ರಸ್ತೆ ನಿರ್ಮಾಣ ಎಂದರೆ ಡಾಂಬರು, ಜಲ್ಲಿ, ಮರಳು ಮತ್ತು ಬಿಟುಮಿನ್ ಎಂಬ ಸಾಂಪ್ರದಾಯಿಕ ಕಲ್ಪನೆ ನಮ್ಮ ಮನಸ್ಸಿಗೆ ಬರುತ್ತದೆ. ಆದರೆ ಹೆಚ್ಚುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಪರಿಹಾರ ಹುಡುಕುವ ಪ್ರಯತ್ನದಲ್ಲಿ ವಿಶ್ವದ ಹಲವು ನಗರಗಳು ತ್ಯಾಜ್ಯ ಪ್ಲಾಸ್ಟಿಕ್ ಅನ್ನು ರಸ್ತೆ ನಿರ್ಮಾಣದ ವಸ್ತುವಾಗಿ ಬಳಸುವ ಪ್ರಯೋಗ ನಡೆಸುತ್ತಿವೆ. ಚೀನಾದ ಶಾಂಘೈನಲ್ಲಿ ಹಾಲಿನ ಬಾಟಲಿಗಳಿಂದ ಹಿಡಿದು ಪುಣೆ ಮತ್ತು ಬೆಂಗಳೂರಿನ ರಸ್ತೆಗಳಲ್ಲಿ ಪ್ಲಾಸ್ಟಿಕ್ ಮಿಶ್ರಣದ ಪ್ರಯೋಗಗಳವರೆಗೆ, ಇದು ತ್ಯಾಜ್ಯ ನಿರ್ವಹಣೆ ಮತ್ತು ರಸ್ತೆ ನಿರ್ಮಾಣವನ್ನು ಒಂದೇ ವೇದಿಕೆಯಲ್ಲಿ ಜೋಡಿಸುವ ಪ್ರಯತ್ನವಾಗಿದೆ.
2021ರ ಏಪ್ರಿಲ್ 22ರಂದು ಭೂಮಿದಿನದ ಅಂಗವಾಗಿ ಚೀನಾದ ಶಾಂಘೈಯಲ್ಲಿರುವ East China University of Science and Technology ಆವರಣದಲ್ಲಿ ವಿಶೇಷ ರಸ್ತೆ ಯೋಜನೆಯನ್ನು ಪರಿಚಯಿಸಲಾಯಿತು. ಡೌ (Dow) ಮತ್ತು ಚೀನಾದ ಹಾಲಿನ ಉತ್ಪನ್ನಗಳ ಕಂಪನಿ Mengniu ಸಹಯೋಗದಲ್ಲಿ ನಡೆದ ಈ ಯೋಜನೆಯಲ್ಲಿ 6,000ಕ್ಕೂ ಹೆಚ್ಚು ಬಳಸಿದ ಪ್ಲಾಸ್ಟಿಕ್ ಹಾಲಿನ ಬಾಟಲಿಗಳು ಹಾಗೂ ಇತರ ಕಷ್ಟಪಟ್ಟು ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸಿ polymer-modified asphalt ತಂತ್ರಜ್ಞಾನದ ಮೂಲಕ ಡಾಂಬರು ಮಿಶ್ರಣದ ಭಾಗವನ್ನಾಗಿ ಮಾಡಲಾಯಿತು. ಅಂದರೆ ಇದು “ಪ್ಲಾಸ್ಟಿಕ್ನಿಂದ ಸಂಪೂರ್ಣ ರಸ್ತೆ”ಗಿಂತ ಮರುಬಳಕೆಯ ಪ್ಲಾಸ್ಟಿಕ್ ಸೇರಿಸಿದ ಡಾಂಬರು ರಸ್ತೆ ಎಂಬುದು ಹೆಚ್ಚು ಸರಿಯಾದ ವಿವರಣೆ. ಈ ಪ್ರಯೋಗದ ಉದ್ದೇಶ ಕೇವಲ ರಸ್ತೆ ಬಾಳಿಕೆ ಹೆಚ್ಚಿಸುವುದಲ್ಲ. ಸಾಮಾನ್ಯ ಮರುಬಳಕೆ ವ್ಯವಸ್ಥೆಯಲ್ಲಿ ಮೌಲ್ಯ ಕಡಿಮೆ ಇರುವ ಅಥವಾ ಸಂಸ್ಕರಿಸಲು ಕಷ್ಟವಾಗುವ ಪ್ಲಾಸ್ಟಿಕ್ಗೆ ಎರಡನೇ ಜೀವನ ನೀಡುವುದು ಇದರ ಪ್ರಮುಖ ಉದ್ದೇಶವಾಗಿತ್ತು.
