ತಂತ್ರಜ್ಞಾನಲೋಕದಲ್ಲಿ ದಿನಕ್ಕೊಂದು ಹೊಸ ಅವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಹೊಸ ಅಪರೇಟಿಂಗ್ ಸಿಸ್ಟಮ್ಗಳು ಮಾರುಕಟ್ಟೆಗೆ ಬಂದಾಗ ಹಳೆಯವು ಇತಿಹಾಸದ ಪುಟಗಳನ್ನು ಸೇರುತ್ತವೆ. ವಿಂಡೋಸ್ 95, ಕ್ಲಾಸಿಕ್ ಮ್ಯಾಕ್ ಓಎಸ್ ಅಥವಾ ಹಳೆಯ ಮೊಬೈಲ್ ಆಪರೇಟಿಂಗ್ ಆರಂಭಿಕ ಆ್ಯಂಡ್ರಾಯ್ಡ್ ಆವೃತ್ತಿಗಳನ್ನು ಸುಲಭದ ಮಾತಲ್ಲ. ಆದರೆ, ಕಂಪ್ಯೂಟರ್ ಇಡೀ ಪ್ರಯಾಣವನ್ನು ನಿಮ್ಮ ಕಣ್ಣೆದುರು ತರಲು ಡೆವಲಪರ್ ಒಬ್ಬರು ಅದ್ಭುತನಾದ ವರ್ಚುವಲ್ ಓಎಸ್ ಮ್ಯೂಸಿಯಂ ಒಂದನ್ನು ಸೃಷ್ಟಿಸಿದ್ದಾರೆ. 1948ರ ಜಗತ್ತಿನ ಮೊದಲ ಹಿಡಿದು ಆಧುನಿಕ ತಂತ್ರಜ್ಞಾನದವರೆಗಿನ ಇತಿಹಾಸವನ್ನು ಒಂದೇ ಸೂರಿನಡಿ ತಂದಿರುವ ಈ ಡಿಜಿಟಲ್ ಮ್ಯೂಸಿಯಂ ತಂತ್ರಜ್ಞಾನ ಆಸಕ್ತರ ಗಮನ ಸೆಳೆಯುತ್ತಿದೆ.
ಆ್ಯಂಡ್ರೂö್ಯ ವಾರ್ಕೆಂಟಿನ್ ಎಂಬ ಸಾಫ್ಟ್ವೇರ್ ಡೆವಲಪರ್ ಒಬ್ಬರು ಕಳೆದ ೨೦೦೩ರಿಂದ, ಎಂದರೆ ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಜಗತ್ತಿನ ವಿವಿಧ ಅಪರೂಪದ ಅಪರೇಟಿಂಗ್ ಸಿಸ್ಟಮ್ಗಳ ಎಮ್ಯುಲೇಟರ್ ಇಮೇಜ್ಗಳನ್ನು ಸಂಗ್ರಹಿಸುತ್ತಿದ್ದರು. ಇವೆಲ್ಲವನ್ನೂ ಕ್ರೋಡೀಕರಿಸಿ, ಅವರು ಒಂದು ಲಿನಕ್ಸ್ ವರ್ಚುವಲ್ ಮಷಿನ್ ರೂಪದಲ್ಲಿ ಪ್ಯಾಕೇಜ್ ಮಾಡಿದ್ದಾರೆ. ಇದನ್ನು ಯಾವುದೇ ಸಾಮಾನ್ಯ ಲ್ಯಾಪ್ಟಾಪ್ನಲ್ಲಿ ರನ್ ಮಾಡಬಹುದಾಗಿದ್ದು, ಇದರೊಳಗೆ ಬರೋಬ್ಬರಿ 1700ಕ್ಕೂ ಹೆಚ್ಚು ಪ್ರಿ-ಇನ್ಸ್ಟಾಲ್ಡ್ ಆಪರೇಟಿಂಗ್ ಸಿಸ್ಟಮ್ಗಳು ಅಡಗಿವೆ! ಇದರಲ್ಲಿ 250 ಕ್ಕೂ ಹೆಚ್ಚು ವಿಭಿನ್ನ ಹಾರ್ಡ್ ವೇರ್ ಪ್ಲಾಟ್ಫಾರ್ಮ್ಗಳಿಗೆ ಸೇರಿದ ೫೭೦ಕ್ಕೂ ಹೆಚ್ಚು ವಿಶಿಷ್ಟ ಓಎಸ್ಗಳನ್ನು ಗ್ರಾಹಕರು ಬಳಸಬಹುದಾಗಿದೆ.
