ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ದಿನಾಂಕ: ಸೆಪ್ಟೆಂಬರ್ 10 ರಂದು 100 ದಿನಗಳು ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಜನತೆಗೆ ನೀಡಿರುವ ಸಂದೇಶದಲ್ಲಿ ಸರ್ಕಾರದ ಮುಂದಿನ ಆದ್ಯತೆಗಳು ಹಾಗೂ ಮೊದಲ 100 ದಿನಗಳಲ್ಲಿ ಕೈಗೊಂಡಿರುವ ಪ್ರಮುಖ ಕ್ರಮಗಳನ್ನು ವಿವರಿಸಿದ್ದಾರೆ. “100 ದಿನ-100 ಮಾರ್ಗ-ಒಂದು ದೃಷ್ಟಿ” ಎಂಬ ಆಶಯದೊಂದಿಗೆ ಕರ್ನಾಟಕದ ಸಂಕಲ್ಪವನ್ನು ಮುಂದಿಟ್ಟಿರುವ ಅವರು, ಆರ್ಥಿಕವಾಗಿ ಬಲಿಷ್ಠ ಸಾಮಾಜಿಕವಾಗಿ ಸಬಲೀಕೃತ ಹಾಗೂ ತಂತ್ರಜ್ಞಾನದಲ್ಲಿ ಮುಂಚೂಣಿಯ ಕರ್ನಾಟಕ ನಿರ್ಮಾಣದ ಗುರಿಯನ್ನು ಪ್ರಕಟಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ಸಾಮಾಜಿಕ ನ್ಯಾಯದ ಬಲವಾದ ಅಡಿಪಾಯ ಹಾಕಿದ್ದಾರೆ ಎಂದು ಶಿವಕುಮಾರ್ ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ಆಡಳಿತವು ಹೆಚ್ಚು ಅಗತ್ಯವಿರುವವರ ಪರ ನಿಲ್ಲಬೇಕು ಎಂಬ ತತ್ವದೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದೇ ಸಂದರ್ಭದಲ್ಲಿ ಸರ್ಕಾರದ ಪ್ರಮುಖ ಯೋಜನೆಗಳಾದ ಐದು ಗ್ಯಾರಂಟಿಗಳು ರಾಜ್ಯದ ಕುಟುಂಬಗಳಿಗೆ ನೆರವು ಮತ್ತು ಭದ್ರತೆ ಒದಗಿಸಿವೆ ಎಂದು ಅವರು ಹೇಳಿದ್ದಾರೆ.
ಮೊದಲ 100 ದಿನಗಳಲ್ಲಿ ಸರ್ಕಾರ ಕೈಗೊಂಡಿರುವ ಪ್ರಮುಖ ಕ್ರಮಗಳಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ಗಳ ಪ್ರವೇಶದಲ್ಲಿ 7.5 ಪ್ರತಿಶತ ಮೀಸಲಾತಿ ಪ್ರಮುಖವಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಕ್ರಮವೂ ಶಿಕ್ಷಣದ ಅವಕಾಶಗಳನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶ ಹೊಂದಿದೆ.
ರಾಜ್ಯದ ಯುವಜನರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು 10,000 ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆಗೆ ಒತ್ತು ನೀಡಲಾಗಿದೆ. ಕ್ರೀಡೆ ಸಂಸ್ಕೃತಿ ಮತ್ತು ರಾಷ್ಟ್ರ ನಿರ್ಮಾಣದ ಚಟುವಟಿಕೆಗಳಲ್ಲಿ ಯುವಕರನ್ನು ತೊಡಗಿಸುವುದು ಇದರ ಉದ್ದೇಶವಾಗಿದೆ.
ಕರ್ನಾಟಕದಲ್ಲಿ ಹೂಡಿಕೆಯನ್ನು ಆಕರ್ಷಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಸರ್ಕಾರ ಆದ್ಯತೆ ನೀಡಿದೆ. ಸುಮಾರು ₹29,679 ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದ್ದು ಇದರಿಂದ ಸುಮಾರು 66,000 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಹಿಂದುಳಿದ ಜಿಲ್ಲೆಗಳತ್ತ ವಿಶೇಷ ಗಮನ ಹರಿಸುವ ಉದ್ದೇಶದಿಂದ “ಉದ್ಯೋಗ ಮಿತ್ರ” ಮೂಲಕ 10 ಜಿಲ್ಲೆಗಳಲ್ಲಿ ಒಂದು ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನೂ ಸರ್ಕಾರ ಹೊಂದಿದೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಸರ್ಕಾರಿ ಇಲಾಖೆಗಳಲ್ಲಿನ 72,000 ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿರುವುದನ್ನು ಕರ್ನಾಟಕದ ಯುವಜನಾಂಗ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಇದು ಮಹತ್ವದ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಶಿಕ್ಷಣ ಕ್ಷೇತ್ರದಲ್ಲೂ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಉದ್ದೇಶವನ್ನು ಸರ್ಕಾರ ಪ್ರಕಟಿಸಿದೆ. 6ನೇ ತರಗತಿಯಿಂದ ಕೃತಕ ಬುದ್ಧಿಮತ್ತೆ (AI) ಶಿಕ್ಷಣ ಪರಿಚಯಿಸುವ ಕ್ರಮವು ವಿದ್ಯಾರ್ಥಿಗಳನ್ನು ಭವಿಷ್ಯದ ತಂತ್ರಜ್ಞಾನಾಧಾರಿತ ಉದ್ಯೋಗಗಳಿಗೆ ಸಿದ್ಧಪಡಿಸುವ ಪ್ರಯತ್ನವಾಗಿದೆ. ಇದರ ಜೊತೆಗೆ ಕ್ಲೌಡ್ ಸೀಡಿಂಗ್ ಸೇರಿದಂತೆ ತಂತ್ರಜ್ಞಾನ ಆಧಾರಿತ ಕ್ರಮಗಳಿಗೂ ಸರ್ಕಾರ ಒತ್ತು ನೀಡಿದೆ. ಮಳೆ ಕೊರತೆ ಮತ್ತು ಬರ ಪರಿಸ್ಥಿತಿಯಂತಹ ಸವಾಲುಗಳಿಗೆ ತಂತ್ರಜ್ಞಾನವನ್ನು ಬಳಸಿಕೊಂಡು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಇದಾಗಿದೆ.
ಸರ್ಕಾರದ ಆಡಳಿತವನ್ನು ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರ ತರುವ ಉದ್ದೇಶದಿಂದ “ಪ್ರಜಾ ಸೇವಾ ಇಲಾಖೆ ಸ್ಥಾಪಿಸುವ ನಿರ್ಧಾರವನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ನೇರ ಮೇಲುಸ್ತುವಾರಿಯ ಮೂಲಕ ಜನರ ಅಹವಾಲುಗಳಿಗೆ ಸ್ಪಂದಿಸುವ ವ್ಯವಸ್ಥೆ ರೂಪಿಸುವುದು ಇದರ ಉದ್ದೇಶವಾಗಿದೆ.
ಸರ್ಕಾರ ಎಂದರೆ ಕೇವಲ ಈಗಾಗಲೇ ಘೋಷಿಸಿರುವ ಯೋಜನೆಗಳನ್ನು ಜಾರಿಗೊಳಿಸುವುದಲ್ಲ. ಜನರ ಹೊಸ ಅಗತ್ಯಗಳಿಗೆ ಅನುಗುಣವಾಗಿ ನಿರಂತರವಾಗಿ ಬದಲಾಗಬೇಕು ಎಂಬ ಸಂದೇಶವನ್ನೂ ಮುಖ್ಯಮಂತ್ರಿಗಳು ನೀಡಿದ್ದಾರೆ. ಅಗತ್ಯವಿದ್ದಾಗ ನಿರ್ಧಾರಗಳ ಮರುಪರಿಶೀಲನೆಯ ಅಗತ್ಯವಿದೆ. ತಕ್ಕಂತೆ ಮಾರ್ಗ ಬದಲಿಸುವ ಧ್ಯೇಯವೇ ಉತ್ತಮ ಆಡಳಿತದ ಶಕ್ತಿ ಎಂದು ಅವರು ಹೇಳಿದ್ದಾರೆ.
