ಜಾಗತಿಕ ಮಾರುಕಟ್ಟೆಯ ಏರಿಳಿತಗಳ ನಡುವೆ ಭಾರತದ ದಾಖಲೆ ಶೇ.7.8ರಷ್ಟು ಜಿಡಿಪಿ ಏರಿಕೆಯಾಗಿದೆ. ಜಾಗತಿಕ ಆರ್ಥಿಕ ಅನಿಶ್ಚಿತತೆ, ತೈಲ ಬೆಲೆಗಳ ಏರಿಳಿತ, ಭೌಗೋಳಿಕ ಸಂಘರ್ಷಗಳು ಹಾಗೂ ಷೇರು ಮಾರುಕಟ್ಟೆಯ ತೀವ್ರ ಅಸ್ಥಿರತೆಯ ನಡುವೆಯೂ ಭಾರತದ ಆರ್ಥಿಕತೆ ತನ್ನ ವೇಗವನ್ನು ಕಾಯ್ದುಕೊಂಡಿದೆ. 2026ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ನೈಜ ಜಿಡಿಪಿ 7.8 ಶೇಕಡಾ ಬೆಳವಣಿಗೆ ದಾಖಲಿಸಿರುವುದು ಆರ್ಥಿಕ ವಲಯದಲ್ಲಿ ಗಮನ ಸೆಳೆದಿದೆ. ರಿಸರ್ವ್ ಬ್ಯಾಂಕ್ ನಿರೀಕ್ಷಿಸಿದ್ದ ಶೇ.7ರ ಬೆಳವಣಿಗೆಗಿಂತಲೂ ಇದು ಹೆಚ್ಚಿನದು. ಈ ಬೆಳವಣಿಗೆ ಕೇವಲ ಒಂದು ಅಂಕಿ ಅಂಶವಲ್ಲ. ಜಗತ್ತಿನ ಹಲವು ಪ್ರಮುಖ ಆರ್ಥಿಕತೆಗಳು ಹಣದುಬ್ಬರ, ದುಬಾರಿ ಇಂಧನ, ದುರ್ಬಲ ಬೇಡಿಕೆ ಮತ್ತು ವ್ಯಾಪಾರ ನೀತಿಯ ಅನಿಶ್ಚಿತತೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಭಾರತವು ತನ್ನ ಆಂತರಿಕ ಬೇಡಿಕೆಯ ಬಲವನ್ನು ಪ್ರದರ್ಶಿಸಿರುವುದು ವಿಶೇಷ. ಭಾರತದ ಆರ್ಥಿಕತೆಯ ಒಂದು ಕುತೂಹಲಕಾರಿ ವೈರುಧ್ಯ ಈಗ ಕಾಣಿಸುತ್ತಿದೆ. ಒಂದು ಕಡೆ ಜಿಡಿಪಿ ವೇಗವಾಗಿ ಬೆಳೆಯುತ್ತಿದ್ದರೆ ಮತ್ತೊಂದು ಕಡೆ ಷೇರು ಮಾರುಕಟ್ಟೆ ಅಸ್ಥಿರವಾಗಿದೆ. ಸೆಪ್ಟೆಂಬರ್ನಲ್ಲಿ ಜಾಗತಿಕ ಭೌಗೋಳಿಕ ಉದ್ವಿಗ್ನತೆ ಹಾಗೂ ಕಚ್ಚಾ ತೈಲದ ಬೆಲೆ ಏರಿಕೆಯಿಂದ ಭಾರತೀಯ ಷೇರುಪೇಟೆಯಲ್ಲಿ ತೀವ್ರ ಏರಿಳಿತ ಕಂಡುಬಂದಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 100 ಡಾಲರ್ಗಿಂತ ಮೇಲೇರಿರುವುದು ಭಾರತಕ್ಕೆ ವಿಶೇಷ ಸವಾಲಾಗಿದೆ.
ಆದರೆ ಷೇರುಪೇಟೆಯ ಚಲನೆ ಮತ್ತು ಜಿಡಿಪಿ ಬೆಳವಣಿಗೆ ಒಂದೇ ಅರ್ಥವನ್ನು ನೀಡುವುದಿಲ್ಲ. ಷೇರುಪೇಟೆ ಮುಖ್ಯವಾಗಿ ಹೂಡಿಕೆದಾರರ ನಿರೀಕ್ಷೆ, ಜಾಗತಿಕ ಬಂಡವಾಳ ಹರಿವು ಮತ್ತು ಭವಿಷ್ಯದ ಲಾಭದ ಅಂದಾಜುಗಳಿಂದ ಪ್ರಭಾವಿತವಾಗುತ್ತದೆ. ಜಿಡಿಪಿ ಮಾತ್ರ ದೇಶದಲ್ಲಿ ವಸ್ತು ಮತ್ತು ಸೇವೆಗಳ ಒಟ್ಟು ಉತ್ಪಾದನೆಯ ವಿಸ್ತರಣೆಯನ್ನು ಅಳೆಯುತ್ತದೆ. ಆಂತರಿಕ ಬೇಡಿಕೆಯೇ ಪ್ರಮುಖ ಶಕ್ತಿ. ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ಆಧಾರಗಳಲ್ಲಿ ದೇಶೀಯ ಬಳಕೆ ಮತ್ತು ಹೂಡಿಕೆ ಪ್ರಮುಖವಾಗಿವೆ. ಸರ್ಕಾರದ ಮೂಲ ಅಂದಾಜಿನ ಪ್ರಕಾರ 2025-26ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ 7.4 ಶೇಕಡಾ ಎಂದು ನಿರೀಕ್ಷಿಸಲಾಗಿತ್ತು. ಈ ಬೆಳವಣಿಗೆಗೆ ಬಳಕೆ ಮತ್ತು ಹೂಡಿಕೆ ಎರಡೂ ಪ್ರಮುಖ ಚಾಲಕ ಶಕ್ತಿಗಳಾಗಿವೆ. ಭಾರತದ ಸುಮಾರು 140 ಕೋಟಿಗೂ ಅಧಿಕ ಜನಸಂಖ್ಯೆಯ ದೊಡ್ಡ ದೇಶೀಯ ಮಾರುಕಟ್ಟೆ ಜಾಗತಿಕ ಆರ್ಥಿಕ ಆಘಾತಗಳ ಪರಿಣಾಮವನ್ನು ಕೆಲವು ಮಟ್ಟಿಗೆ ತಗ್ಗಿಸುವ ಸಾಮರ್ಥ್ಯ ಹೊಂದಿದೆ. ಸೇವಾ ವಲಯ, ಡಿಜಿಟಲ್ ಆರ್ಥಿಕತೆ ನಿರ್ಮಾಣ, ಮೂಲಸೌಕರ್ಯ ಹೂಡಿಕೆ ಮತ್ತು ಖಾಸಗಿ ಬಳಕೆ ದೇಶೀಯ ಚಟುವಟಿಕೆಯನ್ನು ಬೆಂಬಲಿಸುತ್ತವೆ. ಹೊಸ ಜಿಡಿಪಿ ಲೆಕ್ಕಾಚಾರವೂ ಚರ್ಚೆಗೆ ಕಾರಣ. ಇತ್ತೀಚಿನ ಜಿಡಿಪಿ ಅಂಕಿಅಂಶಗಳ ಕುರಿತು ಆರ್ಥಿಕ ತಜ್ಞರ ನಡುವೆ ಚರ್ಚೆಯೂ ಆರಂಭವಾಗಿದೆ. ಭಾರತದ ರಾಷ್ಟ್ರೀಯ ಲೆಕ್ಕಪತ್ರ ವ್ಯವಸ್ಥೆಯಲ್ಲಿ ಹೊಸ ಮೂಲ ವರ್ಷ 2022-23ಕ್ಕೆ ಬದಲಾವಣೆ ಸೇರಿದಂತೆ ಕೆಲವು ವಿಧಾನಾತ್ಮಕ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಹೆಚ್ಚು ವಿವರವಾದ ಬೆಲೆ ಸೂಚಕಗಳು ಮತ್ತು ಹೊಸ ದತ್ತಾಂಶ ಮೂಲಗಳನ್ನು ಬಳಸಲಾಗುತ್ತಿದೆ ಎಂದು ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.
