ಬೆಂಗಳೂರು ಮೆಟ್ರೋ ಪ್ರಯಾಣ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಟಿಕೆಟ್ ವ್ಯವಸ್ಥೆಯಲ್ಲೂ ಮಹತ್ವದ ಸರಳೀಕರಣ ಕಂಡುಬರುತ್ತಿದೆ. ದೀರ್ಘ ಸಾಲುಗಳು, ಚಿಲ್ಲರೆ ಸಮಸ್ಯೆ, ಸಮಯ ವ್ಯರ್ಥ—ಇವೆಲ್ಲಕ್ಕೆ ಪರಿಹಾರವಾಗಿ ಮೆಟ್ರೋ ಆಡಳಿತವು ಪ್ರಯಾಣಿಕರಿಗೆ ಸುಲಭ, ವೇಗದ ಮತ್ತು ಪಾರದರ್ಶಕ ಟಿಕೆಟ್ ಆಯ್ಕೆಗಳನ್ನು ಪರಿಚಯಿಸಿದೆ.
ನಮ್ಮ ಮೆಟ್ರೊ ಪ್ರಯಾಣಿಕರಿಗೆ ಯಾವುದೇ ಆ್ಯಪ್ನಲ್ಲಿ ಟಿಕೆಟ್ ಖರೀದಿಸಲು ಅನುಕೂಲವಾಗುವಂತೆ ಮಾಡಲು ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ನೊಂದಿಗೆ (ಒಎನ್ಡಿಸಿ) ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್ (ಬಿಎಂಆರ್ಸಿಎಲ್) ಸಂಯೋಜನೆ ನಡೆಸಲಿದೆ.
ಪ್ರಸ್ತುತ ನಮ್ಮ ಮೆಟ್ರೊ ನಿಲ್ದಾಣಗಳಲ್ಲಿ ಪಾವತಿ ಮಾಡಿ ಟಿಕೆಟ್ ಖರೀದಿಸಲು, ಸ್ಮಾರ್ಟ್ಕಾರ್ಡ್ ಮೂಲಕ ಸಂಚರಿಸಲು, ವಾಟ್ಸ್ಆ್ಯಪ್ ಚಾಟ್ಬಾಟ್ ಹಾಗೂ ಪೇಟಿಎಂನಲ್ಲಿ ಟಿಕೆಟ್ ಖರೀದಿ ಮಾಡಲು ಅವಕಾಶವಿದೆ. ಒಎನ್ಡಿಸಿ ಜೊತೆಗೆ ಸಂಯೋಜನೆಯ ಬಳಿಕ ಟುಮ್ಯಾಕೊ, ರೆಡ್ಬಸ್, ಔಟ್ ಪಾಥ್, ಹೈವೇ ಡಿಲೈಟ್, ನಮ್ಮ ಯಾತ್ರಿ, ರ್ಯಾಪಿಡೊ ಸೇರಿದಂತೆ ಹತ್ತಕ್ಕೂ ಅಧಿಕ ಅಪ್ಲಿಕೇಶನ್ಗಳಲ್ಲಿ ಟಿಕೆಟ್ ಖರೀದಿಸಲು ಅವಕಾಶವಾಗಲಿದೆ.
ಈ ಯೋಜನೆಯು ಸಾರ್ವಜನಿಕ ಸಾರಿಗೆಗಳನ್ನು ಸಂಯೋಜಿಸುವ, ಪ್ರಯಾಣ ಸಂಪರ್ಕಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಪ್ರಯಾಣಿಕರು ಏಕೀಕೃತ ಡಿಜಿಟಲ್ ಪ್ಲಾಟ್ಫಾರ್ಮ್ ಮೂಲಕ ಮೆಟ್ರೊ ಟಿಕೆಟ್ಗಳನ್ನು ಖರೀದಿಸಲು, ಸ್ಮಾರ್ಟ್ಕಾರ್ಡ್ಗಳನ್ನು ರೀಚಾರ್ಜ್ ಮಾಡಲು, ಬಸ್ ಪಾಸ್ಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರ್ಯಾಪಿಡೊ, ನಮ್ಮ ಯಾತ್ರಿ ಆ್ಯಪ್ಗಳಲ್ಲಿ ಮೆಟ್ರೊ ಟಿಕೆಟ್ ಪರೀಕ್ಷೆ ನಡೆಸಲಾಗುತ್ತಿದೆ. ಬಹು ಆ್ಯಪ್ಗಳಲ್ಲಿ ಟಿಕೆಟ್ ಖರೀದಿಸುವುದರ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಇನ್ನು ಮೂರ್ನಾಲ್ಕು ತಿಂಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದಿದ್ದಾರೆ.

