ವಿಶ್ವದಲ್ಲಿ ಆರ್ಥಿಕವಾಗಿ ಭಾರಿ ವೇಗದಲ್ಲಿ ಬೆಳೆಯುತ್ತಿದ್ದ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾವನ್ನು ಒಟ್ಟಾಗಿ ಸೂಚಿಸಲು ‘ಬ್ರಿಕ್’ ಎಂಬ ಪದವನ್ನು ೨೦೦೧ರಲ್ಲಿ ‘ಗೋಲ್ಡ್ಮನ್ ಸ್ಯಾಕ್ಸ್’ನ ಅರ್ಥಶಾಸ್ತ್ರಜ್ಞ ಜಿಮ್ ಓ’ನೀಲ್ ಅವರು ಬಳಸಿದರು. ಆಗ ಅದು ರಾಷ್ಟ್ರಗಳ ಒಕ್ಕೂಟವಾಗಿರಲಿಲ್ಲ. ಮುಂದಿನ ದಶಕಗಳಲ್ಲಿ ಈ ನಾಲ್ಕು ದೇಶಗಳು ಜಾಗತಿಕ ಆರ್ಥಿಕತೆಯಲ್ಲಿ ಪ್ರಮುಖ ಸ್ಥಾನ ಪಡೆಯಲಿವೆ ಎಂಬ ಆರ್ಥಿಕ ಅಂದಾಜಿನ ಭಾಗವಾಗಿ ಈ ಪದ ಬಳಕೆಗೆ ಬಂದಿತ್ತು. ೨೦೦೬ರಲ್ಲಿ ನಾಲ್ಕು ದೇಶಗಳ ವಿದೇಶಾಂಗ ಸಚಿವರು ಸಭೆ ಸೇರಿ, ‘ಬ್ರಿಕ್’ ರಾಷ್ಟ್ರಗಳ ನಡುವಿನ ಅಧಿಕೃತ ಸಹಕಾರಕ್ಕೆ ಚಾಲನೆ ನೀಡಿದರು. ೨೦೦೯ರ ಜೂನ್ ೧೬ರಂದು ರಷ್ಯಾದ ಯೆಕತೆರಿನ್ಬರ್ಗ್ನಲ್ಲಿ ಮೊದಲ ‘ಬ್ರಿಕ್’ ಶೃಂಗಸಭೆ ನಡೆಯಿತು. ೨೦೧೧ರಲ್ಲಿ ದಕ್ಷಿಣ ಆಫ್ರಿಕಾ ಸೇರ್ಪಡೆಯಾದ ಬಳಿಕ ‘ಬ್ರಿಕ್ಸ್’ ಆಯಿತು. ಬ್ರಿಕ್ಸ್ ಒಂದು ಔಪಚಾರಿಕ ಅಂತರರಾಷ್ಟ್ರೀಯ ಆಯ್ದ ದೇಶಗಳ ಒಕ್ಕೂಟ ಇದು ಸಾಂಸ್ಥಿಕ ಸಂಸ್ಥೆಯಲ್ಲ. ಇದಕ್ಕೆ ಯಾವುದೇ ಪ್ರತ್ಯೇಕ ಒಪ್ಪಂದ, ಸ್ವಂತ ಬಜೆಟ್ ಅಥವಾ ಶಾಶ್ವತ ಕಾರ್ಯಾಲಯ ಇಲ್ಲ. ಪ್ರತಿ ವರ್ಷ ಒಬ್ಬ ಸದಸ್ಯ ರಾಷ್ಟ್ರ ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತದೆ. ಪ್ರಮುಖ ನಿರ್ಧಾರಗಳನ್ನು ಸಾಮಾನ್ಯವಾಗಿ ಎಲ್ಲ ಸದಸ್ಯ ರಾಷ್ಟ್ರಗಳ ಒಮ್ಮತದೊಂದಿಗೆ ತೆಗೆದುಕೊಳ್ಳಲಾಗುತ್ತದೆ. ಬ್ರಿಕ್ಸ್ನಲ್ಲಿ ರಾಜಕೀಯ, ಭದ್ರತೆ, ಆರ್ಥಿಕತೆ ಮತ್ತು ಹಣಕಾಸು ಸೇರಿದಂತೆ ಹಲವು ವಿಷಯಗಳ ಬಗ್ಗೆ ಕೊಡು-ಕೊಳ್ಳಿವಿಕೆ ನಡೆಯುತ್ತದೆ. ಜನರ ನಡುವಿನ ಸಂಪರ್ಕ ಮತ್ತು ವಿನಿಮಯಕ್ಕೂ ಮಹತ್ವ ನೀಡಲಾಗುತ್ತದೆ. ವ್ಯಾಪಾರ, ಹೂಡಿಕೆ, ಆರೋಗ್ಯ, ಕೃಷಿ, ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ, ಇಂಧನ, ಪರಿಸರ ಮತ್ತು ಡಿಜಿಟಲ್ ಆರ್ಥಿಕತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸದಸ್ಯ ರಾಷ್ಟ್ರಗಳ ಸಚಿವರು, ಅಧಿಕಾರಿಗಳು ಮತ್ತು ತಜ್ಞರು ಸಭೆ ನಡೆಸಿ ಸಹಕಾರದ ಬಗ್ಗೆ ಚರ್ಚಿಸುತ್ತಾರೆ. ಒಂದು ಪರಿಕಲ್ಪನೆಯಿಂದ ಜಾಗತಿಕ ವೇದಿಕೆವರೆಗೆ ಬೆಳೆದುಬಂದು ಇಂದು ೧೮ನೇ ಬ್ರಿಕ್ಸ್ ಶೃಂಗಸಭೆಯು ಭಾರತ ಅಧ್ಯಕ್ಷತೆಯಲ್ಲಿ ಸೆ.12 ಹಾಗೂ ೧೩ರಂದು ನಡೆಯಿತು. ಬ್ರಿಕ್ಸ್ ಎನ್ನುವುದು ಇಂದು 11 ದೇಶಗಳನ್ನು ಒಳಗೊಂಡಿರುವ ಜಾಗತಿಕ ರಾಜಕೀಯ-ಆರ್ಥಿಕ ಸಹಕಾರದ ಪ್ರಮುಖ ವೇದಿಕೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇದರ ಸದಸ್ಯ ರಾಷ್ಟ್ರಗಳು. ಈ ರಾಷ್ಟ್ರಗಳು ಒಟ್ಟಾಗಿ ವಿಶ್ವದ ಸುಮಾರು ಶೇ 49.5 ಜನಸಂಖ್ಯೆ, ಜಾಗತಿಕ ಜಿಡಿಪಿಯ ಸುಮಾರು ಶೇ 40 ಮತ್ತು ಜಾಗತಿಕ ವ್ಯಾಪಾರದ ಸುಮಾರು ಶೇ ೨೬ ರಷ್ಟು ಪಾಲನ್ನು ಪ್ರತಿನಿಧಿಸುತ್ತವೆ.
ದಕ್ಷಿಣ ಆಫ್ರಿಕಾ ಸೇರ್ಪಡೆಯಾದ ಬಳಿಕ ಬ್ರಿಕ್ಸ್ ಒಂದು ದಶಕಕ್ಕೂ ಅಧಿಕ ಐದು ಸದಸ್ಯ ರಾಷ್ಟ್ರಗಳ ಒಕ್ಕೂಟ ವೇದಿಕೆಯಾಗಿಯೇ ಮುಂದುವರಿಯಿತು. ೨೦೨೩ರ ಜೊಹಾನೆಸ್ಬರ್ಗ್ ಶೃಂಗಸಭೆಯಲ್ಲಿ ವಿಸ್ತರಣೆಗೆ ಒಪ್ಪಿಗೆ ನೀಡಲಾಯಿತು. ೨೦೨೪ರಲ್ಲಿ ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ಬ್ರಿಕ್ಸ್ಗೆ ಸೇರಿದವು. ಇಂಡೋನೇಷ್ಯಾ ೨೦೨೫ರಲ್ಲಿ ಪೂರ್ಣ ಸದಸ್ಯವಾಯಿತು. ಇದರೊಂದಿಗೆ ಏಷ್ಯಾ, ಆಫ್ರಿಕಾ, ಪಶ್ಚಿಮ ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದ ಪ್ರಮುಖ ರಾಷ್ಟ್ರಗಳು ಒಂದೇ ವೇದಿಕೆಯಲ್ಲಿ ಬಂದವು. ಇಂಧನ, ಜನಸಂಖ್ಯೆ, ವ್ಯಾಪಾರ ಮತ್ತು ಪ್ರಾದೇಶಿಕ ರಾಜಕೀಯದಲ್ಲೂ ಬ್ರಿಕ್ಸ್ನ ಪ್ರಭಾವ ಹೆಚ್ಚಿದೆ. ಸದಸ್ಯರ ಸಂಖ್ಯೆ ಹೆಚ್ಚಿದಂತೆ ಎಲ್ಲ ವಿಷಯಗಳಲ್ಲೂ ಒಮ್ಮತ ಸಾಧಿಸುವುದು ಸುಲಭವಲ್ಲ. ಭಾರತ-ಚೀನಾ ಸುಮಾರು ಎರಡು ದಶಕಗಳ ಪ್ರಯಾಣದಲ್ಲಿ ಬ್ರಿಕ್ಸ್ ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ವಿಭಿನ್ನ ರಾಜಕೀಯ ವ್ಯವಸ್ಥೆ ಮತ್ತು ವಿದೇಶಾಂಗ ನೀತಿಗಳ ನಡುವೆಯೂ ತನ್ನ ಸಹಕಾರವನ್ನು ಮುಂದುವರಿಸಿರುವುದು ಅದರ ಮೊದಲ ಸಾಧನೆ. ಹೊಸ ಅಭಿವೃದ್ಧಿ ಬ್ಯಾಂಕ್ ಸೇರಿದಂತೆ ವಿವಿಧ ಸಹಕಾರ ವ್ಯವಸ್ಥೆಗಳನ್ನು ರೂಪಿಸಿರುವುದು ಎರಡನೆಯದು. ಹಣಕಾಸು ಮತ್ತು ಜಾಗತಿಕ ಆಡಳಿತದ ಜೊತೆಗೆ ಆರೋಗ್ಯ, ಹವಾಮಾನ, ತಂತ್ರಜ್ಞಾನ, ಮುಂತಾದ ಹಲವಾರು ವಿಷಯಗಳಲ್ಲಿ ಒಡಂಬಡಿಕೆಗಳು ಮೂಡಿಬಂದವು. ೨೦೨೬ರ New Delhi Declaration ಒಟ್ಟು ೧೪೦ ಅಂಶಗಳನ್ನು ಒಳಗೊಂಡಿದ್ದು, ರಾಜಕೀಯ–ಭದ್ರತೆ, ಆರ್ಥಿಕ-ಹಣಕಾಸು, ವಿಜ್ಞಾನ–ತಂತ್ರಜ್ಞಾನ, ಹವಾಮಾನ, ನಗರಾಭಿವೃದ್ಧಿ, ಆರೋಗ್ಯ, ಮಹಿಳಾ ಸಬಲೀಕರಣ ಮತ್ತು Global South ಸಹಕಾರದಂತಹ ವ್ಯಾಪಕ ಕ್ಷೇತ್ರಗಳನ್ನು ಒಳಗೊಂಡಿದ್ದು ಸೆಪ್ಟೆಂಬರ್ ೧೨, ೨೦೨೬ರಂದು ನವದೆಹಲಿಯಲ್ಲಿ New Delhi Declaration ಅಂಗೀಕರಿಸಲಾಯಿತು. ಇದೇ ಶೃಂಗಸಭೆಯ ವಿಷಯ “Building for Resilience, Innovation, Cooperation and Sustainability” ಆಗಿತ್ತು. ಮುಂದಿನ ವರ್ಷ ೨೦೨೭ರಲ್ಲಿ BRICS ಅಧ್ಯಕ್ಷತೆಯನ್ನು ಚೀನಾ ವಹಿಸಿಕೊಳ್ಳಲಿದ್ದು, ೧೯ನೇ BRICS ಶೃಂಗಸಭೆ ಚೀನಾದಲ್ಲಿ ನಡೆಯಲಿದೆ.
