ಜುಲೈ 19 ರಂದು ಅಮೇರಿಕಾದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯಕ್ಕಾಗಿ ವಿಶ್ವ ಫುಟ್ಬಾಲ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ 2026ರ ಫಿಫಾ ವಿಶ್ವಕಪ್ ಫೈನಲ್ನಲ್ಲಿ ಸ್ಪೇನ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು 1–0 ಗೋಲುಗಳಿಂದ ಮಣಿಸಿದ ಸ್ಪೇನ್, ಹೆಚ್ಚುವರಿ ವೇಳೆಯಲ್ಲಿ ದಾಖಲಿಸಿದ ಏಕೈಕ ಗೋಲಿನ ಬಲದಿಂದ ತನ್ನ ಇತಿಹಾಸದ ಎರಡನೇ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ನ್ಯೂಜೆರ್ಸಿಯ ಮೆಟ್ಲೈಫ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯ ಆರಂಭದಿಂದಲೇ ಸ್ಪೇನ್ ಚೆಂಡಿನ ಮೇಲೆ ಹಿಡಿತ ಸಾಧಿಸಿ ದಾಳಿಗಳನ್ನು ನಡೆಸಿತು. ಆದರೆ ಅರ್ಜೆಂಟೀನಾ ಗೋಲ್ಕೀಪರ್ ಎಮಿಲಿಯಾನೊ ಮಾರ್ಟಿನೆಸ್ ಅದ್ಭುತ ಸೇವ್ಗಳ ಮೂಲಕ ಸ್ಪೇನ್ಗೆ ನಿರಾಸೆ ಉಂಟುಮಾಡಿದರು. ಇನ್ನೊಂದೆಡೆ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಸ್ಪೇನ್ನ ಬಲಿಷ್ಠ ರಕ್ಷಣೆಯನ್ನು ಭೇದಿಸಲು ವಿಫಲವಾಯಿತು.
ನಿಗದಿತ 90 ನಿಮಿಷಗಳಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾದ ಕಾರಣ ಪಂದ್ಯ ಹೆಚ್ಚುವರಿ ವೇಳೆಗೆ ಸಾಗಿತು. 106ನೇ ನಿಮಿಷದಲ್ಲಿ ಪೆಡ್ರೊ ಪೊರೊ ಅವರ ಕ್ರಾಸ್ ಅನ್ನು ನಿಕೋ ವಿಲಿಯಮ್ಸ್ ಹೆಡ್ ಮೂಲಕ ಫೆರಾನ್ ಟೊರೆಸ್ಗೆ ತಲುಪಿಸಿದಾಗ, ಟೊರೆಸ್ ಯಾವುದೇ ತಪ್ಪಿಲ್ಲದೆ ಚೆಂಡನ್ನು ಗೋಲಿನ ಬಲೆಗೆ ಸೇರಿಸಿ ಸ್ಪೇನ್ಗೆ ಅಮೂಲ್ಯ ಮುನ್ನಡೆ ತಂದುಕೊಟ್ಟರು. ಅದೇ ಪಂದ್ಯ ನಿರ್ಣಾಯಕ ಕ್ಷಣವಾಯಿತು.
ಪಂದ್ಯದ ಅಂತಿಮ ಕ್ಷಣಗಳಲ್ಲಿ ಅರ್ಜೆಂಟೀನಾ ಸಮಬಲ ಸಾಧಿಸಲು ಪ್ರಯತ್ನಿಸಿದರೂ ಸ್ಪೇನ್ನ ಶಿಸ್ತುಬದ್ಧ ರಕ್ಷಣೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂತಿಮ ಸೀಟಿಯೊಂದಿಗೆ ಸ್ಪೇನ್ ಆಟಗಾರರು ಸಂಭ್ರಮದಲ್ಲಿ ತೇಲಿದರೆ, ಸತತ ಎರಡನೇ ವಿಶ್ವಕಪ್ ಗೆಲ್ಲುವ ಅರ್ಜೆಂಟೀನಾದ ಕನಸು ಭಗ್ನವಾಯಿತು.
ಈ ಗೆಲುವಿನೊಂದಿಗೆ ಸ್ಪೇನ್ 2010ರ ನಂತರ ಮತ್ತೊಮ್ಮೆ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿದ್ದು, ಒಟ್ಟಾರೆ ಎರಡನೇ ಬಾರಿ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ತರಬೇತುದಾರ ಲೂಯಿಸ್ ಡೆ ಲಾ ಫುಯೆಂಟೆ ಅವರ ಮಾರ್ಗದರ್ಶನದಲ್ಲಿ ಸ್ಪೇನ್ ಸಂಪೂರ್ಣ ಟೂರ್ನಿಯಲ್ಲಿ ತೋರಿದ ಸಂಘಟಿತ ಆಟಕ್ಕೆ ಈ ಪ್ರಶಸ್ತಿ ತಕ್ಕ ಪ್ರತಿಫಲವಾಗಿದೆ.