ಇತ್ತೀಚೆಗೆ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಸ್ವಯಂ ಟಿಕೆಟ್ ನೀಡುವ ಯಂತ್ರಗಳನ್ನು ಅಳವಡಿಸಲಾಗಿದೆ. ಇವು 30 ಸೆಕೆಂಡುಗಳಲ್ಲಿ ಟಿಕೆಟ್ಗಳನ್ನು ಒದಗಿಸುತ್ತಿರುವುದರಿಂದ ಪ್ರಯಾಣಿಕರ ದಟ್ಟಣೆ ವೇಳೆಯಲ್ಲಿ ಟಿಕೆಟ್ಗೆ ಉಂಟಾಗುವ ನೂಕುನುಗ್ಗಲು ತಪ್ಪಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಪರಿಚಯಿಸಲಾದ ಮೊಬೈಲ್ QR ಟಿಕೆಟ್ ವ್ಯವಸ್ಥೆ ಪ್ರಯಾಣಿಕರಲ್ಲಿ ವಿಶೇಷ ಮೆಚ್ಚುಗೆ ಪಡೆದಿದೆ. ಅಧಿಕೃತ ಮೆಟ್ರೋ ಅಥವಾ ಪಾವತಿ ಆ್ಯಪ್ಗಳ ಮೂಲಕ ಟಿಕೆಟ್ ಖರೀದಿಸಿ, ಮೊಬೈಲ್ನಲ್ಲಿ ಸಿಗುವ ಕಿಖ ಕೋಡ್ ಅನ್ನು ಗೇಟ್ನಲ್ಲಿ ಸ್ಕ್ಯಾನ್ ಮಾಡಿದರೆ ಸಾಕು. ಇದು ವಿಶೇಷವಾಗಿ ದೈನಂದಿನ ಪ್ರಯಾಣಿಕರು ಮತ್ತು ತುರ್ತು ಪ್ರಯಾಣ ಮಾಡುವವರಿಗೆ ಅನುಕೂಲಕರವಾಗಿದೆ. ಡಿಜಿಟಲ್ ಟಿಕೆಟ್ ವ್ಯವಸ್ಥೆಯಿಂದಾಗಿ ನಗದು ಬಳಕೆ ಕಡಿಮೆಯಾಗಿದ್ದು, ಪಾರದರ್ಶಕತೆ ಹೆಚ್ಚಾಗಿದೆ. ಜೊತೆಗೆ, ಕಾಗದ ಟಿಕೆಟ್ ಬಳಕೆ ಇಳಿಮುಖವಾಗಿರುವುದರಿಂದ ಪರಿಸರ ಸ್ನೇಹಿ ಕ್ರಮವಾಗಿಯೂ ಇದು ಗುರುತಿಸಲಾಗಿದೆ. ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಹಾಗೂ ಹೊಸ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲು ಮೆಟ್ರೋ ನಿಲ್ದಾಣಗಳಲ್ಲಿ ಸಹಾಯಕ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಮೆಟ್ರೋ ಆಡಳಿತದ ಪ್ರಕಾರ, ಮುಂದಿನ ದಿನಗಳಲ್ಲಿ ಒಂದು ಆ್ಯಪ್–ಒಂದು ಟಿಕೆಟ್ ಪರಿಕಲ್ಪನೆಯಡಿ ಬಸ್–ಮೆಟ್ರೋ ಸಂಯುಕ್ತ ಟಿಕೆಟ್ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆದಿದೆ. ಇದರಿಂದ ನಗರ ಸಾರಿಗೆ ಇನ್ನಷ್ಟು ಸುಗಮವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಒಟ್ಟಾರೆ, ಮೆಟ್ರೋ ಟಿಕೆಟ್ ವ್ಯವಸ್ಥೆಯ ಸರಳೀಕರಣ ಬೆಂಗಳೂರು ನಗರ ಸಾರಿಗೆಗೆ ಹೊಸ ಚೈತನ್ಯ ನೀಡಿದೆ. ವೇಗದ ಪ್ರಯಾಣ, ಸುಲಭ ಟಿಕೆಟ್ ಮತ್ತು ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳು—ನಗರವಾಸಿಗಳ ದಿನನಿತ್ಯದ ಬದುಕನ್ನು ಹಗುರಗೊಳಿಸುತ್ತಿವೆ.