ಆರ್ಥಿಕವಾಗಿ ಬಲಿಷ್ಠ, ಸಾಮಾಜಿಕವಾಗಿ ಸಬಲೀಕೃತ, ತಂತ್ರಜ್ಞಾನದಲ್ಲಿ ಮುಂದುವರಿದ ಹಾಗೂ ತನ್ನ ಮೌಲ್ಯಗಳು ಮತ್ತು ಸಂಸ್ಕೃತಿಯ ಬೇರುಗಳಿಗೆ ಗಟ್ಟಿಯಾಗಿ ಬದ್ಧವಾಗಿರುವ ಕರ್ನಾಟಕವನ್ನು ನಿರ್ಮಿಸುವುದು ಸರ್ಕಾರದ ಗುರಿ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
ಮುಂದಿನ ದಿನಗಳು ಸುಲಭವಾಗಿರುವುದಿಲ್ಲ ಎಂಬುದನ್ನೂ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ವಿಶೇಷವಾಗಿ ಬರ ಪರಿಸ್ಥಿತಿ ಎದುರಿಸುತ್ತಿರುವ ರೈತರ ಸಮಸ್ಯೆಗಳು ಸರ್ಕಾರದ ಮುಂದಿರುವ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಮುಂಬರುವ 200 ದಿನಗಳು ಇನ್ನಷ್ಟು ದೃಢಸಂಕಲ್ಪ ಮತ್ತು ಪರಿಶ್ರಮವನ್ನು ಬೇಡುತ್ತವೆ ಎಂದು ಅವರು ಹೇಳಿದ್ದಾರೆ.
“ಕನ್ನಡಿಗರಿಗಾಗಿ ಅವಕಾಶಗಳನ್ನು ಸೃಷ್ಟಿಸುತ್ತದೆ” ಎಂಬ ಆಶಯವನ್ನು ಮುಂದಿಟ್ಟಿರುವ ಡಿಕೆಶಿ ಇದೇ “ಕನ್ನಡಿಗರ ಸ್ಫೂರ್ತಿ” ಎಂದು ಬಣ್ಣಿಸಿದ್ದಾರೆ. 100 ದಿನಗಳ ಸಾಧನೆಗಳನ್ನು ಮುಂದಿಟ್ಟುಕೊಂಡು ಸರ್ಕಾರ ತನ್ನ ಮುಂದಿನ ಪಯಣಕ್ಕೆ ಸಿದ್ಧವಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಹಿಡಿದು ಉದ್ಯೋಗ, ಹೂಡಿಕೆ, ಶಿಕ್ಷಣ, ತಂತ್ರಜ್ಞಾನ ಮತ್ತು ಜನರ ಅಹವಾಲುಗಳ ಪರಿಹಾರದವರೆಗೆ ಹಲವು ಕ್ಷೇತ್ರಗಳಲ್ಲಿ ಸರ್ಕಾರ ತನ್ನ ಆದ್ಯತೆಗಳನ್ನು ಗುರುತಿಸಿದೆ.
ಕೊನೆಯಲ್ಲಿ, “ನಾವು ನಿರಂತರವಾಗಿ ಕೆಲಸ ಮಾಡುತ್ತೇವೆ. ಉಸಿರು ಇರುವವರೆಗೂ ಕರ್ನಾಟಕ ಮತ್ತು ಕನ್ನಡಿಗರ ಸೇವೆಯಲ್ಲಿ ಇರುತ್ತೇವೆ” ಎಂಬ ಭರವಸೆಯನ್ನು ಮುಖ್ಯಮಂತ್ರಿ ಶಿವಕುಮಾರ್ ನೀಡಿದ್ದಾರೆ. ಈ ಭರವಸೆಯನ್ನು ಕಾರ್ಯರೂಪಕ್ಕೆ ತಂದು “ದೃಢ ಕರ್ನಾಟಕದ ಸಂಕಲ್ಪವನ್ನು ಸಾಕಾರಗೊಳಿಸುವುದು” ಸರ್ಕಾರದ ಮುಂದಿರುವ ಪ್ರಮುಖ ಹೊಣೆಗಾರಿಕೆಯಾಗಿದ್ದು, ಮುಂಬರುವ ದಿನಗಳಲ್ಲಿ ಎಷ್ಟರಮಟ್ಟಿಗೆ ಈ ಎಲ್ಲಾ ಯೋಜನೆಗಳು ಅನುಷ್ಠಾನಗೊಳ್ಳುತ್ತವೆಂದು ಕಾದು ನೋಡಬೇಕಿದೆ.
