ಬೆಂಗಳೂರು ನಗರದ ಆಡಳಿತ ವ್ಯವಸ್ಥೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗಳು ಹಲವು ವರ್ಷಗಳಿಂದ ನಡೆಯದೆ ಇರುವುದೇ ಸಾರ್ವಜನಿಕ ಚರ್ಚೆಯ ಪ್ರಮುಖ ವಿಷಯವಾಗಿದೆ. 2015ರಲ್ಲಿ ಕೊನೆಯ ಬಾರಿ ನಡೆದ ಪಾಲಿಕೆ ಚುನಾವಣೆಯ ನಂತರ, ಜನಪ್ರತಿನಿಧಿಗಳ ಅವಧಿ ಮುಗಿದರೂ ಹೊಸ ಚುನಾವಣೆಗಳು ನಡೆಯದಿರುವುದು, ಸ್ಥಳೀಯ ಆಡಳಿತ ವ್ಯವಸ್ಥೆಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.
ಬಿಬಿಎಂಪಿ ವ್ಯಾಪ್ತಿಯು ವಿಸ್ತಾರಗೊಂಡಂತೆ, ಆಡಳಿತದ ಸಂಕೀರ್ಣತೆಯೂ ಹೆಚ್ಚಾಗಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಆಡಳಿತ (GBA) ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಬಿಬಿಎಂಪಿಯನ್ನು ಪುನರ್ರಚಿಸುವ ನಿರ್ಧಾರ ಕೈಗೊಂಡಿದೆ. ನಗರವನ್ನು ಹಲವು ಘಟಕಗಳಾಗಿ ವಿಭಜಿಸಿ ಪರಿಣಾಮಕಾರಿ ಆಡಳಿತ ನಡೆಸುವ ಉದ್ದೇಶ ಇದ್ದರೂ, ಈ ರಚನಾತ್ಮಕ ಬದಲಾವಣೆಗಳೇ ಚುನಾವಣಾ ಪ್ರಕ್ರಿಯೆಗೆ ಪ್ರಮುಖ ಅಡ್ಡಿಯಾಗಿದೆ. ಚುನಾವಣೆ ವಿಳಂಬಕ್ಕೆ ಪ್ರಮುಖ ಕಾರಣಗಳಲ್ಲಿ ವಾರ್ಡ್ ಪುನರ್ವಿಂಗಡಣೆ ಮೀಸಲಾತಿ ನಿಗದಿ, ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಹೊಸ ಆಡಳಿತ ಕಾಯ್ದೆಯ ಅನುಷ್ಠಾನ ಸೇರಿವೆ. ಈ ಪ್ರಕ್ರಿಯೆಗಳು ಪೂರ್ಣಗೊಳ್ಳದೆ ಇರುವ ಕಾರಣದಿಂದ ರಾಜ್ಯ ಚುನಾವಣಾ ಆಯೋಗವು ಚುನಾವಣಾ ದಿನಾಂಕ ಘೋಷಿಸಲು ಸಾಧ್ಯವಾಗಿಲ್ಲ. ಪರಿಣಾಮವಾಗಿ, ನಗರ ಆಡಳಿತವನ್ನು ಚುನಾಯಿತ ಪ್ರತಿನಿಧಿಗಳ ಬದಲಾಗಿ ಆಡಳಿತಾಧಿಕಾರಿಗಳು ಹಾಗೂ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಈ ಸ್ಥಿತಿಗೆ ಸಂಬಂಧಿಸಿದಂತೆ ನ್ಯಾಯಾಂಗವೂ ಮಧ್ಯಪ್ರವೇಶ ಮಾಡಿದ್ದು, ಸುಪ್ರೀಂಕೋರ್ಟ್ ಬೆಂಗಳೂರು ನಗರ ಪಾಲಿಕೆ ಚುನಾವಣೆಗಳನ್ನು ನಿಗದಿತ ಕಾಲಮಿತಿಯೊಳಗೆ ನಡೆಸಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ನ್ಯಾಯಾಲಯದ ನಿರ್ದೇಶನದಂತೆ, ವಾರ್ಡ್ ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡ ನಂತರ, ಚುನಾವಣೆಗಳನ್ನು ೨೦೨೬ರ ಮಧ್ಯಭಾಗದೊಳಗೆ ನಡೆಸುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಚುನಾವಣೆ ನಡೆಯದೇ ಇದ್ದರಿಂದ ಕೊರತೆಯಿಂದಾಗಿ ಸಾಮಾನ್ಯ ನಾಗರಿಕರಿಗೆ ಹಲವು ಸಮಸ್ಯೆಗಳು ಎದುರಾಗಿವೆ. ರಸ್ತೆ, ಕುಡಿಯುವ ನೀರು, ಕಸ ವಿಲೇವಾರಿ, ಚರಂಡಿ ವ್ಯವಸ್ಥೆ ಮೊದಲಾದ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳ ಬಳಿ ನೇರವಾಗಿ ಪ್ರಶ್ನಿಸುವ ಅವಕಾಶ ಇಲ್ಲದಿರುವುದು ಜನರಲ್ಲಿ ಅಸಮಾಧಾನ ಉಂಟುಮಾಡಿದೆ. “ಜನರಿಗಾಗಿ ಜನರಿಂದ ನಡೆಯಬೇಕಾದ ಆಡಳಿತ ಇಂದು ಕಚೇರಿಗಳಲ್ಲೇ ಅಧಿಕಾರಿಗಳ ಮತ್ತು ರಾಜ್ಯಮಟ್ಟದ ಶಾಸನ ಸಭೆಗೆ ಕೊಂಡೊಯ್ಯಲು ಸೀಮಿತವಾಗಿದೆ” ಎಂಬ ಅಭಿಪ್ರಾಯ ನಗರವಾಸಿಗಳಲ್ಲಿ ವ್ಯಾಪಕವಾದ ಅನಿಸಿಕೆ ಮೂಡಿದೆ.
ರಾಜಕೀಯ ಪಕ್ಷಗಳು ಈಗಾಗಲೇ ಮುಂದಿನ ಬಿಬಿಎಂಪಿ ಅಥವಾ ಜಿಬಿಎ ಚುನಾವಣೆಗೆ ಸಜ್ಜಾಗುತ್ತಿದ್ದು, ನಗರ ಅಭಿವೃದ್ಧಿ, ಪಾರದರ್ಶಕ ಆಡಳಿತ, ಹಣಕಾಸು ಶಿಸ್ತು ಪ್ರಮುಖ ಅಜೆಂಡಾಗಳಾಗಿವೆ. ಆದರೆ, ಚುನಾವಣೆ ಯಾವಾಗ ನಡೆಯಲಿದೆ ಎಂಬ ಸ್ಪಷ್ಟತೆ ಇಲ್ಲದಿರುವುದು ರಾಜಕೀಯ ತಂತ್ರಗಾರಿಕೆಗೆ ಗೊಂದಲ ಉಂಟಾಗಿತ್ತು. ಒಟ್ಟಾರೆ, ಬಿಬಿಎಂಪಿ ಚುನಾವಣೆಗಳ ಪ್ರಸ್ತುತ ಸ್ಥಿತಿ ಬೆಂಗಳೂರು ನಗರದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಹತ್ವದ ಪರೀಕ್ಷೆಯಾಗಿದೆ. ರಚನಾತ್ಮಕ ಬದಲಾವಣೆಗಳು ಪೂರ್ಣಗೊಂಡು, ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಶೀಘ್ರ ಆರಂಭವಾದರೆ ಮಾತ್ರ ನಗರ ಆಡಳಿತಕ್ಕೆ ಹೊಸ ಚೈತನ್ಯ ಬರಲಿದೆ. ಜನತೆಯ ನಿರೀಕ್ಷೆಯೂ ಇದೇ—ಚುನಾವಣೆ, ಉತ್ತರದಾಯಕ ಆಡಳಿತ ಮತ್ತು ಸುಧಾರಿತ ಬೆಂಗಳೂರು.