ಜಾಗತಿಕ ಮಾರುಕಟ್ಟೆಗಳು ಅಸ್ಥಿರವಾಗಿರುವ ಈ ಸಂದರ್ಭದಲ್ಲಿ ಭಾರತದ ಆರ್ಥಿಕತೆ ತೋರಿಸುತ್ತಿರುವ ವೇಗ ನಿಸ್ಸಂದೇಹವಾಗಿ ಆಶಾದಾಯಕ. ಆದರೆ ದುಬಾರಿ ತೈಲ, ಜಾಗತಿಕ ಸಂಘರ್ಷಗಳು ಮತ್ತು ಹಣಕಾಸು ಮಾರುಕಟ್ಟೆಯ ಒತ್ತಡಗಳನ್ನು ಎದುರಿಸುತ್ತಾ ಈ ವೇಗವನ್ನು ಉದ್ಯೋಗಾಧಾರಿತ, ಸಮಗ್ರ ಮತ್ತು ದೀರ್ಘಕಾಲೀನ ಬೆಳವಣಿಗೆಯಾಗಿ ಪರಿವರ್ತಿಸುವುದು ಮುಂದಿನ ದೊಡ್ಡ ಸವಾಲಾಗಿದೆ. ಜಗತ್ತು ಆರ್ಥಿಕ ಅನಿಶ್ಚಿತತೆಯ ನಡುವೆ ಸಾಗುತ್ತಿರುವಾಗ ಭಾರತದ 7.8 ಜಿಡಿಪಿ ಬೆಳವಣಿಗೆ ದೇಶೀಯ ಆರ್ಥಿಕತೆಯ ಬಲವನ್ನು ತೋರಿಸುವ ಮಹತ್ವದ ಸೂಚನೆಯಾಗಿದೆ. ಈ ಸಾಧನೆಯ ಹಿಂದೆ ಕೇಂದ್ರ ಸರ್ಕಾರದ ಕಳೆದ ಹತ್ತು ವರ್ಷಗಳ ಆರ್ಥಿಕ ನೀತಿ, ಆಮದು ಮತ್ತು ರಫ್ತಿನ ವ್ಯಾಪಾರ ವ್ಯವಹಾರದಲ್ಲಿ ಸಡಿಲಿಕೆ ಮತ್ತು ಸೂಕ್ತ ನಿರ್ಧಾರಗಳಲ್ಲದೆ ಆಂತರಿಕ ಉತ್ಪನ್ನಗಳ ದಾಖಲೆ ಉತ್ಪತ್ತಿ ಮತ್ತು ಸಂಗ್ರಹಣೆಯು ಬಹುಪಾಲು ಜಿಡಿಪಿಯನ್ನು ಈ ಮಟ್ಟಕ್ಕೆ ಬಲಪಡಿಸಲು ಸಹಾಯ ಮಾಡಿದೆ ಎಂಬುದರಲ್ಲಿ ಎರಡನೆ ಮಾತಿಲ್ಲ. ಆದರೆ ಈ ದಾಖಲೆಯ ನಿಜವಾದ ಯಶಸ್ಸು ಅದರ ಲಾಭ ಎಷ್ಟು ವ್ಯಾಪಕವಾಗಿ ಸಾಮಾನ್ಯ ಭಾರತೀಯನ ಬದುಕಿಗೆ ತಲುಪುತ್ತದೆ ಎನ್ನುವುದು ಮುಂಬರುವ ದಿನಗಳಲ್ಲಿ ಕಾದು ನೋಡಬೇಕಿದೆ.
