ಭಾರತವನ್ನು ಆಳವಾಗಿ ಅರ್ಥಮಾಡಿಕೊಂಡ ವಿದೇಶಿ ಪತ್ರಕರ್ತರಲ್ಲಿ ಮಾರ್ಕ್ ಟಲಿ ಹೆಸರು ವಿಶೇಷವಾಗಿ ಪ್ರಸ್ತಾಪಿಸಬೇಕಾದದ್ದು ಮತ್ತು ಮಾಧ್ಯಮ ಮಾಹಿತಿ ಕ್ಷೇತ್ರದ ಒಂದು ಹೊಸತನವನ್ನೇ ಕೊಟ್ಟ ಪ್ರಥಮರು. ಬ್ರಿಟನ್ನಲ್ಲಿ ಜನಿಸಿದರೂ, ಅವರ ಪತ್ರಿಕೋದ್ಯಮ ಬದುಕಿನ ಬಹುಪಾಲು ಭಾರತಕ್ಕೆ ಸಮರ್ಪಿತವಾಗಿದೆ. ಭಾರತೀಯ ಸಮಾಜ, ರಾಜಕೀಯ, ಧರ್ಮ ಮತ್ತು ಗ್ರಾಮೀಣ ಜೀವನವನ್ನು ನೆಲಮಟ್ಟದಿಂದಲೇ ಜಗತ್ತಿಗೆ ಪರಿಚಯಿಸಿದ ಅಪರೂಪದ ಪತ್ರಕರ್ತ ಇವರು, ಭಾರತದ ನಾಡಿಮಿಡಿತವನ್ನು ಜಗತ್ತಿಗೆ ತಿಳಿಸಿದ ಪತ್ರಕರ್ತ ಎಂದರೆ ತಪ್ಪಾಗಲಾರದು.
1935 ರಲ್ಲಿ ಇಂಗ್ಲೆಂಡ್ನಲ್ಲಿ ಜನಿಸಿದ ಮಾರ್ಕ್ ಟಲಿ, ಬಿಬಿಸಿ ಸಂಸ್ಥೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದರು. 1972ರಿಂದ 1994ರವರೆಗೆ ನವದೆಹಲಿಯ ಬಿಬಿಸಿ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಮತ್ತು ಭಾರತದ ಹಲವು ಮಹತ್ವದ ರಾಜಕೀಯ ಹಾಗೂ ಸಾಮಾಜಿಕ ಘಟನೆಗಳನ್ನು ನೇರವಾಗಿ ವರದಿ ಮಾಡಿದ್ದ ಏಕೈಕ ವಿದೇಶಿ ಪತ್ರಕರ್ತರು. ಇಂದಿರಾ ಗಾಂಧಿಯವರ ಆಡಳಿತಾವಧಿ, ತುರ್ತು ಪರಿಸ್ಥಿತಿ (ಎಮರ್ಜೆನ್ಸಿ), ಪಂಜಾಬ್ ಸಂಕಷ್ಟ, ಅಮೃತಸರದ ಸ್ವರ್ಣ ಮಂದಿರದ ಘಟನೆಗಳು-ಇವೆಲ್ಲವೂ ಅವರ ವರದಿಗಳಲ್ಲಿ ಸ್ಪಷ್ಟವಾಗಿ ನಿರೂಪಣೆಗೊಂಡು ಸರ್ಕಾರ ನಿರ್ಧಾರಗಳನ್ನು ಪ್ರಸ್ತುತಪಡಿಸುವಲ್ಲಿ ರೋಚಕತೆಗೆ ಹೆಸರುವಾಸಿಯಾಗಿರುತ್ತದೆ.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮರ್ಕ್ ಟುಲ್ಲಿ(90) ಜನವರಿ 25ರಂದು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಭಾರತ ಮತ್ತು ಬ್ರಿಟಿಷ್ ರಾಜರ ಸಾಕ್ಷ್ಯಚಿತ್ರದಿಂದ ಆರಂಭಗೊಂಡು ಭಾರತೀಯ ರೈಲ್ವೆ ಕುರಿತ ಸಾಕ್ಷ್ಯಚಿತ್ರಗಳವರೆಗೆ ಹಲವು ಸಾಕ್ಷ್ಯ ಚಿತ್ರಗಳ ಭಾಗವಾಗಿ ಟುಲ್ಲಿ ಕೆಲಸ ಮಾಡಿದ್ದರು. ಬಾಂಗ್ಲಾದೇಶದ ಜೊತೆಗಿನ 1971ರಯುದ್ಧ. ತರ್ತು ಪರಿಸ್ಥಿತಿ ಹೇರಿಕೆ ಸೇರಿದಂತೆ ಸ್ವಾತಂತ್ರೋತ್ತರ ಭಾರತದ ಹಲವಾರು ಘಟನೆಗಳನ್ನು ಟುಲ್ಲಿ ಐತಿಹಾಸಿಕ ಬಿಬಿಸಿಯಲ್ಲಿ ಪ್ರಥಮವಾಗಿ ವರದಿ ಮಾಡಿದ್ದು ಅವರ ವೃತ್ತಿಜೀವನದ ಮೈಲಿಗಲ್ಲು.
