27-09-2026 ಭಾನುವಾರದಿಂದ 10-10-2026 ಶನಿವಾರ ತನಕ ಪಿತೃಪಕ್ಷ ಹದಿನೈದು ದಿನಗಳು ಭಾದ್ರಪದ ಮಾಸದ ಕೃಷ್ಣಪಕ್ಷಕ್ಕೆ ಪಿತೃಪಕ್ಷ ಎನ್ನುತ್ತಾರೆ.
ಈ ಪಕ್ಷಕ್ಕೆ ಮಹಾಲಯ ಪಕ್ಷ, ಅಪರ ಪಕ್ಷವೆಂದು ಕರೆಯುತ್ತಾರೆ. ಪಿತೃಪಕ್ಷವು ಹಿಂದೂ ಚಾಂದ್ರಮಾನ ತಿಂಗಳಾದ ಭಾದ್ರಪದ ಕೃಷ್ಣ ಪಕ್ಷದ ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುತ್ತದೆ.
(ಪಿತೃಪಕ್ಷದ ಪ್ರಾರಂಭದಲ್ಲಿ ಸೂರ್ಯನು ಕನ್ಯಾರಾಶಿ ಪ್ರವೇಶಿಸುವಲ್ಲಿಂದ ನಂತರದ ರಾಶಿಗೆ ಹೋಗುವವರೆಗಿನ ಸಮಯದಲ್ಲಿ ಪಿತೃಗಳ ಆತ್ಮವು ಭೂಮಿಯಲ್ಲಿರುವ ತಮ್ಮ ವಂಶಜರ ಮನೆಗಳಿಗೆ ಬಂದು ಸಂಚರಿಸುತ್ತವೆ ಎಂಬ ನಂಬಿಕೆ) ಒಬ್ಬರ ಮೂರು ತಲೆಮಾರುವರೆಗಿನ ಹಿರಿಯರು/ಪೂರ್ವಜರು/ಪಿತೃಗಳ ಆತ್ಮವು (ಸ್ಥಾನ) ಪಿತೃಲೋಕದಲ್ಲಿ ಅಂದರೆ ಭೂಮಿ ಮತ್ತು ಸ್ವರ್ಗದ ನಡುವಿನ ಪ್ರದೇಶದಲ್ಲಿ ವಾಸ ಮಾಡಿಕೊಂಡಿರುತ್ತಾರೆ.
ಆಂದರೆ ಈ ಪಿತೃಲೋಕದಲ್ಲಿ ಮೂರು ತಲೆಮಾರಿನ ಆತ್ಮಗಳು ಇರುತ್ತವೆ. ಶ್ರಾದ್ಧ ಮಾಡುವಾಗ ಈ ಲೋಕದಲ್ಲಿರುವ ಮೂರು ತಲೆಮಾರಿನ ಪೂರ್ವಜರಿಗೆ ಅನ್ನ, ಪಿಂಡ ಪ್ರದಾನ ಮತ್ತು ತರ್ಪಣ ಕೊಡುವ ಸಂಪ್ರದಾಯ.
