗೆ ಜನರು ನೀಡಿದ ಭಾರಿ ಜನಾದೇಶವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಮೊದಲ ಬಿಜೆಪಿ ಸರ್ಕಾರ ರಚನೆಯಾಗಿದ್ದು, ಬಿಜೆಪಿ ವಿಧಾನಮಂಡಲ ಪಕ್ಷದ ನಾಯಕ ಸುವೇಂದು ಅಧಿಕಾರಿ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಕೊಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಶನಿವಾರ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರು ಸುವೇಂದು ಅಧಿಕಾರಿಗೆ ಪದ ಮತ್ತು ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿಯೊಂದಿಗೆ ಐವರು ಸಚಿವರೂ ಪ್ರಮಾಣ ವಚನ ಸ್ವೀಕರಿಸಿದರು. ಸಚಿವರಾದ ದಿಲೀಪ್ ಘೋಷ್, ಅಗ್ನಿಮಿತ್ರ ಪಾಲ್, ಅಶೋಕ್ ಕಿರ್ತಾನಿಯಾ, ನಿಶಿತ್ ಪ್ರಾಮಾಣಿಕ್ ಮತ್ತು ಕ್ಷುದಿರಾಮ ತುಡು ಅವರಿಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎನ್ಡಿಎ ಮತ್ತು ಬಿಜೆಪಿ ಆಡಳಿತದ ಇತರ ರಾಜ್ಯಗಳ ಮುಖ್ಯಮಂತ್ರಿಗಳು, ಬಿಜೆಪಿ ಅಧ್ಯಕ್ಷ ನಿತಿನ್ ನಬೀನ್ ಸೇರಿದಂತೆ ಪಕ್ಷದ ಹಲವು ನಾಯಕರು ಪ್ರಮಾಣ ವಚನ ಸಮಾರಂಭದಲ್ಲಿ ಉಪಸ್ಥಿತರಿದ್ದರು. 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದಿದ್ದು, ಇತಿಹಾಸ ನಿರ್ಮಾಣವಾಗಿದ್ದು, ಈ ಸರ್ಕಾರ ಜನಪ್ರಿಯ, ಜನೋಪಯೋಗಿ ಕಾರ್ಯಕ್ರಮಗಳ ಜೊತೆಗೆ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಟಾನದಲ್ಲಿ ಎಷ್ಟರ ಮಟ್ಟಿಗೆ ಜನರನ್ನು ತಲುಪಿ ಸಾಕಾರಗೊಳ್ಳುತ್ತದೆಯೆಂದು ಕಾದು ನೋಡಬೇಕಿದೆ.