ಟುಲ್ಲಿ ಬಿಬಿಸಿಯಿಂದ ಹೊರಬಂದ ಬಳಿಕ ಯಾವುದೇ ಸಂಸ್ಥೆ ಸೇರದೆ ಸ್ವತಂತ್ರವಾಗಿ ಕೆಲಸ ಮಾಡಿದರು. ದೇಶದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳನ್ನು ವಿಶ್ಲೇಷಿಸುತ್ತಿದ್ದರು. ‘ನೋ ಫುಲ್ ಸ್ಟಾಪ್ ಇನ್ ಇಂಡಿಯಾ’, ‘ಇಂಡಿಯಾ ಇನ್ ಸ್ಲೋ ಮೋಷನ್’ ಮತ್ತು ‘ದ ಆರ್ಟ್ ಆಫ್ ಇಂಡಿಯಾ’ ಸೇರಿದಂತೆ ಭಾರತದ ಬಗ್ಗೆ ಹಲವು ಕೃತಿಗಳನ್ನು ಬರೆದಿದ್ದಾರೆ. ‘ಆಪರೇಷನ್ ಬ್ಲೂ ಸ್ಟಾರ್ ಮತ್ತು ಪಂಜಾಬ್ ಸಮಸ್ಯೆಗಳ ಕುರಿತಾಗಿ ಬರೆದ ಅಮೃತಸರ: ಮಿ.ಗಾಂಧೀಸ್ ಲಾಸ್ಟ್ ಬ್ಯಾಟಲ್’ ಪುಸ್ತಕವು ಮೊದಲ ಕೃತಿ. ಬ್ರಿಟನ್ ನೀಡುವ ಅತ್ಯುನ್ನತ ನೈಟ್ ಗೌರವವನ್ನು ೨೦೦೨ರಲ್ಲಿ ಪಡೆದ ಟುಲ್ಲಿ, 1992ರಲ್ಲಿ ದೇಶದ ಉನ್ನತ ನಾಗರಿಕ ಪುರಸ್ಕಾರ ಪದ್ಮಶ್ರೀ ಮತ್ತು 2005ರಲ್ಲಿ ಪದ್ಮಭೂಷಣಕ್ಕೆ ಭಾಜನರಾಗಿದ್ದರು.
ಮರ್ಕ್ ಟಲಿಯವರ ವರದಿಗಳ ವಿಶೇಷತೆ ಎಂದರೆ, ಅವರು ಕೇವಲ ಅಧಿಕಾರಿಗಳ ಹೇಳಿಕೆಗಳಿಗಷ್ಟೇ ಸೀಮಿತವಾಗಿರಲಿಲ್ಲ. ಗ್ರಾಮೀಣ ಭಾರತದ ಸಾಮಾನ್ಯ ಜನರ ಬದುಕು, ಅವರ ಆಶೆಗಳು, ಸಂಕಷ್ಟಗಳು ಹಾಗೂ ಸಂಸ್ಕೃತಿಯ ವೈಶಿಷ್ಟ್ಯಗಳನ್ನು ಅತೀವ ಸಂವೇದನಾಶೀಲತೆಯಿಂದ ಬಿಂಬಿಸಿದರು. ಹಿಂದಿ ಭಾಷೆಯಲ್ಲಿ ನಿಪುಣರಾಗಿದ್ದ ಟಲಿ, ಸ್ಥಳೀಯರೊಂದಿಗೆ ನೇರವಾಗಿ ಸಂವಹನ ನಡೆಸಿ, ಭಾರತದ ನಿಜವಾದ ಮುಖವನ್ನು ಪಾಶ್ಚಾತ್ಯ ಜಗತ್ತಿಗೆ ತೋರಿಸಿದರು.
ಬ್ರಿಟನ್ ಪ್ರಜೆಯಾಗಿದ್ದರೂ ಭಾರತೀಯ ಮೌಲ್ಯಗಳು, ಧಾರ್ಮಿಕ ಸಹಿಷ್ಣುತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಬಗ್ಗೆ ಅಪಾರ ಗೌರವ ಹೊಂದಿದ್ದ ಮಾರ್ಕ್ ಟಲಿ, ಭಾರತೀಯ ಪತ್ರಿಕೋದ್ಯಮ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ‘ಭಾರತವನ್ನು ಭಾರತವಾಗಿ ಅರ್ಥಮಾಡಿಕೊಂಡ ಪತ್ರಕರ್ತ’ ಎಂಬ ಹೆಸರಿನಿಂದಲೇ ಅವರು ಇಂದು ಕೂಡ ಸ್ಮರಿಸಲ್ಪಡುತ್ತಾರೆ.