ಭಾರತದಲ್ಲಿಯೂ ಪ್ಲಾಸ್ಟಿಕ್-ಡಾಂಬರು ರಸ್ತೆಗಳ ಪ್ರಯೋಗ ಹೊಸದಲ್ಲ. ಪುಣೆ ಮಹಾನಗರ ಪಾಲಿಕೆ 2016ರಲ್ಲಿ ನವಿ ಪೇಠ್ನ ಭಗವತ್ ಲೇನ್ನಲ್ಲಿ ಸುಮಾರು 150 ಮೀಟರ್ ಉದ್ದದ ಪ್ಲಾಸ್ಟಿಕ್-ಬಿಟುಮಿನ್ ರಸ್ತೆ ನಿರ್ಮಿಸಿತ್ತು ಎಂದು ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಷನ್ನ ದಾಖಲೆಗಳು ಉಲ್ಲೇಖಿಸುತ್ತವೆ. ನಂತರ ಪುಣೆಯ ವಿವಿಧ ಭಾಗಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಿಟುಮಿನ್ನೊಂದಿಗೆ ಬಳಸುವ ಪ್ರಯೋಗಗಳು ನಡೆದಿವೆ. 2025ರಲ್ಲಿಯೂ ಪುಣೆಯಲ್ಲಿ 250 ಮೀಟರ್ ಉದ್ದದ ಪ್ಲಾಸ್ಟಿಕ್ ಬಿಟುಮಿನ್ ರಸ್ತೆ ನಿರ್ಮಾಣದ ವರದಿ ಪ್ರಕಟವಾಗಿದ್ದು ಈ ತಂತ್ರಜ್ಞಾನವನ್ನು ಮತ್ತಷ್ಟು ಪರೀಕ್ಷಿಸುವ ಪ್ರಯತ್ನ ಮುಂದುವರಿದಿರುವುದನ್ನು ತೋರಿಸುತ್ತದೆ.
ಇದೇ ತರಹ ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆ ಹೆಚ್ಚಿರುವ ಬೆಂಗಳೂರಿನಲ್ಲಿ ಸಹ ಇಂತಹ ಪ್ರಯೋಗಗಳನ್ನು ನಡೆಸಿದ್ದು 2022ರಲ್ಲಿ RMZ Ecoworld ಮತ್ತು Outer Ring Road ಸಂಪರ್ಕಿಸುವ ರಸ್ತೆಯಲ್ಲಿ ಸುಮಾರು 3,000 ಕೆ.ಜಿ. ಮರುಬಳಕೆಯ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಿಸಲಾಗಿದೆ. ಈ ಯೋಜನೆಯಲ್ಲಿ ಸಾಂಪ್ರದಾಯಿಕ ಪ್ಲಾಸ್ಟಿಕ್-ಬಿಟುಮಿನ್ ವಿಧಾನಕ್ಕಿಂತ ವಿಭಿನ್ನವಾಗಿ ಮರುಬಳಕೆಯ ಪ್ಲಾಸ್ಟಿಕ್ ಆಧಾರಿತ ಕಾಂಕ್ರೀಟ್ ರಸ್ತೆ ತಂತ್ರವನ್ನು ಬಳಸಲಾಗಿದೆ.
ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಿಟುಮಿನ್ನೊಂದಿಗೆ ಬೆರೆಸಿ ರಸ್ತೆ ನಿರ್ಮಿಸುವ ಪ್ರಯೋಗಗಳೂ ಹಿಂದಿನಿಂದ ನಡೆದಿವೆ. ಕೆಲವು ಯೋಜನೆಗಳಲ್ಲಿ ಪ್ಲಾಸ್ಟಿಕ್ ಮತ್ತು ಬಿಟುಮಿನ್ ಅನ್ನು ನಿರ್ದಿಷ್ಟ ಅನುಪಾತದಲ್ಲಿ ಬಳಸುವ ವಿಧಾನ ಅನುಸರಿಸಲಾಗಿದೆ.
ಭಾರತದ ನಗರಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ ಎಲ್ಲವೂ ಸಾಂಪ್ರದಾಯಿಕವಾಗಿ ಮರುಬಳಕೆ ಮಾಡಲು ಸಾಧ್ಯವಿಲ್ಲ. ಇಂತಹ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ರಸ್ತೆ ನಿರ್ಮಾಣದಲ್ಲಿ ಬಳಸುವ ಪ್ರಯತ್ನಗಳು ಈ ನಿಟ್ಟಿನಲ್ಲಿ ಸಮರ್ಥ ರಸ್ತೆ ನಿರ್ಮಾಣಕ್ಕೆ ನೆರವಾಗುತ್ತವೆ.