ಪಿತೃಪಕ್ಷದ ಮಹತ್ವವೇನು. ಪ್ರತಿ ವೈದಿಕ ಕ್ರಿಯೆಯಲ್ಲೂ ಗತಿಸಿದ ಪಿತೃಗಳನ್ನು ಸ್ಮರಿಸಿ “ಪಿತೃದೇವತಾಂ ನಮಸ್ಕೃತ್ಯ” ಎಂದು ಅನುಗ್ರಹ ಪಡೆದು ವೈದಿಕಕ್ರಿಯೆ ಮುಂದುವರಿಸುವುದು ಸಂಪ್ರದಾಯ. ಪಿತೃದೇವತೆಗಳ ಅನುಕೂಲಕ್ಕಾಗಿ ಋಣಸಂದಾಯ ಮೂಲಕ ಕರ್ತವ್ಯ ಪಾಲನೆಗೆ ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮಹಾಲಯ — ಈ 15 ದಿನಗಳು ಪಿತೃಪಕ್ಷವೆನಿಸಿ, ಶ್ರಾದ್ಧಾವಿಧಿಗಳಿಗೆ ಪ್ರಾಶಸ್ತ್ಯ ಎಂದು ಹೇಳಿದೆ. ಯಾರು ಮಾತಾ-ಪಿತೃರ ಶ್ರಾದ್ಧವನ್ನು ಮಾಡುವುದಿಲ್ಲವೋ ಅವನು ಮಾಡುವ ದೇವತಾಕಾರ್ಯಗಳು, ಪೂಜೆ-ಪುನಸ್ಕಾರಗಳನ್ನು ದೇವತೆಗಳು ಸ್ವೀಕರಿಸುವುದಿಲ್ಲವೆಂದು ಶ್ರಾದ್ಧ ನಿಯಮದಲ್ಲಿ ಹೇಳಿದೆ.
ಪಿತೃಪಕ್ಷ ಅಶುಭವಲ್ಲ, ಪಿತೃಪಕ್ಷದಲ್ಲಿ ಯಾವುದೇ ದೇವತಾ ಕಾರ್ಯಗಳನ್ನಾಗಲಿ, ಮಂಗಳ ಕಾರ್ಯಗಳನ್ನಾಗಲಿ ಮಾಡುವುದು ಶ್ರೇಯಸ್ಕರ ಅಲ್ಲವೆಂಬ ಅಭಿಪ್ರಾಯವಿದೆ. ಗತಿಸಿದ ಕುಟುಂಬದ ಹಿರಿಯರು, ಮಾತಾ-ಪಿತೃರಿಗೆ ಶ್ರಾದ್ಧ ಪಿಂಡ ತರ್ಪಣ ನೀಡಿ, ದಿವ್ಯಾತ್ಮಗಳನ್ನು ತೃಪ್ತಿಪಡಿಸಿ, ಅಗಲಿದ ಚೈತನ್ಯಗಳಿಂದ ಅನುಗ್ರಹ ಪಡೆಯುವ ಪ್ರಶಸ್ತ ಕಾಲವೇ ಪಿತೃಪಕ್ಷ. ಹಾಗೆಂದೇ ಶ್ರಾದ್ಧ ಕ್ರಿಯೆಗೆ ಪ್ರಾಧಾನ್ಯ ನೀಡಲಾಗಿದೆ.
ಶ್ರಾದ್ಧ ಎಂದರೇನು? ನಮ್ಮ ಜನ್ಮಕ್ಕೆ ಕಾರಣರಾಗಿ, ನಮ್ಮನ್ನು ಹೆತ್ತು ಹೊತ್ತು ಸಾಕಿ, ಸಲಹಿ ನಮ್ಮ ಉದ್ದಾರಕ್ಕೆ ಶ್ರಮಿಸಿ, ನಮ್ಮನ್ನಗಲಿ ಹೋದ ತಂದೆ-ತಾಯಿ ಹಿರಿಯರು ಮುಂತಾದವರನ್ನು ಸ್ಮರಿಸಿ, ಅವರನ್ನು ಕುರಿತು ಶ್ರದ್ಧೆಯಿಂದ ಅನ್ನಜಲಾದಿಗಳನ್ನು ಕೊಡುವ ಪಿತೃಕಾರ್ಯಕ್ಕೆ “ಶ್ರಾದ್ಧ”ವೆಂದು ಹೆಸರು.
