ಭಾರತದ ಜನಜೀವನದಲ್ಲಿ ಸಂಕ್ರಾಂತಿ ಎಂದರೆ ಕೇವಲ ಹಬ್ಬವಲ್ಲ, ಅದು ಪ್ರಕೃತಿಯೊಂದಿಗೆ ಮಾನವನ ನಂಟನ್ನು ಮರುಸ್ಮರಿಸುವ ಮಹತ್ವದ ಸಂಭ್ರಮ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ದಿನ, ಉತ್ತರಾಯಣದ ಆರಂಭವಾಗಿ ಕೃಷಿಕ ಸಮಾಜಕ್ಕೆ ಹೊಸ ನಿರೀಕ್ಷೆಗಳ ಸಂಕೇತವಾಗುತ್ತದೆ. ಚಳಿ ನಿಧಾನವಾಗಿ ಹಿಮ್ಮೆಟ್ಟುವಾಗ, ಹೊಲಗಳಲ್ಲಿ ಬೆಳೆದ ಬೆಳೆಗಳು ಮನೆಮನೆಯ ಸಂತಸವನ್ನು ಹೆಚ್ಚಿಸುತ್ತವೆ.
ಗ್ರಾಮೀಣ ಪ್ರದೇಶಗಳಲ್ಲಿ ಸಂಕ್ರಾಂತಿ ಕೃಷಿಕರ ಹಬ್ಬವಾಗಿಯೇ ಗುರುತಿಸಿಕೊಂಡಿದೆ. ಹೊಸ ಅಕ್ಕಿ, ಜೋಳ, ಕಬ್ಬು, ಶೇಂಗಾ ಮುಂತಾದ ಬೆಳೆಗಳನ್ನು ದೇವರಿಗೆ ಅರ್ಪಿಸಿ ಕೃತಜ್ಞತೆ ಸಲ್ಲಿಸುವ ಪರಂಪರೆ ಇನ್ನೂ ಜೀವಂತವಾಗಿದೆ. ಜಾನುವಾರುಗಳಿಗೆ ವಿಶೇಷ ಪೂಜೆ ಸಲ್ಲಿಸುವ ‘ಕಿಚ್ಚು ಹಬ್ಬ’, ‘ಕಾಣಿಕೆ ಹಬ್ಬ’ಗಳು ರೈತರ ಬದುಕಿನ ಭಾಗವಾಗಿವೆ.
ನಗರಗಳಲ್ಲಿಯೂ ಸಂಕ್ರಾಂತಿಯ ಸಂಭ್ರಮ ಕಡಿಮೆಯಿಲ್ಲ. ಅಪಾರ್ಟ್ಮೆಂಟ್ಗಳಲ್ಲಿ ಸಾಮೂಹಿಕ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕೈಟ್ ಫೆಸ್ಟಿವಲ್ಗಳು ಹಬ್ಬಕ್ಕೆ ಹೊಸ ರೂಪ ನೀಡಿವೆ. ಪರಂಪರೆಯೊಂದಿಗೆ ಆಧುನಿಕತೆಯ ಸಂಗಮವಾಗಿ ಸಂಕ್ರಾಂತಿ ಇಂದು ಎಲ್ಲ ವರ್ಗಗಳ ಹಬ್ಬವಾಗಿದೆ. ಸಾಮಾಜಿಕವಾಗಿ ಸಂಕ್ರಾಂತಿ ಜನರನ್ನು ಒಟ್ಟುಗೂಡಿಸುವ ಹಬ್ಬ. ಬಂಧು-ಮಿತ್ರರ ಭೇಟಿ, ಹಿರಿಯರಿಗೆ ಗೌರವ, ಮಕ್ಕಳಲ್ಲಿ ಹಬ್ಬದ ಉಲ್ಲಾಸ—ಇವೆಲ್ಲವೂ ಸಮಾಜದ ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ. ಹಳೆಯದನ್ನು ಹಿಂದಿಟ್ಟು, ಹೊಸದನ್ನು ಸ್ವಾಗತಿಸುವ ಮನೋಭಾವವೇ ಸಂಕ್ರಾಂತಿಯ ಮೂಲತತ್ವ.
