ಕರ್ನಾಟಕ ರಾಜಕೀಯದಲ್ಲಿ ಸಾಮಾನ್ಯ ರೈತ ಕುಟುಂಬದಿಂದ ಹೊರಹೊಮ್ಮಿ, ಐದು ದಶಕಗಳ ಕಾಲ ಅಧಿಕಾರದ ಕೇಂದ್ರಬಿಂದುವಾಗಿರುವ ನಾಯಕರು ವಿರಳ. ಅಂತಹ ಅಪರೂಪದ ನಾಯಕರಲ್ಲಿ ಪ್ರಮುಖ ಹೆಸರು ಸಿದ್ದರಾಮಯ್ಯ. ಗ್ರಾಮೀಣ ಹಿನ್ನೆಲೆಯಿಂದ ಆರಂಭವಾದ ಅವರ ರಾಜಕೀಯ ಪಯಣ, ಸಮಾಜವಾದಿ ಚಳವಳಿಯಿಂದ ಕಾಂಗ್ರೆಸ್ನ ಅತಿ ಪ್ರಭಾವಿ ನಾಯಕರವರೆಗೆ ಬೆಳೆಯಿತು.
ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯಲ್ಲಿ 1948 ರಲ್ಲಿ ಜನಿಸಿದ ಸಿದ್ದರಾಮಯ್ಯ, ವಿದ್ಯರ್ಥಿ ಜೀವನದಲ್ಲಿಯೇ ಸಾಮಾಜಿಕ ಜನಜೀವನ ಅಭಿವೃದ್ಧಿ ವಿಷಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ವಕೀಲರಾಗಿ ವೃತ್ತಿ ಆರಂಭಿಸಿದ ಅವರು, ಜನಸಾಮಾನ್ಯರ ಸಮಸ್ಯೆಗಳತ್ತ ಒಲವು ಹೊಂದಿದ್ದರಿಂದ ರಾಜಕೀಯದತ್ತ ಆರ್ಷಿತರಾದರು. ೧೯೮೩ರಲ್ಲಿ ಭಾರತ ಲೋಕದಳ ಅಭ್ರ್ಥಿಯಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಈ ಗೆಲುವು ಅವರ ರಾಜಕೀಯ ಬದುಕಿನ ಮಹತ್ವದ ತಿರುವಾಯಿತು.
ಜನತಾ ಪರಿವಾರದ ರಾಜಕಾರಣದಲ್ಲಿ ಸಿದ್ದರಾಮಯ್ಯ ಶೀಘ್ರವೇ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದರು. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಪಶುಸಂಗೋಪನೆ, ಸಾರಿಗೆ ಸೇರಿದಂತೆ ಹಲವು ಖಾತೆಗಳನ್ನು ನಿರ್ವಹಿಸಿದರು. ನಂತರ 1994 ರಲ್ಲಿ ಜನತಾದಳ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಅನೇಕ ಬಜೆಟ್ ಮಂಡಿಸಿ ಆಡಳಿತಪರ ಸಾಮರ್ಥ್ಯ ತೋರಿದರು. ಗ್ರಾಮೀಣ ಜನತೆ ಮತ್ತು ಹಿಂದುಳಿದ ವರ್ಗಗಳ ಪರ ಧ್ವನಿ ಎತ್ತಿದ ಅವರು, “ಅಹಿಂದ” ರಾಜಕೀಯ ಸಮೀಕರಣದ ಮೂಲಕ ವಿಶಿಷ್ಟ ಗುರುತನ್ನು ನಿರ್ಮಿಸಿಕೊಂಡರು.
ಜನತಾದಳದಲ್ಲಿ ದೀರ್ಘಕಾಲ ಸಕ್ರಿಯರಾಗಿದ್ದ ಸಿದ್ದರಾಮಯ್ಯ, ನಂತರ ಎಚ್.ಡಿ. ದೇವೇಗೌಡ ಹಾಗೂ ಜೆಡಿಎಸ್ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯಕ್ಕೆ ಒಳಗಾದರು. ವಿಶೇಷವಾಗಿ ಕುಟುಂಬ ರಾಜಕಾರಣ ಮತ್ತು ನಾಯಕತ್ವದ ಪ್ರಶ್ನೆಯಲ್ಲಿ ಉಂಟಾದ ಸಂಘರ್ಷ ಅವರ ರಾಜಕೀಯ ದಿಕ್ಕೇ ಬದಲಿಸಿತು. 2006ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಅವರು, ಕೆಲವೇ ವರ್ಷಗಳಲ್ಲಿ ಪಕ್ಷದ ಪ್ರಮುಖ ಮುಖವಾಗಿ ಹೊರಹೊಮ್ಮಿದರು. ಕಾಂಗ್ರೆಸ್ ವಿರೋಧಿ ರಾಜಕಾರಣದಿಂದ ಕಾಂಗ್ರೆಸ್ನ ಪ್ರಮುಖ ನಾಯಕನಾಗುವ ತನಕದ ಅವರ ಬದಲಾವಣೆ ಕರ್ನಾಟಕ ರಾಜಕೀಯದ ಮಹತ್ವದ ಅಧ್ಯಾಯವೆಂದು ಪರಿಗಣಿಸಲಾಗಿದೆ.
