ಬೆಂಗಳೂರು: ಸಾರ್ವಜನಿಕರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು (ಮ್ಯೂಲ್ ಖಾತೆ) ತೆರೆದು ವಂಚಿಸುತ್ತಿದ್ದ ವಿವಿಧ ರಾಜ್ಯಗಳ ೧೨ ಮಂದಿಯನ್ನು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಹುಳಿಮಾವು ಠಾಣೆ ಪೊಲೀಸರು ಬಂಧಿಸಿ, ಬ್ಯಾಂಕ್ನಲ್ಲಿದ್ದ ₹240 ಕೋಟಿ ವಹಿವಾಟು ಸ್ಥಗಿತಗೊಳಿಸಿದ್ದಾರೆ. ಬೃಹತ್ ಸೈಬರ್ ವಂಚನೆಯ ಜಾಲವನ್ನು ಪತ್ತೆ ಹಚ್ಚುವಲ್ಲಿ ನಗರ ಪೊಲೀಸರು ಯಶಸ್ವಿ ಆಗಿದ್ದಾರೆ.
ಬೆಂಗಳೂರಿನ ಜೆ.ಪಿ.ನಗರದ 2ನೇ ಹಂತದ ಅಂಜನಾಪುರದ ನಿವಾಸಿ ಮೊಹಮ್ಮದ್ ಹುಜೈಫಾ ಮತ್ತು ಅವರ ತಾಯಿ ಶಬಾನಾ ಉತ್ತರ ಪ್ರದೇಶದ ಅಂಕಿತ್ ಕುಮಾರ್ ಸಿಂಗ್ (32), ಬಿಹಾರದ ಅಜಿತ್ ಕುಮಾರ್ ಯಾದವ್ (29), ರಾಜಸ್ಥಾನದ ಅಭಿಷೇಕ್ ಸಿಂಗ್, ರಾಥೋಡ್ (22), ವಿಶ್ವರಾಜ್ ಸಿಂಗ್ (28), ಕುಶಾಲ್ಸಿಂಗ್ ಚೌಹಾಣ್ (26), ರಾಜಸ್ಥಾನದ ಪ್ರದೀಪ್ಕುಮಾರ್ ಸಿಂಗ್ (30), ಪಿತಾಂಬರ್ ಸಿಂಗ್ (30), ಅಜಯ್ ಕುಮಾರ್ (30) ಹಾಗೂ ಜಾರ್ಖಂಡ್ ಸತ್ಯಂಕುಮಾರ್ ಪಾಂಡೆ (೨೭), ಉತ್ತರಪ್ರದೇಶದ ಆಕಾಶ್ ಜೈಸ್ವಾಲ್ (೨೯) ಬಂಧಿತರು. ಆರೋಪಿಗಳು, ಬೆಂಗಳೂರಿನ ವ್ಯಕ್ತಿಗೆ ರೂ.3.20 ಕೋಟಿ ವಂಚಿಸಿದ್ದರು. ಪ್ರಕರಣದ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದ್ದವು. ಖಚಿತ ಸುಳಿವು ಹಾಗೂ ತಾಂತ್ರಿಕ ನೆರವು ಆಧರಿಸಿ ತನಿಖೆ ನಡೆಸಿದಾಗ, ಕಾನೂನು ಬಾಹಿರವಾಗಿ ಸಾರ್ವಜನಿಕರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ವಂಚಿಸುತ್ತಿರುವುದು ಹಾಗೂ ಹೂಡಿಕೆ ಹೆಸರಿನಲ್ಲಿ ದೇಶದ ನಾನಾ ಭಾಗದ ಜನರಿಗೆ ಕರೆ ಮಾಡಿ ವಂಚನೆ ನಡೆಸುತ್ತಿರುವುದು ಪತ್ತೆ ಆಯಿತು ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
‘ಬ್ಯಾಂಕ್ನಲ್ಲಿದ್ದ ರೂ.೨೪೦ ಕೋಟಿ ವಹಿವಾಟನ್ನು ಸದ್ಯಕೆ ಸ್ಥಗಿತಗೊಳಿಸಲಾಗಿದೆ. ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಆರೋಪಿಗಳು ವಂಚಿಸಿದ್ದ ₹94 ಲಕ್ಷ ವಾಪಸ್ ಪಡೆಯಲಾಗಿದೆ. ಇನ್ನೂ ಹೆಚ್ಚಿನ ವಂಚನೆ ನಡೆದಿರುವ ಸಾಧ್ಯತೆಯಿದ್ದು, ಬೆಂಗಳೂರಿಗೆ ಸಂಬಂಧಿಸಿದಂತೆ ₹24 ಕೋಟಿ ವಂಚನೆ ಕುರಿತು ತನಿಖೆ ಮುಂದುವರಿಸಲಾಗಿದೆ. 