ಪಿತೃಗಳನ್ನುದ್ದೇಶಿಸಿ ಶ್ರದ್ಧೆಯಿಂದ ಕೊಡಲ್ಪಟ್ಟ ದ್ರವ್ಯವನ್ನು ಮಾನಸಿಕವಾಗಿ ಭಾವನೆಯಿಂದ ಮಾಡುವ ಆಚರಣೆ ಶ್ರಾದ್ಧವೆಂದು ಹೆಸರು. ಒಟ್ಟಿನಲ್ಲಿ ಶ್ರದ್ಧೆಯಿಂದ ತನಗೆ ಪ್ರಿಯವಾದ ಭೋಜ್ಯಗಳನ್ನು ತನ್ನ ಪಿತೃಗಳನ್ನುದ್ದೇಶಿಸಿ ಕೊಡುವ “ಪಿಂಡಪ್ರದಾನ” ಕ್ರಿಯೆಗೆ ಶ್ರಾದ್ಧವೆಂದು ಹೇಳುತ್ತಾರೆ.
ಪಿತೃಶ್ರಾದ್ಧದ ಮುಖ್ಯ ಉದ್ದೇಶವೇನು?
ಇಲ್ಲಿ ಪಿತೃವೆಂದರೆ ಯಾರು? ಯಾವುದು? ಅದೇಕೆ ಗೌರವಾನ್ವಿತ ಹಾಗೂ ಪೂಜನೀಯವಾಯ್ತು? ಅದು ವ್ಯಕ್ತಿಯೇ? ದೇಹವೇ? ಶಕ್ತಿಯೇ? ತತ್ವವೇ? ಚಿಂತಿಸೋಣ. ಸಾಮಾನ್ಯವಾಗಿ ಸೂತ್ರಕಾರರ ಅಭಿಮತದಂತೆ ಪಿತೃ ಎಂಬುದು ಒಂದು ಸ್ಥಾನ, ಹುದ್ದೆ. ಅದಕ್ಕೆ ಅದರದ್ದೇ ಆದ ಜವಾಬ್ದಾರಿ, ಬದ್ಧತೆ ಇರುತ್ತದೆ. ಅದನ್ನು ಹುಟ್ಟಿದ ಪ್ರತಿಯೊಂದು ಜೀವಿಯೂ ಹೊಂದಲೇ ಬೇಕಾದ ಹುದ್ದೆ. ಅದನ್ನು ಪಡೆಯಲು, ಜವಾಬ್ದಾರಿಯುತವಾಗಿ ನಿರ್ವಹಿಸಲು ಅಸಮಾನ್ಯ ಜ್ಞಾನವು ಬೇಕು. ಆ ಜ್ಞಾನವು ಅನುಭವದಿಂದ ಮಾತ್ರ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಕಲೆಗಳಿಂದ ಬಲವರ್ಧಿಸಲ್ಪಟ್ಟು, ಅಲಂಕಾರ ಹೊಂದಿರುವುದನ್ನು ಅಲಂಕರಿಸಿದರೆ ನಮ್ಮ ಭೌತಿಕ ವ್ಯವಹಾರಿಕ ಪ್ರಪಂಚವು ಪಿತೃಗಳಿಂದ ಪೋಷಿತವಾಗುತ್ತದೆ. ಅಂತಹ ಕಾರ್ಯಗಳನ್ನು ನಿರ್ವಹಿಸುವ ಅರ್ಹತೆ ಪತ್ರವನ್ನು ನಾವು ಹೊಂದಿದ್ದೇವೆ. ಸಮರ್ಥವಾಗಿ ಅವರು ನಿರ್ವಹಿಸಿದ್ದಾರೆ ಎಂದು ಹೇಳುವ ಅರ್ಹತಾ ಪತ್ರವೇ ನಾವು. ಹಾಗಿದ್ದಾಗ ಅವರ ನಿರ್ವಹಣೆಯಲ್ಲಿ ಅನರ್ಹತೆ ಎಂದರೆ ನಾವು ಅರ್ಹರಲ್ಲ ಎಂದರ್ಥ.