ನಿರ್ಮಾಣಕ್ಕೆ ಬೇಕಾದಷ್ಟು ಕಚ್ಚಾ ವಸ್ತುಗಳ ಬೇಡಿಕೆ ಮತ್ತು ಪ್ಲಾಸ್ಟಿಕ್ ಮಾಲಿನ್ಯ-ಮೂಲದ ಸಮಸ್ಯೆಗಳನ್ನು ಒಂದೇ ಸಮಯದಲ್ಲಿ ಬಗೆಹರಿಸಬಹುದಾಗುತ್ತದೆ.
ಚೀನಾದ 6,000ಕ್ಕೂ ಹೆಚ್ಚು ಹಾಲಿನ ಬಾಟಲಿಗಳ ಪ್ರಯೋಗ, ಪುಣೆಯ ಪ್ಲಾಸ್ಟಿಕ್-ಬಿಟುಮಿನ್ ರಸ್ತೆ ಮತ್ತು ಬೆಂಗಳೂರಿನ ಹಲವು ಕಡೆಗಳ ಪ್ಲಾಸ್ಟಿಕ್ ರಸ್ತೆ ಪ್ರಯೋಗಗಳು ಒಂದು ಪ್ರಮುಖ ಸಾಧ್ಯತೆಯನ್ನು ನೀಡುತ್ತವೆ. ತ್ಯಾಜ್ಯವನ್ನು ರಸ್ತೆ ನಿರ್ಮಾಣದ ವಸ್ತುವನ್ನಾಗಿ ಪರಿವರ್ತಿಸುವುದು ಆರ್ಥಿಕ ಕಾರ್ಯದಕ್ಷತೆಯಾಗಿದೆ.
ಇದೀಗ ಅಗತ್ಯವಿರುವುದು ದೊಡ್ಡ ಪ್ರಮಾಣದ ಪ್ರಯೋಗಗಳಲ್ಲ; ವೈಜ್ಞಾನಿಕ ಪರೀಕ್ಷೆ, ಗುಣಮಟ್ಟದ ಮಾನದಂಡ, ದೀರ್ಘಾವಧಿಯ ಮೇಲ್ವಿಚಾರಣೆ ಮತ್ತು ಪರಿಸರದ ಪರಿಣಾಮಗಳ ಪರೀಕ್ಷೆ. ಪ್ರಯೋಗ ಯಶಸ್ವಿಯಾದರೆ ಬೆಂಗಳೂರಿನ ಸೇರಿದಂತೆ ಭಾರತದ ಮಹಾನಗರಗಳಲ್ಲಿ ರಸ್ತೆ ನಿರ್ಮಾಣ ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯಲ್ಲೂ ಹೊಸ ಅಧ್ಯಾಯ ಆರಂಭವಾಗಬಹುದು. ಈ ತ್ಯಾಜ್ಯ ಮರುಬಳಕೆಯ ಸಾಧ್ಯತೆಗಳನ್ನು ಮತ್ತಷ್ಟು ಬಳಸಿಕೊಳ್ಳುವುದು ಕಾಲು ನೋಡುವಂತೆ.
ಚೀನಾದ 6,000 ಬಾಟಲಿಗಳ ರಸ್ತೆ ಒಂದು ಕುತೂಹಲಕಾರಿ ಪ್ರಯೋಗವಾಗಿದ್ದರೂ, ಪುಣೆ ಮತ್ತು ಬೆಂಗಳೂರಿನ ಅದೇ ಕಲ್ಪನೆಯನ್ನು ಭಾರತೀಯ ಪರಿಸ್ಥಿತಿಯಲ್ಲಿ ಪರೀಕ್ಷಿಸುತ್ತಿರುವ ಪ್ರಯೋಗಾಲಯಗಳಾಗಿವೆ. ರಸ್ತೆ ಎಷ್ಟು ಬಾಳಿಕೆ ಬರುತ್ತದೆ ಎಂಬುದಷ್ಟೇ ಅಲ್ಲ-ಈ ಪ್ರಯೋಗಗಳು ನಮ್ಮ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಷ್ಟು ಸಮರ್ಥವಾಗಿ ನಿವಾರಿಸಬಲ್ಲವು ಎಂಬುದನ್ನು ಮುಂದಿನ ದಿನಗಳಲ್ಲಿ ಕಂಡುಕೊಳ್ಳಬೇಕಿದೆ.