9 ಸಾವಿರ ಖಾತೆಗಳಿಗೆ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ’ ಎಂದು ಪೊಲೀಸರು ಹೇಳಿದರು. ‘ದೆಹಲಿಯ ಓಲ್ಡ್ ರಾಜೇಂದ್ರ ನಗರದಲ್ಲಿ ಕಾಲ್ಸೆಂಟರ್ ನಡೆಸುತ್ತಿದ್ದ ಆರೋಪಿಗಳು, ಜನರಿಗೆ ಕರೆ ಮಾಡಿ ಹೂಡಿಕೆ ಯೋಜನೆಗಳ ಬಗ್ಗೆ ತಿಳಿಸಿ ಆಕರ್ಷಿಸುತ್ತಿದ್ದರು. ನಂತರ, ತಮ್ಮದೇ ಅನಧಿಕೃತ ಆ್ಯಪ್ ಇನ್ ಸ್ಟಾಲ್ ಮಾಡಿಸಿ. ಅದರ ಮೂಲಕ ಹೂಡಿಕೆ ಮಾಡಿಸುತ್ತಿದ್ದರು. ಹಣ ಹೂಡಿಕೆ ಮಾಡಿದವರಿಗೆ ಆರಂಭದಲ್ಲಿ ಅಲ್ಪ ಪ್ರಮಾಣದಲ್ಲಿ ಲಾಭಾಂಶ ನೀಡುವ ಮೂಲಕ ನಂಬಿಕೆ. ಗಳಿಸುತ್ತಿದ್ದರು’ ಎಂದು ಮೂಲಗಳು ಹೇಳಿವೆ. ಹೆಚ್ಚು ಹಣ ಹೂಡಿಕೆ ಮಾಡಿದ ಬಳಿಕ ವಾಪಸ್ ಪಡೆಯುವ ಅವಕಾಶ ನೀಡುತ್ತಿರಲಿಲ್ಲ. ಇದೇ ರೀತಿ ನೂರಾರು ಜನರಿಗೆ ವಂಚಿಸಿದ್ದ ಆರೋಪಿಗಳ ವಿರುದ್ಧ ದೇಶದ ವಿವಿಧ ಪೊಲೀಸ್ ಠಾಣೆ ಹಾಗೂ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಹೇಳಿದರು.
ವಂಚನೆಯಲ್ಲಿ ತಾಯಿ, ಮಗನ ಪಾತ್ರ
ವಂಚನೆ ಪ್ರಕರಣದ ತನಿಖೆ ಆರಂಭಿಸಿದಾಗ ಹಣ ವರ್ಗಾವಣೆಯಾಗಿದ್ದ ಖಾತೆಗಳ ಸುಳಿವು ಸಿಕ್ಕಿತ್ತು. ‘ಮೊಹಮ್ಮದ್ ಹುಜೈಫಾ ಮತ್ತು ಅವರ ತಾಯಿ ಶಬಾನಾ ಅವರನ್ನು ಮೊದಲಿಗೆ ಬಂಧಿಸಲಾಯಿತು. ಪ್ರಮುಖ ಆರೋಪಿಗಳ ಸೂಚನೆಯಂತೆ ತಾಯಿ ಹಾಗೂ ಮಗ ಬ್ಯಾಂಕ್ಗೆ ತೆರಳಿ ಖಾತೆ ತೆರೆಯುವ ಕೆಲಸ ಮಾಡುತ್ತಿದ್ದರು. ಸಾರ್ವಜನಿಕರಿಂದ ದಾಖಲೆಗಳನ್ನೂ ಪಡೆದುಕೊಳ್ಳುತ್ತಿದ್ದರು. ದಾಖಲೆ ನೀಡಿದವರಿಗೆ ಕಮಿಷನ್ ರೂಪದಲ್ಲಿ ಹಣ ನೀಡುತ್ತಿದ್ದರು. ಮೊಹಮ್ಮದ್ ಹುಜೈಫಾ ಮತ್ತು ಶಬಾನಾ ಅವರು ನೀಡಿದ ಮಾಹಿತಿ ಮೇಲೆ ದೇಶದ ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಉಳಿದ ೧೦ ಮಂದಿಯನ್ನು ಬಂಧಿಸಲಾಯಿತು ಎಂದು ಮೂಲಗಳು ಹೇಳಿವೆ.
ಆರೋಪಿಗಳಿಂದ ಜಪ್ತಿ ಮಾಡಿದ್ದು…
58 ಮೊಬೈಲ್ ಫೋನ್, 242 ಡೆಬಿಟ್ ಕಾರ್ಡ್, ಏಳು ಲ್ಯಾಪ್ಟಾಪ್, 530 ಗ್ರಾಂ ಚಿನ್ನಾಭರಣ, ₹4.89 ಲಕ್ಷ ನಗದು, 33 ಚೆಕ್ಬುಕ್, ವಿವಿಧ ಬ್ಯಾಂಕ್ಗಳ 21 ಪಾಸ್ಬುಕ್, ವಿದೇಶದ ಏಳು ವಾಚ್ಗಳು, ಒಂದು ಆನ್ಲೈನ್ ಡಿಜಿಟಲ್ ಪೇಮೆಂಟ್ ರಿಂಗ್, ಒಂದು ಕ್ರಿಪ್ರೊ ಕರೆನ್ಸಿ ಲೆಕ್ಚರ್.