ಇಲ್ಲಿಯವರೆಗೆ ಪಿತೃಸ್ಥಾನ ಮತ್ತು ಮಗನ ಕರ್ತವ್ಯ ನಿರ್ವಹಣೆ, ಪಿತೃ ಸೇವೆಯಲ್ಲಿ ಒಬ್ಬನೇ ತಲೆಮಾರಾಗಿ ಅಥವಾ ತಾಯಿಯಾಗಿ ಸಾರ್ಥಕತೆ ಕಾಣುವ ನಮ್ಮ ಅಧ್ಯಾತ್ಮ ದೈವಿಕ ನೆಲೆಗಟ್ಟಿನ ಸಮಾಜ ಜೀವನದ ಪರಮೋನ್ನತ ಪದವಿ ತಂದೆ-ತಾಯಿಯ ಈ ಪದವಿಗಾಗಿ ಪ್ರತಿಯೊಬ್ಬರೂ ಪ್ರಯತ್ನಿಸುತ್ತಾರೆ. ಅಂತಹ ಪದವಿ ಅಲಂಕರಿಸಿದರೆ ಆ ಸ್ಥಾನವನ್ನು ಶ್ರದ್ಧೆಯಿಂದ ಗೌರವಿಸಿದರೆ ನಿಸ್ಸಂತಾನವಾಗಿ ವಂಶ ಬೆಳೆಯುತ್ತದೆ. ಇಲ್ಲವಾದರೆ ಮುಂದಿನ ಸಂತಾನ ಲಭ್ಯವಿಲ್ಲದಿದ್ದರೆ ವಂಶ ನಿಂತು ಹೋಗಬಹುದು. ಆದ್ದರಿಂದ ಶ್ರಾದ್ಧ, ತರ್ಪಣ ಪಿತೃಗಳ ಆತ್ಮ ಮತ್ತು ಕರ್ತವ್ಯವನ್ನು ಗೌರವಿಸಿದಂತೆ.
ಶ್ರಾದ್ಧ ಕ್ರಿಯೆಯ ವೈಶಿಷ್ಟ್ಯತೆ. ಶ್ರಾದ್ಧ ಕ್ರಿಯೆಯು ವೈದಿಕಾಚಾರಗಳ ವೈಶಿಷ್ಟ್ಯಕ್ಕೆ ಮೀಸಲಾದ ವಿಷಯವಲ್ಲ. ಪಂಚಭೂತಗಳಿಂದ ಭೌತಿಕ ಶರೀರ ಉಂಟಾಗಿದೆ. ಮರಣಾನಂತರ ಇದು ನಾಶವಾದರೂ ತೇಜಸ್ಸು, ಪಂಚವಾಯು ಮತ್ತು ಆಕಾಶ ತತ್ವಗಳು ಮನೋಮಯ ಕೋಶದ ಮೂಲಕ ಸೂಕ್ಷ್ಮ ಶರೀರಕ್ಕೆ ಸೇರುತ್ತವೆ. ತಂದೆಯ ಸೂಕ್ಷ್ಮ ಶರೀರಕ್ಕೂ ಪುತ್ರನ ಸೂಕ್ಷ್ಮ ಶರೀರಕ್ಕೂ ಪರಸ್ಪರ ಸಂಬಂಧವಿದೆ.
ಯೇ ಚ ಮದ್ಭಕ್ತಿಪ್ರಯತ್ನೈಃ ಮಾನವಾಃ ಕೃತ್ಯಾರ್ಥಿತಾಃ।
ತೇಭ್ಯೋ ಭಕ್ತೇ ಸುತೃಪ್ತಾಃ ಭವಿಷ್ಯಂತಿ ಸಭಾಂದವಾಃ॥
ಯಮಧರ್ಮನು ಕಾಗೆಗಳಿಗೆ ವರವನ್ನು ಕೊಟ್ಟು, “ನನ್ನ ಲೋಕದಲ್ಲಿ ಇರುವ ಪಿತೃಗಳು ನಿನ್ನ ಮೂಲಕ ಉಂಡು ತೃಪ್ತರಾಗಲಿ” ಎಂದು ಯಮದೇವರು ಕಾಗೆಗಳಿಗೆ ನೀಡಿದ ವರ. ಅದಕ್ಕಾಗಿ ವಾಯಸ ಬಲಿ ರೂಢಿಯಲ್ಲಿದೆ.