ಈ ಮ್ಯೂಸಿಯಂನ ಅತ್ಯಂತ ಆಕರ್ಷಕ ಭಾಗವೆಂದರೆ ಇದರ ವ್ಯಾಪ್ತಿ, ಜಗತ್ತಿನ ಅತ್ಯಂತ ಮೊದಲ ಸಾಫ್ಟ್ವೇರ್ ಸಂಗ್ರಹಶಕ್ತಿಯುಳ್ಳ ಕಂಪ್ಯೂಟರ್ ಎಂದೇ ಪ್ರಸಿದ್ದಿಯಾಗಿರುವ 1948ರ ‘ಮ್ಯಾಂಚೆಸ್ಟರ್ ಬೇಬಿ’ಗೆ ಬರೆದಿದ್ದ ಸಾಫ್ಟ್ವೇರ್ನಿಂದ ಹಿಡಿದು, ಇತ್ತೀಚಿನ ಆರಂಭಿಕ ಆ್ಯಂಡ್ರಾಯ್ಡ್. ಮತ್ತು ಐಓಎಸ್ ವರೆಗಿನ ಓಎಸ್ಗಳು ಇದರಲ್ಲಿ ಲಭ್ಯವಿವೆ. ಡೆಸ್ಕ್ಟಾಪ್ ಮಾದರಿಯ ಗ್ರಾಫಿಕಲ್ ಯೂಸರ್ ಇಂಟರ್ಫೇಸ್ ಹೊಂದಿದ್ದ ಜಗತ್ತಿನ ಮೊದಲ ಓಎಸ್ ಎನ್ನಲಾದ ‘ಕೈರಾಕ್ಸ್ ಸ್ಟಾರ್ ಪೈಲಟ್ ಕೂಡ ಈ ಮನೆಯಂನಲ್ಲಿದೆ. ನಾವು ಸಾಮಾನ್ಯವಾಗಿ ಕೇಳಿರುವ ವಿಂಡೋಸ್ 1.0 ಆವೃತ್ತಿಯಿಂದ ಹಿಡಿದು ಮೈಕ್ರೋಸಾಫ್ಟ್ನ ಆರಂಭಿಕ ಲಾಂಗ್ಹಾರ್ನ್ ಬೆಟಾ ಆವೃತ್ತಿಗಳು, ಆಪಲ್ ಕ್ಲಾಸಿಕ್ ಮ್ಯಾಕ್ ಓಎಸ್, ಮ್ಯಾಕ್ ಓಎಸ್ ಎಕ್ಸ್, ೧೦.೫ ಪಿಸಿ ಹಾಗೂ ಬಿಓಎಸ್, ನೆಕ್ಸ್ಸ್ಟೆಪ್, ನ್ಯೂಟನ್ ಓಎಸ್ನಂತಹ ಪ್ರಮುಖ ಓಎಸ್ಗಳು ಇಲ್ಲಿವೆ. ಇದರೊಂದಿಗೆ ಟೆಂಪಲ್ ಓಎಸ್. ಪ್ಲಾನ್ ೯, ಕ್ಯೂಎನ್ಎಕ್ಸ್, ಪೆಂಟಾಲಿಸ್ಟ್, ಓವರಾನ್ನಂತಹ ವಿಚಿತ್ರ ಮತ್ತು ಅಪರೂಪದ ಅಪರೇಟಿಂಗ್ ಸಿಸ್ಟಮ್ಗಳೂ ಇಲ್ಲಿವೆ. ಹಳೆಯ ಮೈನ್ಫ್ರೇಮ್ ಯುಗದ ಸಿಟಿಎಸ್ಎಸ್, ಎಂವಿಎಸ್, ಮಲ್ಟಿಕ್ಸ್ ಮತ್ತು ಟಾಪ್ಸ್-10/20 ಸಾಫ್ಟ್ವೇರ್ಗಳನ್ನು ಕಣ್ಣುಂಬಿಕೊಳ್ಳಬಹುದು. ಹಳೆಯ ಹೋಮ್ ಕಂಪ್ಯೂಟರ್ ಪ್ರೇಮಿಗಳಿಗಾಗಿ ಬಿಬಿಸಿ ಮೈಕ್ರೋ, ಝಡ್ಎಕ್ಸ್ ಸ್ಪೆಕ್ಟ್ರಮ್, ಕೊಮೊಡೋರ್ 8-ಬಿಟ್ಸ್, ಎಂಎಸ್ಎಕ್ಸ್ ಹಾಗೂ ಅಟಾರಿ 8-ಬಿಟ್ ಕಂಪ್ಯೂಟರ್ಗಳ ಓಎಸ್ಗಳನ್ನು ಸಹ ಇದರಲ್ಲಿ ಜೋಡಿಸಲಾಗಿದೆ.
