ಭಾರತದ 77ನೇ ಗಣರಾಜ್ಯೋತ್ಸವವನ್ನು ದೇಶದಾದ್ಯಂತ ಭಾನುವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ರಾಷ್ಟ್ರಪತಿ ಅವರು ನವದೆಹಲಿಯ ಕರ್ತವ್ಯ ಪಥದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಪರೇಡ್ಗೆ ವಂದನೆ ಸಲ್ಲಿಸಿದರು.
ತ್ರಿಸೈನ್ಯದ ಶಕ್ತಿ, ಶಿಸ್ತು ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಭವ್ಯ ಪಥಸಂಚಲನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೋಗಳು ಭಾರತದ ಸಾಂಸ್ಕೃತಿಕ ವೈವಿಧ್ಯತೆ, ಅಭಿವೃದ್ಧಿ ಸಾಧನೆಗಳು ಮತ್ತು ಸಂವಿಧಾನದ ಮೌಲ್ಯಗಳನ್ನು ಚಿತ್ರಿಸಿವೆ.
ಈ ಸಂದರ್ಭದಲ್ಲಿ ರಾಷ್ಟ್ರಪತಿ ದೇಶದ ಜನತೆಗೆ ಶುಭಾಶಯ ಕೋರಿದರು. ಪ್ರಧಾನಮಂತ್ರಿ ಹಾಗೂ ಗಣ್ಯರು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನಮನ ಸಲ್ಲಿಸಿದರು. ರಾಜ್ಯ ರಾಜಧಾನಿಗಳು, ಜಿಲ್ಲಾ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಗಣರಾಜ್ಯೋತ್ಸವವು ಸಂವಿಧಾನದ ಶಕ್ತಿ, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ರಾಷ್ಟ್ರೀಯ ಏಕತೆಯನ್ನು ಸ್ಮರಿಸುವ ದಿನವಾಗಿ ಮತ್ತೆ ಪ್ರೇರಣೆಯಾಯಿತು. 77ನೇ ಗಣರಾಜ್ಯೋತ್ಸವದ ಪೂರ್ವದಿನ ಕೇಂದ್ರ ಸರ್ಕಾರವು 2026ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆಯೊಂದಿಗೆ ಒಟ್ಟು 131 ಗಣ್ಯರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು ಪ್ರದಾನಿಸಲು ನಿರ್ಧರಿಸಲಾಗಿದೆ. ದೇಶದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿ ಅಶೋಕ ಚಕ್ರ ಈ ಬಾರಿ ಭಾರತೀಯ ವಾಯುಪಡೆಯ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಸಿಗಲಿದೆ. ಗಣರಾಜ್ಯೋತ್ಸವ ಮುನ್ನ ದಿನ ಕೇಂದ್ರ ಸರ್ಕಾರ ಪ್ರಶಸ್ತಿಯನ್ನು ಪ್ರಕಟಿಸಿಸಿ ಗೌರವಿಸಿದೆ.
ಈ ಪೈಕಿ 5 ಪದ್ಮ ವಿಭೂಷಣ, 13 ಪದ್ಮ ಭೂಷಣ, 113 ಪದ್ಮ ಶ್ರೀ ಪ್ರಶಸ್ತಿಗಳು ಸೇರಿವೆ. ಕಲೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಸೇವೆ, ಸಾರ್ವಜನಿಕ ವ್ಯವಹಾರ, ವ್ಯಾಪಾರ–ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ ಗಣ್ಯರಿಗೆ ಈ ಗೌರವ ಲಭಿಸಿದೆ. ಈ ಬಾರಿ 19 ಮಹಿಳೆಯರು ಹಾಗೂ 16 ಮರಣೋತ್ತರ ಪ್ರಶಸ್ತಿಗಳು ಪಟ್ಟಿಯಲ್ಲಿ ಸ್ಥಾನ ಪಡೆದಿದೆ. 2026 ರ ಪದ್ಮ ಪ್ರಶಸ್ತಿಗಳ ಗೌರವ ಪಟ್ಟಿಯಲ್ಲಿ ಹೆಸರಿಸಲಾದ ಒಂಬತ್ತು ಮಾಜಿ ಮತ್ತು ಹಾಲಿ ಕ್ರೀಡಾಪಟುಗಳಲ್ಲಿ ರೋಹಿತ್ ಶರ್ಮಾ ಮತ್ತು ಹರ್ಮನ್ಪ್ರೀತ್ ಕೌರ್ಸೇ ರಿದ್ದಾರೆ.ಟೆನಿಸ್ ದಂತಕಥೆ ವಿಜಯ್ ಅಮೃತರಾಜ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗುತ್ತಿದ್ದು, ಭಾರತೀಯ ಮಹಿಳಾ ಹಾಕಿ ಗೋಲ್ಕೀಪರ್ ಸವಿತಾ ಪುನಿಯಾ, ಬಲದೇವ್ ಸಿಂಗ್, ಭಗವಾನ್ದಾಸ್ ರಾಯ್ಕ್ವಾರ್, ಕೆ ಪಜನಿವೆಲ್ ಮತ್ತು ಪ್ರವೀಣ್ ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಾರ್ಜಿಯಾದ ಕುಸ್ತಿ ತರಬೇತುದಾರ ವ್ಲಾಡಿಮಿರ್ ಮೆಶಿರಿಶ್ವಿಲಿ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.