ಈ ವಿಷಯ ರಾಮಾಯಣದಲ್ಲಿ ಬರುತ್ತದೆ. ಅದು ರಾವಣನ ಕಾಲ. ಅವನಿಗೆ ಹೆದರಿ ಎಲ್ಲಾ ದೇವತೆಗಳು ಯಜ್ಞಕ್ಕೆ ಪಕ್ಷಿಗಳ ರೂಪದಿಂದ ಬಂದರು. ಆ ಯಜ್ಞದಲ್ಲಿ ದೇವೇಂದ್ರನು ನವಿಲಾದರೆ, ಬ್ರಹ್ಮದೇವರು ಹಂಸವಾದರು. ಯಮನು ಕಾಗೆಯಾದನು. ಕೊನೆಯಲ್ಲಿ ತನ್ನ ಯಜ್ಞವನ್ನು ಕಾಪಾಡಿದ ಆ ಪಕ್ಷಿಗಳಿಗೆ ವರವನ್ನು ಕೊಟ್ಟರು.
ಕಾಗೆ ನಮಗೆ ಒಂದು ಸಂದೇಶ ನೀಡುತ್ತದೆ. ಕಾಗೆ ಕಾ-ಕ ಎಂದು ಕೂಗುತ್ತದೆ. ಸಂಸ್ಕೃತದಲ್ಲಿ ಕಾ ಎಂದರೆ ಯಾರು? ನೀನು ಯಾರು? ದೇವರು ಯಾರು? ನಿನ್ನ ಹಿಂದೆ ಬರುವವರು ಯಾರು? ಇದರ ಬಗ್ಗೆ ಚಿಂತನೆ ಮಾಡು ಎಂದು ಪದೇ ಪದೇ ಹೇಳುವಂತಿದೆ.
ಕಚ್ಚಾಡುವ ಮನೆ, ಕಾಡಾಡುವ ಮಕ್ಕಳು, ಅಶಾಂತಿಯ ಗೃಹವಾಸ, ಇವೆಲ್ಲವುಗಳಿಗೆ ಕಾರಣ “ಪಿತೃಶಾಪ” ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಪಿತೃಕಾರ್ಯಗಳು ಸರಿಯಾಗಿ ನಡೆಯದಿದ್ದರೆ ಪಿತೃದೇವತೆಗಳು ಸಂತುಷ್ಟರಾಗುವುದಿಲ್ಲ. ಭಾದ್ರಪದ ಮಾಸದ ಕೃಷ್ಣಪಕ್ಷದಲ್ಲಿ ಪಿತೃಗಳನ್ನು ನೆನೆಯಬೇಕು. ಪಿತೃಪಕ್ಷದಲ್ಲಿ ಒಮ್ಮೆಯಾದರೂ ಈ ಪ್ರಾರ್ಥನೆಯನ್ನು ಮಾಡಿ ಪಿತೃಗಳನ್ನು ನೆನೆದರೆ ಅವರ ಅನುಗ್ರಹ ಖಂಡಿತ.
ಅಮೂರ್ತಾನಾಂ ಸುಮೂರ್ತಾನಾಂ ಪಿತೃಣಾಂ ದೀಪ್ತತೇಜಸಾಮ್।
ನಮಸ್ಯಾಮಿ ಸದಾ ಭಕ್ತ್ಯಾ ಧ್ಯಾಯಿನಾಂ ಯೋಗಚಕ್ಷುಷಾಮ್॥
ದೇವತಾಭ್ಯಃ ಪಿತೃಭ್ಯಶ್ಚ ಮಹಾಯೋಗಿಭ್ಯ ಏವ ಚ।
ನಮಃ ಸ್ವಾಹಾಯೈ ಸ್ವಧಾಯೈ ನಿತ್ಯಮೇವ ನಮೋ ನಮಃ॥
