ಹೊಸ ಬಡಾವಣೆಗಳಿಗೆ ಅರ್ಜಿಗಳನ್ನು ಸಲ್ಲಿಸಲು ಗ್ರಾಮ ಪಂಚಾಯಿತಿ ಹಂತದಲ್ಲಿ ಅವಕಾಶ ನೀಡಲಾಗಿದೆ. ಈವರೆಗೆ 2238 ಹೊಸ ಬಡಾವಣೆಗಳಿಗೆ ಅರ್ಜಿ ಸಲ್ಲಿಕೆಯಾಗಿದ್ದು, ಅವುಗಳಲ್ಲಿ 998 ಹೊಸ ಬಡಾವಣೆಗಳಿಗೆ ಗ್ರಾಮ ಪಂಚಾಯಿತಿ ಹಂತದಲ್ಲಿ ಅನುಮೋದನೆ. ನಮೂನೆ-11 ಬಿ ಖಾತೆಗಳನ್ನು ನಮೂನೆ-11ಎ ಗಳಾಗಿ ಪರಿವರ್ತನೆ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿ ಹಂತದಲ್ಲಿ ಅವಕಾಶ. ಹೊಸ ಬಹುಮಹಡಿ ಕಟ್ಟಡಗಳಿಗೆ (ಅಪಾರ್ಟ್ಮೆಂಟ್) ಅರ್ಜಿಗಳನ್ನು ಸಲ್ಲಿಸಲು ಗ್ರಾಮ ಪಂಚಾಯಿತಿ ಹಂತದಲ್ಲಿ ಅವಕಾಶ. ಇ-ಸ್ವತ್ತು ತಂತ್ರಾಂಶದ ಸಿಟಿಜನ್ ಇಂಟರ್ಫೇಸ್ ಮೂಲಕ ಅರ್ಜಿಗಳನ್ನು ಸಲ್ಲಿಸುವಲ್ಲಿ ಗುಂಟೆ ಮತ್ತು ಸೆಂಟ್ಸ್ನಲ್ಲಿರುವ ವಿಸ್ತೀರ್ಣವನ್ನು ಚ.ಮೀ ನಲ್ಲಿ ಪರಿವರ್ತಿಸಿ, ಅರ್ಜಿಗಳನ್ನು ಸಲ್ಲಿಸಲು ಅವಕಾಶ. ಇ-ಸ್ವತ್ತು ತಂತ್ರಾಂಶದ ಸಿಟಿಜನ್ ಇಂಟರ್ಫೇಸ್ ಮೂಲಕ ಋಣಭಾರ ಪ್ರಮಾಣಪತ್ರ ಸಲ್ಲಿಸಲು ಉಂಟಾಗುತ್ತಿದ್ದ ಸಮಸ್ಯೆಗಳನ್ನು ಪರಿಷ್ಕರಿಸಿ ತಂತ್ರಾಂಶದಲ್ಲಿ ಬದಲಾವಣೆ ಮಾಡಿ ಆದಷ್ಟು ಬಗೆಹರಿಸಲಾಗಿದೆ.
ಇ-ಸ್ವತ್ತು 2.0 ತಂತ್ರಾಂಶದಡಿ ಸ್ವೀಕರಿಸುತ್ತಿರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ತೀವ್ರಗೊಳಿಸಿದ್ದು, ಈವರೆಗೆ ಒಟ್ಟು 1,40,719 ಅರ್ಜಿಗಳನ್ನು ಅನುಮೋದಿಸಿ, ವಿಲೇವಾರಿ ಮಾಡಲಾಗಿದೆ ಎಂದು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಹೊಸ ನಮೂನೆ 11-ಬಿ ಅಡಿ ಈವರೆಗೆ 82,640 ಅರ್ಜಿಗಳು ಸ್ವೀಕೃತವಾಗಿದ್ದು, ವಿವಿಧ ಹಂತಗಳಲ್ಲಿ ಈ ಅರ್ಜಿಗಳು ಅನುಮೋದನೆಗೆ ಬಾಕಿ ಉಳಿದಿವೆ. ಈ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಇ-ಸ್ವತ್ತು ೨.೦ ತಂತ್ರಾಂಶದಡಿ ಸಾರ್ವಜನಿಕರಿಂದ ಇದುವರೆಗೆ ಒಟ್ಟು 1,52,863 ಅರ್ಜಿಗಳು ಸ್ವೀಕೃತವಾಗಿವೆ. ಇವುಗಳಲ್ಲಿ 7896 ಅರ್ಜಿಗಳು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳ ಲಾಗಿನ್ನಲ್ಲಿ, 3.182 ಅರ್ಜಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಲಾಗಿನ್ನಲ್ಲಿ, 4,063 ಅರ್ಜಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರು/ಆಡಳಿತಾಧಿಕಾರಿ ಲಾಗಿನ್ನಲ್ಲಿ ಹಾಗೂ 1,947 ಅರ್ಜಿಗಳು ತಾ.ಪಂ. ಇಒ ಲಾಗಿನ್ಲ್ಲಿ ಅನುಮೋದನೆಗಾಗಿ ಬಾಕಿ ಇವೆ ಎಂದಿದ್ದಾರೆ.
ಅಲ್ಲದೇ, 950 ಅರ್ಜಿಗಳು ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಅನುಮೋದನೆಗೊಂಡು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಲಾಗಿನ್ನಲ್ಲಿವೆ. ಈ ರೀತಿ, ವಿವಿಧ ಹಂತಗಳಲ್ಲಿ ಒಟ್ಟು 18,011 ಅರ್ಜಿಗಳು ಅನುಮೋದನೆಗಾಗಿ ಬಾಕಿ ಇವೆ ಎಂದು ವಿವರಿಸಿದ್ದಾರೆ.
ಇ-ಸ್ವತ್ತು 2.0 ತಂತ್ರಾಂಶದ ಸಿಟಿಜನ್ ಇಂಟರ್ಫೇಸ್ ಮೂಲಕ ಅರ್ಜಿಗಳನ್ನು ಸಲ್ಲಿಸುವಲ್ಲಿ ಮತ್ತು ಬಳಕೆದಾರರು ಅರ್ಜಿಗಳನ್ನು ಅನುಮೋದನೆ ಮಾಡುವ ಸಂದರ್ಭಗಳಲ್ಲಿ ಎದುರಾಗುತ್ತಿದ್ದ ತಾಂತ್ರಿಕ ಸಮಸ್ಯೆಗಳನ್ನು ಆದಷ್ಟು ಪರಿಹರಿಸಲಾಗಿದೆ ಎಂದು ಪಂಚಾಯಿತ್ ರಾಜ್ ಸಚಿವರು ಹೇಳಿದ್ದಾರೆ. ಈ ಕ್ರಮದಿಂದ ಇ-ಸ್ವತ್ತು ಖಾತೆ ಪಡೆಯಲು ಎಷ್ಟು ಜನರಿಗೆ ಉಪಯೋಗವಾಗಲಿದೆ ಎಂದು ಕಾದು ನೋಡಬೇಕಾಗಿದೆ.