ಬಿಬಿಎಂಪಿ ಚುನಾವಣೆ ನಡೆಸಲು ವಿಳಂಬ ಮಾಡುತ್ತಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಮತ್ತು ಡಿಸೆಂಬರ್ 4, 2020ರಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ತನ್ನ ಆದೇಶದಲ್ಲಿ ಮತದಾರರ ಪಟ್ಟಿ ಪ್ರಕಟವಾದ ಆರು ವಾರಗಳಲೊಗೆ ಚುನಾವಣೆ ನಡೆಸುವಂತೆ ನಿರ್ದೇಶಿಸಿತ್ತು. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿ, ೫ ಪ್ರತ್ಯೇಕ ಪಾಲಿಕೆಗಳಾಗಿ ವಿಂಗಡಣೆಯಾಗಿರುವುದರಿಂದ ಹೊಸ ಸ್ವರೂಪದಲ್ಲಿ ಚುನಾವಣೆ ನಡೆಸಬೇಕಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (CGI) ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಕಾಲ್ಯ ಬಾಗ್ನಿ ಅವರಿದ್ದ ದ್ವಿಸದಸ್ಯ ಪೀಠವು ಸೋಮವಾರ ಈ ಮಹತ್ವದ ತೀರ್ಪು ನೀಡಿದೆ. ಇದರೊಂದಿಗೆ ಕಳೆದ ಐದಾರು ವರ್ಷಗಳಿಂದ ವಿವಿಧ ಕಾರಣಗಳಿಗೆ ಮುಂದೂಡಲ್ಪಡುತ್ತಲೇ ಬಂದಿದ್ದ ಬೆಂಗಳೂರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪಷ್ಟ ಕಾಲಮಿತಿ ದೊರೆತಂತಾಗಿದೆ. ಫೆಬ್ರವರಿ 20ರೊಳಗೆ ವಾರ್ಡ್ ಮೀಸಲಾತಿ ಪ್ರಕಟಿಸಲು ಮತ್ತು ಎಸ್ಎಸ್ಎಲ್ಸಿ ಪರೀಕ್ಷೆ ಬಳಿಕವಷ್ಟೇ ಚುನಾವಣೆ ನಡೆಯುವ ಸಾಧ್ಯತೆಯನ್ನು ಸೃಷ್ಟಿಪಡಿಸಿದ ನ್ಯಾಯಾಲಯವು
ನೂತನವಾಗಿ ರಚನೆಯಾಗಿರುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ (GBA) ವ್ಯಾಪ್ತಿಗೆ ಬರುವ ಐದು ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಯೆಯನ್ನು 2026ರ ಜೂನ್ ೩೦ರೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಫ್ಟಿ ಮತ್ತು ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, “ವಾರ್ಡ್ಗಳ ಮೀಸಲಾತಿ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ,” ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ಪೀಠವು, ಬರುವ ಫೆಬ್ರವರಿ 20, 2026ರೊಳಗೆ ಅಂತಿಮ ವಾರ್ಡ್ವಾರು ಮೀಸಲಾತಿ ಪಟ್ಟಿಯನ್ನು ಅಧಿಕೃತವಾಗಿ ಗೆಜೆಟ್ನಲ್ಲಿ ಪ್ರಕಟಿಸಬೇಕೆಂದು ಸರ್ಕಾರಕ್ಕೆ ತಾಕೀತು ಮಾಡಿದ್ದು ಬೋರ್ಡ್ ಪರೀಕ್ಷೆಗಳು ಮುಗಿದ ತಕ್ಷಣವೇ ಚುನಾವಣೆ ನಡೆಸುವಂತೆ ಸೂಚಿಸಿತು. “ಯಾವುದೇ ಸಂದರ್ಭದಲ್ಲೂ ೨೦೨೬ರ ಜೂನ್ ೩೦ರ ಒಳಗೆ ಚುನಾವಣಾ ಪ್ರಕ್ರಿಯೆ ಮುಗಿದಿರಬೇಕು,” ಎಂದು ಪೀಠವು ಸ್ಪಷ್ಟವಾಗಿ ಆದೇಶಿಸಿದ್ದು ಈ ಪ್ರಕ್ರಿಯೆ ನಡೆದು ಸರಾಗವಾಗಿ ಎಲ್ಲಾ ಅಡೆತಡೆಗಳನ್ನು ಮೀರಿ ಬೆಂಗಳೂರಿನ ಆಡಳಿತ ಪಾಲಿಕೆಯ ಚುನಾವಣೆಗಳು ನಡೆದು ಮೇಯರ್ ಮತ್ತು ಪಾಲಿಕೆ ಸದಸ್ಯರ ಆಡಳಿತ ಜನರ ಕುಂದು ಕೊರತೆಗಳ ಪರಿಹಾರ ಆಗುವುದೇ ಎಂದು ಕಾದು ನೋಡಬೇಕಿದೆ.