ಪ್ರಕೃತಿಯ ಲಯಕ್ಕೆ ಹೊಂದಿಕೊಂಡು ಬದುಕುವ ಸಂದೇಶವನ್ನು ಸಾರುವ ಸಂಕ್ರಾಂತಿ, ಹೊಸ ವರ್ಷದ ಪಯಣಕ್ಕೆ ಶಾಂತಿ, ಸಮೃದ್ಧಿ ಮತ್ತು ಸೌಹಾರ್ದತೆಯ ಆಶಯಗಳನ್ನು ಹೊತ್ತು ತರುತ್ತದೆ. ಸಂಭ್ರಮದ ಈ ಹಬ್ಬ ಎಲ್ಲರ ಬದುಕಿಗೂ ಬೆಳಕು ಚೆಲ್ಲಲಿ ಎಂಬುದೇ ಸಂಕ್ರಾಂತಿಯ ಸಾರ.
ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಬುಧವಾರ ಅವಾರ ಸಂಖ್ಯೆಯ ಭಕ್ತರು ಪುಣ್ಯಸ್ನಾನ ಮಾಡಿದರು. ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ (ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿ ಸೇರುವ ಸ್ಥಳ) ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಅಂದಾಜು ೮೦ ಲಕ್ಷ ಭಕ್ತರು ಬುಧವಾರ ಪುಣ್ಯಸ್ನಾನ ಮಾಡಿದರು. ಮಕರ ಸಂಕ್ರಮಣದ ಪುಣ್ಯಸ್ನಾನಕ್ಕಾಗಿ ಮಂಗಳವಾರ ಮಧ್ಯರಾತ್ರಿಯಿಂದಲೇ ಸ್ನಾನಘಟ್ಟಗಳಲ್ಲಿ ಭಕ್ತಸಮೂಹವು ಜಮಾಯಿಸಿತ್ತು. ತಡರಾತ್ರಿ ೧೨ ಗಂಟೆ ವೇಳೆಯಲ್ಲೇ ಸುಮಾರು ೫೦ ಲಕ್ಷ ಭಕ್ತರು ಸಂಗಮದಲ್ಲಿ ಮಿಂದೆದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘ಮಾಘ ಮೇಳ’ದ ಧಾರ್ಮಿಕ ಕಾರ್ಯಕ್ರಮಕ್ಕಾಗಿಯೇ ಸ್ಥಳೀಯ ಆಡಳಿತವು ಸಕಲ ಸಿದ್ಧತೆ ಮಾಡಿಕೊಂಡಿತ್ತು. ಮೇಳದ ಆವರಣ ಹಾಗೂ ಸ್ನಾನ ಘಟ್ಟಗಳ ಬಳಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು.
ಸೂರ್ಯನು ಜನವರಿ ೧೪, ೨೦೨೬ ರಂದು ಮಧ್ಯಾಹ್ನ ೩:೧೩ಕ್ಕೆ ಮಕರ ರಾಶಿಗೆ ಸಾಗುತ್ತಾನೆ. ಈ ಕಾರಣದಿಂದಾಗಿ, ಮಕರ ಸಂಕ್ರಾಂತಿಯ ಶುಭ ಸಮಯ ಜನವರಿ ೧೫ ರಂದು ಸೂರ್ಯೋದಯದ ನಂತರ ಇರುತ್ತದೆ. ನಿರ್ಣಯ ಸಿಂಧು ಪ್ರಕಾರ, ಈ ಬಾರಿ ಮಕರ ಸಂಕ್ರಾಂತಿಯ ಶುಭ ಸಮಯ ಜನವರಿ ೧೫ ರಂದು ಏಕೆಂದರೆ ಸೂರ್ಯ ಮಧ್ಯಾಹ್ನ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಆದ್ದರಿಂದ, ಜನವರಿ ೧೫ ರ ಗುರುವಾರದಂದು ಮಕರ ಸಂಕ್ರಾಂತಿಯನ್ನು ಆಚರಿಸುವುದು ಶಾಸ್ತ್ರಗಳ ಪ್ರಕಾರ ಎಲ್ಲರ ಮನೆಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