2010 ರಲ್ಲಿ ಬಳ್ಳಾರಿ ಪಾದಯಾತ್ರೆ ಮತ್ತು ೨೦೧೨ ರಲ್ಲಿ ಕೃಷ್ಣಾನದಿ ಚಳುವಳಿ ಮೂಲಕ ಜನಪರ ಕಾಳಜಿಯಿಂದ ೨೦೧೩ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಪಟ್ಟಕ್ಕೇರಿದರು. ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಮುಂತಾದ ಜನಪರ ಯೋಜನೆಗಳ ಮೂಲಕ ಅವರು ಕಲ್ಯಾಣರಾಜಕಾರಣಕ್ಕೆ ಹೊಸ ರೂಪ ನೀಡಿದರು. ನಾಲ್ಕು ದಶಕಗಳ ನಂತರ ಐದು ವರ್ಷಗಳ ಪೂರ್ಣಾವಧಿ ಮುಗಿಸಿದ ಎರಡನೇ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯೂ ಅವರಿಗೆ ಸಿಕ್ಕಿತು. ಅವರ ಆಡಳಿತದಲ್ಲಿ ಹಿಂದುಳಿದ ವರ್ಗಗಳು, ರೈತರು ಮತ್ತು ಬಡಜನರ ಪರ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಯಿತು.
ಆದರೆ 2018ರಲ್ಲಿ ಕಾಂಗ್ರೆಸ್ ಬಹುಮತ ಕಳೆದುಕೊಂಡರೂ, ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿ ತಮ್ಮ ಪ್ರಭಾವ ಕಳೆದುಕೊಳ್ಳಲಿಲ್ಲ. ವಿವಿಧ ಚಳುವಳಿಗಳ ಮತ್ತು ಜನಾಂದೋಲನ ಮೂಲಕ ೨೦೨೩ರಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದ ನಂತರ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾದರು. ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ ವಿಸ್ತರಣೆ ಸೇರಿದಂತೆ ಗ್ಯಾರಂಟಿ ಯೋಜನೆಗಳ ಮೂಲಕ ಸರ್ಕಾರ ಜನಮನ ಸೆಳೆಯಲು ಪ್ರಯತ್ನಿಸಿತು. ಇದೇ ಅವಧಿಯಲ್ಲಿ ಅವರು ಕರ್ನಾಟಕದ ಅತಿ ಹೆಚ್ಚು ಅವಧಿ ಮುಖ್ಯಮಂತ್ರಿಯಾಗಿರುವ ದಾಖಲೆ ನಿರ್ಮಿಸಿದರು.
ಇಷ್ಟೆಲ್ಲಾ ಪರ ಮತ್ತು ವಿರೋಧಗಳ ನಡುವೆ ಗ್ಯಾರಂಟಿ ಯೋಜನೆಗಳ ಆರ್ಥಿಕ ಭಾರವನ್ನು ಸರಿದೂತಿಸಲು ಹತ್ತು ಲಕ್ಷ ಕೋಟಿ ಸಾಲವನ್ನು ಮಾಡಿ ಸರ್ಕಾರ ತೂಗಿಸುವ ಸಮಯದಲ್ಲಿ ಹೈಕಮಾಂಡ್ ಒತ್ತಡಕ್ಕೆ ಮಣಿದು 2026ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಅವರ ದೀರ್ಘ ರಾಜಕೀಯ ಅಧ್ಯಾಯ ಮತ್ತೊಂದು ತಿರುವು ಕಂಡಿತು. ಆದರೆ “ರಾಜಕೀಯದಿಂದ ದೂರವಾಗುವುದಿಲ್ಲ” ಎಂಬ ಹೇಳಿಕೆಯಿಂದ ಅವರು ಇನ್ನೂ ಕರ್ನಾಟಕ ರಾಜಕಾರಣದಲ್ಲಿ ಪ್ರಭಾವಿ ಶಕ್ತಿಯಾಗಿಯೇ ಉಳಿಯಲಿದ್ದಾರೆ ಎಂಬ ಸಂದೇಶ ನೀಡಿದರು.
ಸಿದ್ದರಾಮಯ್ಯ ರಾಜಕೀಯ ಪಯಣವನ್ನು ಕೇವಲ ಅಧಿಕಾರದ ಕಥೆಯಾಗಿ ನೋಡಲು ಸಾಧ್ಯವಿಲ್ಲ. ಅದು ಹಿಂದುಳಿದ ವರ್ಗಗಳ ಪ್ರತಿನಿಧಿತ್ವ, ಸಾಮಾಜಿಕ ನ್ಯಾಯ ಮತ್ತು ಜನಪರ ರಾಜಕಾರಣದ ಅಧ್ಯಯನವೂ ಹೌದು. ವಿರೋಧಗಳ ನಡುವೆಯೂ ಜನಾಧಾರ ಉಳಿಸಿಕೊಂಡು, ಗ್ರಾಮೀಣ ಕರ್ನಾಟಕದ ರಾಜಕೀಯ ಭಾಷೆಯನ್ನು ರಾಜ್ಯದ ಆಡಳಿತ ಕೇಂದ್ರಕ್ಕೆ ತಂದು ನಿಲ್ಲಿಸಿದ ನಾಯಕನಾಗಿ ಸಿದ್ದರಾಮಯ್ಯ ತಮ್ಮದೇ ಆದ ಹೆಗ್ಗುರುತಾಗಿ ಛಾಪನಮ್ನು ಮೂಡಿಸಿದ್ದಾರೆ.
