ಭಾರತದ ‘ಮಾತಂಗಿ’ಯ ಸಾಹಸ. ಕೃತಕ ಬುದ್ಧಿಮತ್ತೆಯ ನೆರವಿನಿಂದ ಸ್ವಯಂಚಾಲಿತವಾಗಿ ಸಾಗುವ ಭಾರತದ ನವೋದ್ಯಮದ ಹಡಗು. ಸಮುದ್ರದಲ್ಲಿ ಹಡಗು ಸಾಗಬೇಕಾದರೆ ಕ್ಯಾಪ್ಟನ್, ನಾವಿಕರು, ತಾಂತ್ರಿಕ ಸಿಬ್ಬಂದಿ ಇರಲೇಬೇಕು ಎಂಬುದು ಇಂದಿನವರೆಗಿನ ಸಾಮಾನ್ಯ ಕಲ್ಪನೆ. ಆದರೆ ಕೃತಕ ಬುದ್ಧಿಮತ್ತೆ ಮತ್ತು ಸ್ವಾಯತ್ತ ತಂತ್ರಜ್ಞಾನ ಈ ಕಲ್ಪನೆಗೆ ಹೊಸ ರೂಪ ನೀಡುತ್ತಿದೆ. ಭಾರತದ ನವೋದ್ಯಮ ಸಂಸ್ಥೆಯೊಂದು ಅಭಿವೃದ್ಧಿಪಡಿಸಿರುವ ‘ಮಾತಂಗಿ’ ಎಂಬ ಮಾನವರಹಿತ ಸ್ವಯಂಚಾಲಿತ ಹಡಗು ಸಮುದ್ರ ತಂತ್ರಜ್ಞಾನ ಕ್ಷೇತ್ರದಲ್ಲಿ ಗಮನ ಸೆಳೆದಿದೆ.
ಮುಂಭೈನಿಂದ ಸಮುದ್ರಯಾನ ಆರಂಭಿಸಿದ ಈ ಹಡಗು ಸುಮಾರು 1,500 ಕಿಲೋಮೀಟರ್ಗಳನ್ನು ದೂರವನ್ನು ಯಾವುದೇ ಸಿಬ್ಬಂದಿಯಿಲ್ಲದೆ ಕ್ರಮಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಹಡಗಿನಲ್ಲೆಲ್ಲೂ ಕ್ಯಾಪ್ಟನ್ ಇಲ್ಲ, ನಾವಿಕರಿಲ್ಲ, ಯಾವುದೇ ಮನುಷ್ಯನೂ ಇಲ್ಲ. ಆದರೂ ಅದು ತನ್ನ ಮಾರ್ಗವನ್ನು ಅನುಸರಿಸಿ, ಸುತ್ತಮುತ್ತಲಿನ ಪರಿಸ್ಥಿತಿಯನ್ನು ಗಮನಿಸಿ, ಅಗತ್ಯವಿದ್ದಾಗ ತನ್ನ ದಿಕ್ಕನ್ನು ಬದಲಿಸಿಕೊಂಡು ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ.
ಈ ಪ್ರಯೋಗದ ಹಿಂದೆ ಪುಣೆಯ ಸಾಗರ್ ಡಿಫೆನ್ಸ್ ಎಂಜಿನಿಯರಿಂಗ್ ಎಂಬ ಭಾರತೀಯ ನವೋದ್ಯಮ ಸಂಸ್ಥೆಯ ತಂತ್ರಜ್ಞಾನವಿದೆ. ವಾಣಿಜ್ಯ ನೌಕಾಪಡೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಕ್ಯಾಪ್ಟನ್ ನಿಖುಂಜ್ ಪರಾಶರ್ ಈ ಸಂಸ್ಥೆಯ ಪ್ರಮುಖ ಮುಖಗಳಲ್ಲಿ ಒಬ್ಬರು. ಹಡಗುಗಳ ಕಾರ್ಯಾಚರಣೆಯಲ್ಲಿ ಹಲವು ವರ್ಷಗಳ ಅನುಭವ ಪಡೆದ ಅವರು, ಮಾನವ ಸಿಬ್ಬಂದಿಯ ಅವಲಂಬನೆಯನ್ನು ಕಡಿಮೆ ಮಾಡುವ ಸ್ವಾಯತ್ತ ನೌಕಾ ತಂತ್ರಜ್ಞಾನ ಅಭಿವೃದ್ಧಿಯತ್ತ ಗಮನ ಹರಿಸಿದ್ದಾರೆ.