ಸಾಮಾನ್ಯವಾಗಿ ಹಳೆಯ ಅಪರೇಟಿಂಗ್ ಸಿಸ್ಟಮ್ ಒಂದನ್ನು ಇಂದಿನ ಕಂಪ್ಯೂಟರ್ನಲ್ಲಿ ರನ್ ಮಾಡಬೇಕೆಂದರೆ ಸಾಕಷ್ಟು ತಾಂತ್ರಿಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಎಮ್ಯುಲೇಟರನ್ನು ಹುಡುಕುವುದು. ಇನ್ಸ್ಟಾಲೇಶನ್ ಮೀಡಿಯಾ ಕಾನ್ನಿಗರ್ ಮಾಡುವುದು. ಹಾರ್ಡ್ವೇರ್ ಹೊಂದಾಣಿಕೆಗಳನ್ನು ಪರಿಶೀಲಿಸುವುದು ತುಂಬಾ ತಲೆನೋವಿನ ಕೆಲಸ. ಆದರೆ ಅಂಡೂ ವಾರ್ಕೆಂಟಿನ್ ಈ ಎಲ್ಲಾ ಕಠಿಣ ಕೆಲಸಗಳನ್ನು ತಾವೇ ನಿಭಾಯಿಸಿ ಬಳಕೆದಾರರಿಗೆ ಸಿದ್ಧ ರೂಪದಲ್ಲಿ ನೀಡಿದ್ದಾರೆ. ಬಳಕೆದಾರರು ಕೇವಲ ಲಾಂಚರ್ ಓಪನ್ ಮಾಡಿ, ತಮಗೆ ಬೇಕಾದ ಓಎಸ್ ಅನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿದರೆ ಸಾಕು, ಅದು ತಕ್ಷಣವೇ ರನ್ ಆಗುತ್ತದೆ. ಒಂದು ವೇಳೆ ಓಎಸ್ ಬಳಸುವಾಗ ಏನಾದರೂ ದೋಷ ಉಂಟಾದರೆ, ‘ಸ್ನ್ಯಾಪ್ ಶಾಟ್’ ವೈಶಿಷ್ಟ ಮೂಲಕ ಅದನ್ನು ಮೊದಲಿನ ಸ್ಥಿತಿಗೆ ತರಬಹುದು. ಈ ವರ್ಚುವಲ್ ವಾಷಿನ್ QEMU ವರ್ಚುವಲ್ ಬಾಕ್ಸ್ ಅಥವಾ UTM ನಂತಹ ಸಾಫ್ಟ್ವೇರ್ಗಳ ಮೇಲೆ ಚಲಿಸುತ್ತದೆ. ಹಾಗೂ ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್ ಬಳಕೆದಾರರಿಗೆ ಸೂಕ್ತವಾದ ಇನ್ಸ್ಟಾಲರ್ಗಳನ್ನು ಹೊಂದಿದೆ.