ಫಿಫಾ ವಿಶ್ವಕಪ್ 2026ರ ಸೆಮಿಫೈನಲ್ ಹಂತಕ್ಕೆ ವಿಶ್ವ ಶ್ರೇಯಾಂಕದ ಅಗ್ರ ನಾಲ್ಕು ಬಲಿಷ್ಠ ತಂಡಗಳಾದ ಅರ್ಜೆಂಟೀನಾ, ಇಂಗ್ಲೆಂಡ್, ಸ್ಪೇನ್ ಮತ್ತು ಫ್ರಾನ್ಸ್ ಲಗ್ಗೆ ಇಟ್ಟಿವೆ. ಕ್ವಾರ್ಟರ್ ಫೈನಲ್ನಲ್ಲಿ ರೋಚಕ ಜಯ ಸಾಧಿಸಿದ ಈ ಮಾಜಿ ಚಾಂಪಿಯನ್ಗಳ ಮುಖಾಮುಖಿಯಿಂದಾಗಿ, ಈ ಬಾರಿ ಯಾವುದೇ ಹೊಸ ತಂಡ ಚಾಂಪಿಯನ್ ಆಗುವುದಿಲ್ಲ ಎಂಬುದು ಖಚಿತವಾಗಿದೆ. ಜುಲೈ 15 ಮತ್ತು 16 ರಂದು ಪಂದ್ಯಗಳು ನಡೆದು ವಿಶ್ವಕಪ್ನ ಜಿದ್ದಾಜಿದ್ದಿನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಇಂಗ್ಲೆಂಡ್ ಅನ್ನು ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟಿತ್ತು. ಈ ಮೂಲಕ ಅರ್ಜೆಂಟೀನಾ ಸತತ ಎರಡನೇ ಬಾರಿಗೆ ವಿಶ್ವಕಪ್ ಫೈನಲ್ ತಲುಪಿದಂತಾಗಿದೆ. ಪಂದ್ಯದ 85ನೇ ನಿಮಿಷದವರೆಗೂ ಒಂದು ಗೋಲಿನಿಂದ ಹಿಂದಿದ್ದ ಅರ್ಜೆಂಟೀನಾ, ಕೊನೆಯ ಕ್ಷಣಗಳಲ್ಲಿ ಎರಡು ಗೋಲುಗಳನ್ನು ಬಾರಿಸಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.
ಫುಟ್ಬಾಲ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ 23ನೇ ಆವೃತ್ತಿಯ ಪಿಫಾ ವಿಶ್ವಕಪ್ (FIFA World Cup 2026) ಕ್ರೀಡಾಕೂಟಕ್ಕೆ ಮೆಕ್ಸಿಕೊ ಸಿಟಿಯ ಐತಿಹಾಸಿಕ ಅಜ್ಟಿಕಾ ಕ್ರೀಡಾಂಗಣದಲ್ಲಿ ಅದ್ಧೂರಿ ಮತ್ತು ವರ್ಣರಂಜಿತ ಚಾಲನೆ ಸಿಕ್ಕಿ ಜೂನ್ 16 ರಂದು ಪಂದ್ಯಗಳು ಪ್ರಾರಂಭವಾಯಿತು. ಇತಿಹಾಸದಲ್ಲೇ ಮೊದಲ ಬಾರಿಗೆ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ಜಂಟಿಯಾಗಿ ಈ ಜಾಗತಿಕ ಟೂರ್ನಿಗೆ ಆತಿಥ್ಯ ವಹಿಸುತ್ತಿವೆ.
ಉದ್ಘಾಟನಾ ಸಮಾರಂಭದಲ್ಲಿ ವಿಶ್ವಪ್ರಸಿದ್ಧ ಪಾಪ್ ಗಾಯಕಿ ಶಕೀರಾ (Shakira) ಮತ್ತು ನೈಜೀರಿಯಾದ ಸ್ಟಾರ್ ಗಾಯಕ ಬರ್ನಾ ಬಾಯ್ (Burna Boy) ತಮ್ಮ ಅದ್ಭುತ ಗಾಯನ ಮತ್ತು ನೃತ್ಯದ ಮೂಲಕ ಕ್ರೀಡಾಂಗಣದಲ್ಲಿದ್ದ ಲಕ್ಷಾಂತರ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಮೆಕ್ಸಿಕೋದ ಸಾಂಪ್ರದಾಯಿಕ ‘ಮರಿಯಾಚಿ’ ಸಂಗೀತ, ಜಾನಪದ ನೃತ್ಯಗಳು ಹಾಗೂ ಅತ್ಯಾಧುನಿಕ ಡ್ರೋನ್ ಮತ್ತು ಲೈಟ್ ಶೋಗಳು ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಗಳಾಗಿದ್ದವು.
ಸಮಾರಂಭ ಮುಗಿದ ಬೆನ್ನಲ್ಲೇ ನಡೆದ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೊ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಿತು. ತವರಿನ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಈ ಪಂದ್ಯದೊಂದಿಗೆ ಜಗತ್ತಿನ ಅತಿ ದೊಡ್ಡ ಕ್ರೀಡಾ ಹಬ್ಬಕ್ಕೆ ಅಧಿಕೃತವಾಗಿ ಚಾಲನೆ ದೊರೆತಂತಾಗಿದೆ. ಈ ಬಾರಿ ಒಟ್ಟು 48 ತಂಡಗಳು 104 ಪಂದ್ಯಗಳ ಮೂಲಕ ವಿಶ್ವಕಪ್ ಟ್ರೋಫಿಗಾಗಿ ಸೆಣಸಾಡಿದ್ದವು.