‘ಜೆನೆಸಿಸ್’ ಎಂಬ ಕೃತಕ ಬುದ್ಧಿಮತ್ತೆ-ಮಾತಂಗಿಯ ಹೃದಯವೆಂದರೆ ಅದರ ಸ್ವಾಯತ್ತ ನಿಯಂತ್ರಣ ವ್ಯವಸ್ಥೆ. ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಜೆನೆಸಿಸ್’ ಎಂಬ ವ್ಯವಸ್ಥೆ ಹಡಗಿಗೆ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಗ್ರಹಿಸಿ ನಿರ್ಧಾರ ಕೈಗೊಳ್ಳಲು ನೆರವಾಗುತ್ತದೆ.
ಹಗಲು ಮಾತ್ರವಲ್ಲ, ರಾತ್ರಿ ವೇಳೆಯಲ್ಲಿಯೂ ಸೆನ್ಸರ್ಗಳು ಮತ್ತು ಕ್ಯಾಮೆರಾಗಳ ನೆರವಿನಿಂದ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಗಮನಿಸುವ ಸಾಮರ್ಥ್ಯ ಇದಕ್ಕಿದೆ. ಇದರ ಮೂಲಕ ಸಮುದ್ರದಲ್ಲಿ ಮಾನವ ಸಿಬ್ಬಂದಿ ನಿರಂತರವಾಗಿ ಕಾವಲು ಕಾಯಬೇಕಾದ ಅವಶ್ಯಕತೆಯನ್ನು ಕೆಲವು ಕಾರ್ಯಗಳಲ್ಲಿ ಕಡಿಮೆ ಮಾಡಬಹುದು.
ಮಾತಂಗಿಯ ವಿಶೇಷತೆ ಅದರ ಸ್ವಾಯತ್ತ ತಂತ್ರಜ್ಞಾನ ಒಂದು ನಿರ್ದಿಷ್ಟ ಹಡಗಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದರಲ್ಲಿ ಅಡಗಿದೆ. ಈಗಾಗಲೇ ಇರುವ ದೋಣಿಗಳಿಗೂ ಇಂತಹ ವ್ಯವಸ್ಥೆಯನ್ನು ಅಳವಡಿಸಿ ಅವುಗಳನ್ನು ಮಾನವರಹಿತ ಅಥವಾ ಸ್ವಾಯತ್ತ ವಾಹನಗಳಾಗಿ ಪರಿವರ್ತಿಸುವ ಸಾಧ್ಯತೆಯನ್ನು ಸಂಸ್ಥೆ ಅಭಿವೃದ್ಧಿಪಡಿಸಿದೆ.
ಇದೇ ತಂತ್ರಜ್ಞಾನವನ್ನು ನೀರೊಳಗೆ ಕಾರ್ಯನಿರ್ವಹಿಸುವ ಮಾನವರಹಿತ ವಾಹನಗಳು, ಮಾನವರಹಿತ ವೈಮಾನಿಕ ವ್ಯವಸ್ಥೆಗಳು ಮತ್ತು ಭೂಮಿಯ ಮೇಲಿನ ಸ್ವಯಂಚಾಲಿತ ವಾಹನಗಳಲ್ಲಿಯೂ ಬಳಸಬಹುದಾಗಿದೆ. ಅಪಾಯಕಾರಿ ಪ್ರದೇಶಗಳಲ್ಲಿ ಮನುಷ್ಯರನ್ನು ಕಳುಹಿಸುವ ಬದಲು ರೋಬೋಟಿಕ್ ವ್ಯವಸ್ಥೆಗಳನ್ನು ಬಳಸಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುವ ಈ ತಂತ್ರಜ್ಞಾನವು ಮುಂದಿನ ದಿನಗಳಲ್ಲಿ ನೌಕಾಪಡೆಗೆ, ಸಮುದ್ರದಡಿಯ ಪರಿಶೀಲನೆಗೆ, ವಿಪತ್ತು ನಿರ್ವಹಣೆಗೆ ಮತ್ತು ವೈಜ್ಞಾನಿಕ ಸಂಶೋಧನೆಗೆ ಉಪಯುಕ್ತವಾಗುವ ಸಾಧ್ಯತೆ ಇದೆ.