ಈ ವರ್ಚುವಲ್ ಮ್ಯೂಸಿಯಂ ನಿಮ್ಮ ಕಂಪ್ಯೂಟರ್ನಲ್ಲಿ ದೊಡ್ಡ ಮಟ್ಟದ ಜಾಗವನ್ನು ಕೇಳುತ್ತದೆ. ಇದರ ಸಂಪೂರ್ಣ ಆಫ್ಲೈನ್ ಆವೃತ್ತಿಯು ಜಿಪ್ ಮಾಡಿದಾಗ 121GB ಗಾತ್ರ ಹೊಂದಿದ್ದು, ಅದನ್ನು ಅನ್ಪ್ಯಾಕ್ ಮಾಡಿದಾಗ ಬರೋಬ್ಬರಿ 174GB ಜಾಗವನ್ನು ಅಕ್ರಮಿಸಿ ಕೊಳ್ಳುತ್ತದೆ. ಆದರೆ, ಎಲ್ಲರಿಗೂ ಇಷ್ಟು ದೊಡ್ಡ ಫೈಟ್ ಡೌನ್ಲೋಡ್ ಮಾಡಲು ಸಾಧ್ಯವಾಗದಿರಬಹುದು ಎಂಬ ಕಾರಣಕ್ಕೆ 14GB ‘ಲೈಟ್’ ಆವೃತ್ತಿಯನ್ನೂ ಬಿಡುಗಡೆ ಮಾಡಲಾಗಿದೆ. ಈ ಆವೃತ್ತಿಯಲ್ಲಿ ನೀವು ಮೊದಲಬಾರಿಗೆ ಇಂಟರ್ನೆಟ್ ಮೂಲಕ ಅಗತ್ಯ ಫೈಲ್ಗಳನ್ನು ಡೌನ್ ಲೋಡ್ ಮಾಡಿಕೊಳ್ಳುತ್ತದೆ. ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಈ ಪ್ರಾಜೆಕ್ಟ್ಗೆ ಕೆಲವು ಮಿತಿಗಳಿವೆ. ಪ್ರಸ್ತುತ ಈ ಹೋಸ್ಟ್ ವಿಎಂ ಕೇವಲ x86 ಪ್ರೊಸೆಸರ್ ಆಧಾರಿತ ಕಂಪ್ಯೂಟರ್ಗಳಿಗೆ ಮಾತ್ರ ಸೂಕ್ತವಾಗಿದೆ. ಹಾಗಾಗಿ, ಆಪಲ್ ಸಿಲಿಕಾನ್ (M1, M2 ಇತ್ಯಾದಿ) ಅಥವಾ ಎಆರ್ಎಮ್ ಪ್ರೊಸೆಸರ್ ಹೊಂದಿರುವ ಅಧುನಿಕ ಲ್ಯಾಪ್ಟಾಪ್ಗಳಲ್ಲಿ ಇದು ಸ್ವಲ್ಪ ನಿಧಾನವಾಗಿ ಚಲಿಸಬಹುದು. ಅಲ್ಲದೆ ಇದು ಪ್ರಾಥಮಿಕ ಬಿಡುಗಡೆಯಾಗಿರುವುದರಿಂದ, ಕೆಲವು ಓಎಸ್ಗಳು ಕೇವಲ ನಿರ್ದಿಷ್ಟ ಎಮ್ಯುಲೇಟರ್ ಬಿಲ್ಸ್ಗಳಲ್ಲಿ ಮಾತ್ರ ಕೆಲಸ ಮಾಡುತ್ತವೆ. ಮತ್ತೊಂದು ಮುಖ್ಯ ವಿಷಯವೆಂದರೆ, ಈ ಓಎಸ್ಗಳೊಂದಿಗೆ ಅವುಗಳು ಮೂಲತಃ ಬಿಡುಗಡೆಯಾದಾಗ ಇದ್ದ ಕ್ಯಾಲ್ಕುಲೇಟರ್, ಟೆಕ್ಸ್ಟ್ ಎಡಿಟಿರ್ನಂತಹ ಬೇಸಿಕ್ ಆ್ಯಪ್ಗಳು ಮಾತ್ರ ಸಿಗುತ್ತವೆ. ಹೆಚ್ಚುವರಿ ಅಪ್ಲಿಕೇಶನ್ಗಳು ಬೇಕಿದ್ದರೆ ಅವುಗಳನ್ನು ಹುಡುಕಿ ನಾವೇ ಇನ್ಸ್ಟಾಲ್ ಮಾಡಿಕೊಳ್ಳಬೇಕಿರುತ್ತದೆ. ಕಂಪ್ಯೂಟರ್ಲೋಕ ನಡೆದು ಬಂದ ಹಾದಿಯನ್ನು ತಿಳಿಯಲು ಬಯಸುವ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಮತ್ತು ಹಳೆಯ ನೆನಪುಗಳನ್ನು ಮೆಲುಕು ಹಾಕುವ ತಂತ್ರಜ್ಞಾನ ಪ್ರಿಯರಿಗೆ ಈ ‘ವರ್ಚುವಲ್ ಓಎಸ್ ಮ್ಯೂಸಿಯಂ’ ಅತ್ಯಮೂಲ್ಯ ನಿಧಿ.
(ಲೇಖನ ಕೃಪೆ : ಶ್ರೀಕೃಷ್ಣಭಟ್, ಪ್ರಜಾವಾಣಿ)
